ಲಂಡನ್: ಆ್ಯಶಸ್ ಸರಣಿಯಲ್ಲಿ ಸತತ 3ನೇ ಶತಕದ ಹಾದಿಯಲ್ಲಿದ್ದ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಬೌನ್ಸರ್ ಹೊಡೆತ ಅನುಭವಿಸಿ ಕ್ರೀಸ್ ತೊರೆದ ಘಟನೆ ಸಂಭವಿಸಿದೆ. ಸ್ಮಿತ್ ಅವರಿಗೆ ಬಡಿದದ್ದು ಚೊಚ್ಚಲ ಟೆಸ್ಟ್ ಆಡುತ್ತಿದ್ದ ಜೋಫÅ ಆರ್ಚರ್ ಎಸೆತವಾಗಿತ್ತು.
ಪಂದ್ಯದ 4ನೇ ದಿನವಾದ ಶನಿವಾರ ಈ ದುರ್ಘಟನೆ ಸಂಭವಿಸಿತು. 92.4 ಮೈಲುಗಳ ವೇಗದಲ್ಲಿ ಧಾವಿಸಿ ಬಂದ ಎಸೆತವನ್ನು ತಪ್ಪಿಸುವ ಯತ್ನದಲ್ಲಿದ್ದಾಗ ಚೆಂಡು ಸ್ಮಿತ್ ಅವರ ತಲೆಗೆ ಬಡಿದಿದೆ. ಕೂಡಲೇ ಅವರು ಕುಸಿದು ಬಿದ್ದರು. ಕೆಲವು ನಿಮಿಷಗಳ ಕಾಲ ಅಂಗಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಆಸ್ಟ್ರೇಲಿಯ ತಂಡದ ವೈದ್ಯ ರಿಚರ್ಡ್ ಸಾ ಜತೆ ತನ್ನ ಸ್ಥಿತಿಯನ್ನು ಹೇಳಿಕೊಂಡ ಬಳಿಕ ಸ್ಮಿತ್ ನಿವೃತ್ತರಾಗಿ ಹೊರನಡೆದರು. ಆಗ ಆಸ್ಟ್ರೇಲಿಯ 6 ವಿಕೆಟಿಗೆ 203 ರನ್ ಮಾಡಿತ್ತು. ಸ್ಮಿತ್ 80 ರನ್ ಗಳಿಸಿದ್ದರು.ಬಳಿಕ ಚೇತರಿಸಿಕೊಂಡು ಬ್ಯಾಟಿಂಗಿಗೆ ಇಳಿದ ಸ್ಮಿತ್, 92 ರನ್ ಮಾಡಿ ಕ್ರಿಸ್ ವೋಕ್ಸ್ ಎಸೆತದಲ್ಲಿ ಲೆಗ್ ಬಿಫೋರ್ ಆದರು (161 ಎಸೆತ, 14 ಬೌಂಡರಿ).
ಇಂಗ್ಲೆಂಡಿನ 258 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬು ನೀಡಿದ ಆಸ್ಟ್ರೇಲಿಯ 250 ರನ್ನಿಗೆ ಆಲೌಟ್ ಆಗಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-258. ಆಸ್ಟ್ರೇಲಿಯ-250 (ಸ್ಮಿತ್ 92, ಖ್ವಾಜಾ 36, ಪೇನ್ 24, ಬ್ರಾಡ್ 65ಕ್ಕೆ 4, ವೋಕ್ಸ್ 61ಕ್ಕೆ 3, ಆರ್ಚರ್ 59ಕ್ಕೆ 2).