Advertisement

ಬಲ್ಬ್ ಆವಿಷ್ಕರಿಸಿದ್ದು ಎಡಿಸನ್‌ ಅಲ್ಲ !; ಜೋ ಬೈಡೆನ್‌ ವಿವಾದಿತ ಹೇಳಿಕೆ

12:43 AM Sep 05, 2020 | mahesh |

ಹೊಸದಿಲ್ಲಿ: ವಿದ್ಯುತ್‌ ಬಲ್ಬ್ ಆವಿಷ್ಕರಿಸಿದ್ದು ಒಬ್ಬ ಕಪ್ಪುವರ್ಣೀಯ ವ್ಯಕ್ತಿಯೇ ವಿನಾ ಎಡಿಸನ್‌ ಹೆಸರಿನ ಬಿಳಿ ವರ್ಣೀಯನಲ್ಲ! ಹೀಗೆಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿ, ಡೆಮಾಕ್ರಾಟ್‌ ಪಕ್ಷದ ಜೋ ಬೈಡೆನ್‌ ವಿವಾದದ ಕಿಡಿ ಹೊತ್ತಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರು­ವಂತೆಯೇ ಆಫ್ರಿಕನ್‌ ಅಮೆರಿಕನ್‌ ಮತದಾರರನ್ನು ಸೆಳೆಯುವ ಸಲುವಾಗಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.

Advertisement

ಗ್ರೇಸ್‌ ಲುಥೆರನ್‌ ಚರ್ಚ್‌ನಲ್ಲಿ ಮಾತನಾ­ಡಿದ ಬೈಡೆನ್‌, ನಾವು ಇತಿಹಾಸ ತರಗತಿಗಳಲ್ಲಿ ಇತಿಹಾಸವನ್ನು ಹೇಳಿಕೊಡುತ್ತಿಲ್ಲ. ಇದು ಏಕೆಂದೇ ಗೊತ್ತಾಗುತ್ತಿಲ್ಲ. ಲೈಟ್‌ ಬಲ್ಬ್ ಅಭಿವೃದ್ಧಿಪಡಿಸಿದ್ದು ಒಬ್ಬ ಕಪ್ಪುವರ್ಣೀಯ ವ್ಯಕ್ತಿ. ಅದನ್ನು ಶ್ವೇತವರ್ಣೀಯ ಎಡಿಸನ್‌ ಕಂಡು­ಹಿಡಿದಿದ್ದಲ್ಲ ಎಂದಿದ್ದಾರೆ. ಜತೆಗೆ, ಹಲವು ಶತಮಾನಗಳಿಂದಲೂ ನಡೆದು­ಕೊಂಡು ಬಂದ ವ್ಯವಸ್ಥಿತ ಜನಾಂಗೀಯ ನಿಂದನೆ­ಯನ್ನು ಎದುರಿಸಲು ನಾನು ಅಮೆರಿಕನ್ನರಿಗೆ ಸಹಾಯ ಮಾಡುತ್ತೇನೆ ಎಂದೂ ಹೇಳಿದ್ದಾರೆ.

ಬೈಡೆನ್‌ರಿಂದ ಈ ಹೇಳಿಕೆ ಹೊರಬರುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಥಾಮಸ್‌ ಎಡಿಸನ್‌ ಅವರೇ ಲೈಟ್‌ ಬಲ್ಬ್ ಕಂಡುಹಿಡಿದವರು. ಆ ಬಲ್ಬ್ ದೀರ್ಘ‌ಕಾಲ ಉರಿಯುವಂಥ ಫಿಲಮೆಂಟ್‌ ಅಭಿವೃದ್ಧಿಪಡಿಸಿದ್ದು ಕಪ್ಪುವರ್ಣೀಯರಾಗಿದ್ದ ಲೆವಿಸ್‌ ಲ್ಯಾಟಿಮರ್‌ ಎಂದು ಜಾಲತಾಣಿಗರು ಬರೆದುಕೊಂಡಿದ್ದಾರೆ.

ಟ್ರಂಪ್‌ ವಿವಾದ
ಇನ್ನೊಂದೆಡೆ, ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಮೊದಲ ವಿಶ್ವಯುದ್ಧದಲ್ಲಿ ಮಡಿದ ಅಮೆ­ರಿಕನ್‌ ಯೋಧರ ಸ್ಮಾರಕಕ್ಕೆ ತೆರಳಲು ನಿರಾಕರಿಸಿದ ಟ್ರಂಪ್‌, ‘ನಾನೇಕೆ ಅಲ್ಲಿಗೆ ಹೋಗಲಿ? ಯುದ್ಧದಲ್ಲಿ ಮಡಿದವರೆಲ್ಲ ಸೋತವರು ಮತ್ತು ಮೋಸ ಹೋದವರು’ ಎಂಬ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಇದು ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಟ್ರಂಪ್‌, ನಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next