ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷಗಿರಿಯ ಉಮೇದುವಾರರಾಗಿ ಕಣಕ್ಕಿಳಿದಿರುವ ಜೋ ಬಿಡೆನ್‌ಗೂ ಹಾಗೂ ಮುಂಬಯಿಗೂ ಏನಾದರೂ ಸಂಬಂಧವಿದೆಯೇ? ಈ ಪ್ರಶ್ನೆಯನ್ನು ಖುದ್ದು ಬಿಡೆನ್ ಅವರೇ ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾರೆ. ಅದಕ್ಕೆ ಕಾರಣ ಅವರಿಗೆ 48 ವರ್ಷಗಳ ಹಿಂದೆ ಮುಂಬಯಿನಿಂದ ಬಂದಿದ್ದ ಪತ್ರ! ಇದೇ ವಿಚಾರ ಆನಂತರ ಬಿಡೆನ್ ಫ್ರಂ ಮುಂಬಯಿ ಎಂಬ ಪರಿಕಲ್ಪನೆಗೆ ನಾಂದಿ ಹಾಡಿತಲ್ಲದೆ, ಖುದ್ದು ಬಿಡೆನ್ ಅವರಲ್ಲೂ ದೊಡ್ಡ ಕುತೂಹಲ ಹುಟ್ಟುಹಾಕಿತ್ತು. ಈಗ ಚುನಾವಣಾ ವೇಳೆ ಇದು ಮತ್ತೆ ಪ್ರಚಲಿತಕ್ಕೆ ಬಂದಿದೆ.
ಅದು 1972. ಜೋ ಬಿಡೆನ್ ಅವರು ತಮ್ಮ 29ನೇ ವಯಸ್ಸಿಗೆ ಡೆಲಾವೇರ್ ಪ್ರಾಂತ್ಯದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆಗ, ಮುಂಬಯಿನಿಂದ ಅವರಿಗೊಂದು ಪತ್ರ ಬಂದಿತ್ತು. ಪತ್ರವನ್ನು ಬರೆದವರ ಹೆಸರು ಕೂಡ ಬಿಡೆನ್ ಅಂತಲೇ. ಅದರಲ್ಲಿ ಜೋ ಬಿಡೆನ್ ಅವರ ಸಾಧನೆಗೆ ಶುಭಾಷಯ ಹೇಳಿದ್ದ ಆ ವ್ಯಕ್ತಿ, ತಮ್ಮ ಹೆಸರೂ ಕೂಡ ಬಿಡೆನ್ ಎಂದೂ, ತಾವಿಬ್ಬರೂ ಸಂಬಂಧಿಕರೆಂದು ಹೇಳಿದ್ದ. ಆದರೆ, ಯಾವ ರೀತಿಯ ಸಂಬಂಧ ಎಂಬುದನ್ನು ಹೇಳಿರಲಿಲ್ಲ.
ಈ ಪತ್ರ, ಬಿಡೆನ್ ಅವರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿತು. ಆನಂತರ ತಮ್ಮ ದೈನಂದಿನ ಜವಾಬ್ದಾರಿಗಳು, ಸಾರ್ವಜನಿಕ ಜೀವನ, ಮದುವೆ-ಸಂಸಾರ… ಇವುಗಳಲ್ಲೇ ಮುಳುಗಿ ಹೋದ ಬಿಡೆನ್ ಅವರಿಗೆ ಆ ಪತ್ರದ ಮೂಲ ಕೆದಕಲು ಆಗಲಿಲ್ಲ.
1993ರಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿದ್ದ ಬಿಡೆನ್, ಒಮ್ಮೆ ಮುಂಬಯಿಗೆ ಭೇಟಿ ನೀಡಿದ್ದಾಗ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾಡಿದ್ದ ಭಾಷಣದಲ್ಲಿ ಈ ವಿಚಾರ ಪ್ರಸ್ತಾವಿಸಿದ್ದರಲ್ಲದೆ, ಸಭಿಕರಲ್ಲಿ ಕುಳಿತಿದ್ದವರಲ್ಲಿ ಯಾರಿಗಾದರೂ ಈ ಪತ್ರದ ಬಗ್ಗೆ ಮಾಹಿತಿ ಇದ್ದರೆ ತಿಳಿಸಬೇಕೆಂದು ಕೋರಿದ್ದರು. ಅನಂತರ ತಿಳಿದ ಸತ್ಯವೇನೆಂದರೆ, ಅವರ ವಂಶದ ಮುತ್ತಾತನ ತಲೆಮಾರಿನ ವ್ಯಕ್ತಿಯೊಬ್ಬರು ಈಸ್ಟ್ ಇಂಡಿಯಾ ಕಂಪೆನಿಯ ಜತೆಗೆ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದ್ದು, ಅವರಲ್ಲೊಬ್ಬರು ತಾವು ಸೆನೆಟರ್ ಆಗಿದ್ದಾಗ ಪತ್ರ ಬರೆದಿದ್ದಿರಬಹುದು ಎಂದು ತರ್ಕಿಸಲಾಗಿತ್ತು.
ಟ್ರಂಪ್ ಟೀಕೆ: ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಡೆಮಾಕ್ರಟಿಕ್ ಪಕ್ಷ ಘೋಷಿಸಿರುವುದನ್ನು, ಆ ಪಕ್ಷದ ನಾಯಕ ಜೊ ಬಿಡೆನ್ ಒಪ್ಪಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಡೆಮಾಕ್ರಟಿಕ್ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ದಿನವಾದ ಗುರುವಾರ, ಬಿಡೆನ್ ಅವರು ತಮ್ಮ ಅಭ್ಯರ್ಥಿತನದ ಪ್ರಸ್ತಾವನೆಯನ್ನು ಸ್ವೀಕರಿಸಿರು ವುದಾಗಿ ಷೋಷಿಸಿದರು. ಅದನ್ನು ಟೀಕಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 47 ವರ್ಷಗಳಿಂದ ರಾಜಕೀಯದಲ್ಲಿರುವ ಬಿಡೆನ್ ಸಾಧನೆಯನ್ನೇನೂ ಮಾಡಿಲ್ಲ. ಅವರು ಈಗ ಮಾತಾಡುತ್ತಿರುವುದೆಲ್ಲಾ ಸುಳ್ಳು ಆಶ್ವಾಸನೆಗಳ ಗಂಟಷ್ಟೇ ಎಂದಿದ್ದಾರೆ.
ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿರು ವುದು ಮಹತ್ವದ ಮೈಲಿಗಲ್ಲು. ಅಮೆರಿಕದಲ್ಲಿ ಶತಮಾನಗಳಿಂದ ಇದ್ದರೂ ಮುಖ್ಯಸ್ತರಕ್ಕೆ ಬಾರದ ಅನೇಕ ಸಮುದಾಯಗಳಿಗೆ ಕಮಲಾ ಹ್ಯಾರಿಸ್ ದನಿಯಾಗುವ ನಿರೀಕ್ಷೆಯಿದೆ
ಪ್ರಮೀಳಾ ಜಯಗೋಪಾಲ್, ಅಮೆರಿಕ ಸಂಸದೆ