Advertisement

ಕಂಬಳಕ್ಕಾಗಿ ತುಳುನಾಡಿನ ಜನರ ಜತೆ ಕೈ ಜೋಡಿಸುತ್ತೇನೆ: ಡಾ|ಹೆಗ್ಗಡೆ

01:03 AM Jan 24, 2017 | |

ಕಂಬಳದಲ್ಲಿ ಹಿಂಸಾರೂಪವಿದ್ದರೆ ಅದರ ಪರಿವರ್ತನೆಗೆ ಸರಕಾರ, ನ್ಯಾಯಾಲಯ ಸೂಚಿಸಲಿ. ಇದಕ್ಕೆ  ತುಳುನಾಡಿನ ಜನತೆ ಖಂಡಿತವಾಗಿ ಒಪ್ಪಿಗೆ ಸೂಚಿಸುತ್ತಾರೆ. ಕಂಬಳದ ಮೇಲಿನ ನಿಷೇಧ ತೆರವುಗೊಳಿಸಬೇಕು. ಇದಕ್ಕಾಗಿ ನಾನು ತುಳುನಾಡ ಜನತೆಯ ಜತೆಗಿರುತ್ತೇನೆ.

Advertisement

ಬೆಳ್ತಂಗಡಿ: ಒಂದು ನಿಷೇಧ ಹಲವು ಅಡ್ಡ ಪರಿಣಾಮ ಬೀರಬಾರದು. ಆಧುನಿಕತೆಯ ಭರಾಟೆಯಲ್ಲಿ ಕೃಷಿಗಾಗಿ ಜಾನುವಾರು ಸಾಕುವುದು, ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿವೆ. ಜನಪದ ನಂಬಿಕೆಗಳಿಗೆ ಕಡಿವಾಣ ಬೀಳುತ್ತಿದೆ. ಹಿಂಸೆಯಾಗದಂತೆ ಬದಲಾವಣೆ ಸೂಚಿಸಲಿ, ಆಚರಣೆಯ ಮೇಲಿನ ನಿಷೇಧ ಸಂಸ್ಕೃತಿಯ ನಾಶಕ್ಕೆ ಕಾರಣವಾಗಬಾರದು. ಕಂಬಳದ ಉಳಿವಿಗಾಗಿ ನಾನು ತುಳುನಾಡಿನ ಜನರ ಜತೆ ಕೈ ಜೋಡಿಸುತ್ತೇನೆ. ಹೀಗೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಉದಯವಾಣಿ ಜತೆ ಸೋಮವಾರ ಕಂಬಳದ ಕುರಿತು ಮಾತುಗಳನ್ನು ಅವರು ಹಂಚಿಕೊಂಡದ್ದು ಹೀಗೆ- ಜನಪದೀಯವಾಗಿ ಪ್ರಾಣಿಗಳ ಜತೆಗಿನ ಆಟ ಪ್ರತಿ ಪ್ರದೇಶ, ಪ್ರತಿ ದೇಶದಲ್ಲೂ ಇದೆ. ಪ್ರಾದೇಶಿಕ ಹಿನ್ನೆಲೆ, ಜನಪದ ನಂಬಿಕೆ ಯಂತೆ ಅನೇಕ ಆಚರಣೆಗಳು ಅನಾದಿ ಕಾಲದಿಂದ ನಡೆದುಬಂದಿವೆ. ದೇಶದ ಎಲ್ಲ ಭಾಗಗಳಲ್ಲೂ ವೈವಿಧ್ಯಮಯವಾಗಿ ಹೋರಿ ಓಟದ ಸ್ಪರ್ಧೆ ಇದೆ.

ಪ್ರಾಣಿ ಮಾನವ ಸಂಬಂಧ: ಪ್ರಾಣಿಗಳ ಮೇಲಿನ ಕೃತಜ್ಞತಾ ಭಾವದಿಂದ ಕೃಷಿಕರು ಗೌರವ ಸಲ್ಲಿಸುವುದನ್ನು ನಿಶ್ಚಿತ ರೀತಿಯಲ್ಲಿ ಕಾಣಬಹುದು. ದೀಪಾವಳಿ ಮೊದಲಾದ ಸಂದರ್ಭ ಗೋವನ್ನು ಪೂಜಿಸುತ್ತೇವೆ. ಅಪಾಯಕಾರಿ ಪ್ರಾಣಿ ಯಿಂದ ತನಗೆ, ಕೃಷಿಗೆ, ದನಕರುಗಳಿಗೆ ಹಾನಿಯಾಗದಿರಲಿ ಎಂದು ಆರಾಧಿಸುವ ನಂಬಿಕೆ ಕೂಡ ಬೆಳೆದುಬಂದಿದೆ. ನಮ್ಮ ತುಳುನಾಡಿನಲ್ಲಿ ಭೂತಾರಾಧನೆ, ದೈವಾರಾಧನೆ ಮೂಲಕ ಪ್ರಾಣಿ ಆರಾಧನೆಯೂ ನಡೆಯುತ್ತದೆ.

ಸಂಪ್ರದಾಯ ಇದೆ: ಕೋಣಗಳನ್ನು ಓಟಕ್ಕೆ ಗದ್ದೆಗೆ ಇಳಿಸುವಾಗ ಸಂಪ್ರದಾಯ ಆಚರಿಸಲಾಗುತ್ತಿತ್ತು. ಒಳ್ಳೆಯ ದಿನ, ಸುಮುಹೂರ್ತ, ಕುಲದೇವರಿಗೆ, ಭೂಮಿಗೆ ಪೂಜೆ ನಡೆಸಿ ಕೋಣ ಓಡಿಸಲಾಗುತ್ತಿತ್ತು. ಒಂದೇ ಗದ್ದೆಯಲ್ಲಿ ಸ್ಪರ್ಧೆ ಇಲ್ಲದೇ ಕೇವಲ ಸಂತೋಷಕ್ಕಾಗಿ ಓಡುತ್ತಿದ್ದ ಕೋಣದ ಓಟ ಅನಂತರ ಎರಡು ಕರೆಗೆ ವಿಸ್ತಾರವಾಗಿ ಜೋಡುಕರೆ ಕಂಬಳವಾಗಿ ಸ್ಪರ್ಧಾಕಣವಾಯಿತು. ಹಾಗಿದ್ದರೂ ಮುದ್ದಾಗಿ ಸಾಕಿದ ಕೋಣಗಳನ್ನು ಯಾರೂ ಹಿಂಸಿಸುವುದಿಲ್ಲ. ಗೌರವ, ಪ್ರೀತಿಯಿಂದ ಮಾಲಕತ್ವದ ರಕ್ಷಣೆ ನೀಡುತ್ತಾರೆ.

Advertisement

ಪರಿವರ್ತನೆಯಿಂದಾಗಿ ಸ್ಪರ್ಧೆ: ಕಂಬಳದಲ್ಲಿ ನಡೆದ ಕೆಲವು ಪರಿವರ್ತನೆಗಳು ಸ್ಪರ್ಧೆಗೆ ಕಾರಣ. ಜಲ್ಲಿಕಟ್ಟು, ಬೆಂಕಿ ಹಾಯಿಸುವ ಸ್ಪರ್ಧೆ, ಕಂಬಳ ಸಾಂಪ್ರದಾಯಕವಾಗಿ ನಡೆದರೆ ಅದಕ್ಕೆ ಗೌರವ, ಬೆಲೆ ಇದೆ. ವಾಣಿಜ್ಯೀಕರಣವಾದಾಗ ಬದಲಾವಣೆಗಳಾಗುತ್ತವೆ. ಬಹುಮಾನ, ಪ್ರಶಸ್ತಿ, ಗೌರವಕ್ಕಾಗಿ ನಾನಾ ರೀತಿಯ ಪ್ರಚೋದನೆ ಅನಂತರ ಹಿಂಸಾರೂಪಕ್ಕೂ ತಿರುಗಿತು. ಜತೆಗೆ ನಡೆದು ಬಂದಿದ್ದ ಸಾಂಪ್ರದಾಯಿಕ ಆಚರಣೆಗಳು ಮರೆಯಾದವು. ದೈವಿಕ ಸ್ವರೂಪದ ಆರಾಧನೆಯ ಅಂಗವಾಗಿ ನಡೆಯುತ್ತಿದ್ದ ಕಂಬಳಗಳ ಸ್ವರೂಪ ಸ್ಪರ್ಧಾಕಣವಾಯಿತು. ಪಾವಿತ್ರ್ಯದ ಹಿನ್ನೆಲೆ ಕಾಣೆಯಾಯಿತು. ಯುವಜನತೆಯಂತೂ ಕೇವಲ ಮಜಾ, ಮೋಜು, ಮಸ್ತಿಯ ದೃಷ್ಟಿಯಿಂದಲೇ ಕಂಡರು. ಅನುಭವದ ಕೊರತೆ, ಪೂರ್ವತಯಾರಿ ಇಲ್ಲದಿರುವುದು, ಹಿರಿಯರಿಗೆ ಗೌರವ ಕೊಡದೇ ಸಂಪ್ರದಾಯ ಬಿಟ್ಟು, ಧಾರ್ಮಿಕ ಸ್ಪರ್ಶ ಇಲ್ಲದೇ ಕೇವಲ ಮೋಜಿನಾಟವಾಗಿ ನಡೆಸಿದಾಗ ಕಂಬಳ ನಿಷೇಧದ ಬಲಿಪೀಠಕ್ಕೆ ತಲೆಯೊಡ್ಡಬೇಕಾಯಿತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಸಂಪ್ರದಾಯಕ್ಕಾಗಿ ಬೇಕು: ಸಂಪ್ರದಾಯಕ್ಕಾಗಿ ಜಲ್ಲಿಕಟ್ಟು ಬೇಕು ಎಂಬ ವಾದದಲ್ಲಿ ಸಾಂಪ್ರದಾಯಿಕ, ಧಾರ್ಮಿಕ ಹಿನ್ನೆಲೆಯಿದೆ. ಅದು ಅಪಾಯಕಾರಿಯಾಗುವುದು ಆಧುನಿಕ ಹಿನ್ನೆಲೆಯಲ್ಲಿ ನಡೆದಾಗ. ಎತ್ತುಗಳನ್ನು ಬೆಂಕಿ ಹಾಯಿಸುವಲ್ಲಿ ಸ್ಪರ್ಧೆಗಾಗಿ ಬೆಂಕಿಯ ಮಿತಿ ಹೆಚ್ಚಿಸಿದಾಗ ಮತ್ತು  ಕಂಬಳದಲ್ಲೂ ಸ್ಪರ್ಧೆಗಾಗಿ ಹೊಡಿಬಡಿ ಕ್ರಮ ಆರಂಭವಾಗುವುದು ಅಪಾಯಕಾರಿ ಲಕ್ಷಣ.  ಕ್ರಿಕೆಟ್‌ ನೋಡುಗರಲ್ಲೂ ಎರಡು ವಿಧ. ಆಟವನ್ನು ಆನಂದಮಯವಾಗಿ ಆಸ್ವಾದಿಸುತ್ತಾ ಅನುಭವಿಸುವ ವರ್ಗ ಒಂದಾದರೆ ತಾವು ಇಚ್ಛಿಸಿದ ತಂಡದ ಗೆಲುವಿಗೆ ಹಪಹಪಿಸಿ ಜೂಜು ಕಟ್ಟುವುದು ಇನ್ನೊಂದು ವರ್ಗ. ಇದರಿಂದಾಗಿ ಕ್ರೀಡೆಗೆ ಅನಿವಾರ್ಯ, ಅರಿವಿಲ್ಲದಂತೆ ಒತ್ತಡಗಳು ಬೀಳುತ್ತವೆ. ಇದು ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಪ್ರತಿಬಿಂಬಿಸುತ್ತವೆ.

ಹಿಂಸೆರಹಿತಕ್ಕೆ ಅನುಮತಿ ನೀಡಲಿ: ಸರಕಾರ, ನ್ಯಾಯಾಲಯ ಕಂಬಳದಲ್ಲಿ ಹಿಂಸಾರೂಪವಿದ್ದರೆ ಅದರ ಪರಿವರ್ತನೆಗೆ ಸೂಚಿಸಲಿ. ಇದಕ್ಕೆ ಖಂಡಿತವಾಗಿ ನಮ್ಮ ತುಳುನಾಡಿನ ಜನತೆ ಒಪ್ಪಿಗೆ ಸೂಚಿಸುತ್ತಾರೆ. ಈಗಾಗಲೇ ಆಧುನಿಕ ಯಂತ್ರಗಳ ಭರಾಟೆಯಿಂದಾಗಿ ಕೃಷಿಗಾಗಿ ಜಾನುವಾರು ಸಾಕಣೆ ಕಡಿಮೆಯಾಗಿದೆ. ಹೋರಿ, ಕೋಣಗಳನ್ನು ಸಾಕುವುದರ ಹಿಂದಿನ ಪರಿಶ್ರಮ, ವೆಚ್ಚ, ಕಾರ್ಮಿಕರ ಕೊರತೆ ಗಮನಿಸಿದರೆ ಜಾನುವಾರು ಸಾಕಣೆ ನಿಂತೇ ಹೋಗಬಹುದು. ಈ ಅಂಶಗಳನ್ನು ಕೂಡ ಗಮನದಲ್ಲಿರಿಸಿ ತುಳುನಾಡ ಜನತೆಯ ಕೋರಿಕೆ ಮನ್ನಿಸಬೇಕು. ಕಂಬಳಕ್ಕೆ ಈಗ ಇರುವ ನಿಷೇಧ ತೆರವುಗೊಳಿಸಿ ಅನುಮತಿ ನೀಡಬೇಕು. ಇದಕ್ಕಾಗಿ ನಾನು ತುಳುನಾಡ ಜನತೆಯ ಜತೆಗಿರುತ್ತೇನೆ ಎಂದು ಡಾ| ಹೆಗ್ಗಡೆ ಹೇಳಿದರು.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next