Advertisement

ಇಂದು ಕಾಂಗ್ರೆಸ್‌ಗೆ ಜಾಧವ ರಾಜೀನಾಮೆ?

06:23 AM Jan 24, 2019 | |

ಕಲಬುರಗಿ: ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಕ್ಕೆ ಹಾಗೂ ಕ್ಷೇತ್ರದಲ್ಲಿ ಹೇಳಿದ ಕೆಲಸಗಳು ಆಗುತ್ತಿಲ್ಲ ಎಂದು ಮುನಿಸಿಕೊಂಡು 10 ದಿನಗಳಿಂದ ಚಿಂಚೋಳಿ ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ಡಾ| ಉಮೇಶ ಜಾಧವ ಜ.24ರಂದು ಪ್ರತ್ಯಕ್ಷರಾಗಲಿದ್ದು, ಗುರುವಾರವೇ ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.

Advertisement

ಕಾಂಗ್ರೆಸ್‌ ಪಕ್ಷದಿಂದ ಈಗಾಗಲೇ ಬಹುದೂರ ಹೋಗಿರುವ ಜಾಧವ, ಗುರುವಾರ ಕಾಳಗಿ ತಾಲೂಕು ಬೆಡಸೂರಿನಲ್ಲಿ ನಡೆಯುವ ತಮ್ಮ ತಂದೆ ಗೋಪಾಲದೇವ್‌ ಜಾಧವ ಅವರ 36ನೇ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲಿದ್ದು, ಇದೇ ವೇಳೆ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ ಬಿಜೆಪಿ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಗುರುವಾರ ಬೆಳಗ್ಗೆಯೇ ಮುಂಬೈ ಬಿಟ್ಟು ಕಲಬುರಗಿಯತ್ತ ಶಾಸಕರು ಹೊರಟಿದ್ದು, ಮಧ್ಯರಾತ್ರಿ ಕಲಬುರಗಿಗೆ ಬಂದು ತದನಂತರ ಚಿಂಚೋಳಿ ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. 10 ದಿನಗಳ ಕಾಲ ಮುಂಬೈನಲ್ಲಿದ್ದ ಜಾಧವ ಅವರನ್ನು ಮುಂಬೈನಲ್ಲಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸುಮಾರು 15 ಸಾವಿರ ಜನರು ಭೇಟಿಯಾಗಿದ್ದಾರೆ. ಚಿಂಚೋಳಿ ಕ್ಷೇತ್ರದ ಹಲವು ಜನರು ಉದ್ಯೋಗ ಕಲ್ಪಿಸಿಕೊಂಡು ಮುಂಬೈನಲ್ಲಿದ್ದಾರೆ. ಇನ್ನು ಡಿಸೆಂಬರ್‌ ನಂತರ 6 ತಿಂಗಳು ಕಾಲ ಸಾವಿರಾರು ಜನರು ಕೂಲಿ ಅರಸಿ ಮುಂಬೈಗೆ ಹೋಗುತ್ತಾರೆ. ಹೀಗೆ ಹೋದವರು ಶಾಸಕರನ್ನು ಭೇಟಿಯಾದರೆ ಇನ್ನೂ ಕೆಲವರನ್ನು ಶಾಸಕರೇ ಅವರಿದ್ದಲ್ಲಿಯೇ ಹೋಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಮುಂದಿನ ಬೆಳವಣಿಗೆ ಹಾಗೂ ನಿರ್ಧಾರ ಕುರಿತಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಶಾಸಕ ಡಾ.ಉಮೇಶ ಜಾಧವ ಅವರು ವಾಪಸ್‌ ಬರಲು ಉದ್ದೇಶಿಸಿದ್ದಾರೆ. ಆದರೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕಲಬುರಗಿ ನಗರದಲ್ಲಿರುವ ಅವರ ಮನೆ ಎದುರು ಕುದುರೆಯೊಂದಿಗೆ ಪ್ರತಿಭಟನೆ ಮಾಡಿದ್ದರಿಂದ ಶಾಸಕರು ತೀವ್ರವಾಗಿ ನೊಂದಿದ್ದಾರೆ ಎನ್ನಲಾಗಿದೆ. ಶಾಸಕರು ಚಿಂಚೋಳಿಗೆ ಬರುತ್ತಾರೆ. ಆದರೆ ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದಾಗಿದೆ ಎಂದು ಅವರ ಸಹೋದರ ರಾಮಚಂದ್ರ ಜಾಧವ ‘ಉದಯವಾಣಿ’ಗೆ ಖಚಿತಪಡಿಸಿದ್ದಾರೆ. ಜ.25ರಂದು ಕ್ಷೇತ್ರದ ಮತದಾರರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಮರುದಿನ ಗಣರಾಜ್ಯೋತ್ಸದಲ್ಲಿ ಭಾಗವಹಿಸಿ ಮುಂದಿನ ನಡೆ ಬಗ್ಗೆ ಹೇಳಲಿದ್ದಾರೆ ಎಂದು ಮತ್ತೂಂದು ನಿಟ್ಟಿನಲ್ಲಿ ವಿಶ್ಲೇಷಿಸಲಾಗುತ್ತಿದೆ.

ಬೆಡಸೂರ ತಾಂಡಾದಲ್ಲಿ ಉಮೇಶ ತಂದೆ ಪುಣ್ಯಸ್ಮರಣೆ
ಚಿಂಚೋಳಿ:
ಸಚಿವ ಸ್ಥಾನ ಸಿಗದಿರುವ ಹಾಗೂ ಅಧಿಕಾರಿಗಳ ವರ್ಗಾವಣೆ ಕಾರಣದಿಂದಾಗಿ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ವಿರುದ್ಧ ಮುನಿಸಿಕೊಂಡಿರುವ ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಬೆಡಸೂರ ತಾಂಡಾಕ್ಕೆ ಗುರುವಾರ ಬೆಳಗ್ಗೆ ಆಗಮಿಸಿ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರುವ ಕುರಿತು ಚರ್ಚೆ ನಡೆಸಲಿದ್ದಾರೆ ಎಂಬ ಮಾತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಂದ ಕೇಳಿ ಬಂದಿದೆ. ಕಳೆದ ಒಂದು ವಾರದಿಂದ ಮುಂಬೈ ನಗರದಲ್ಲಿ ಬೀಡು ಬಿಟ್ಟಿದ ಶಾಸಕರು ತಮ್ಮ ತಂದೆ ಗೋಪಾಲದೇವ ಲಕ್ಷ್ಮಣ ಜಾಧವ ಅವರ 36ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜ. 24ರಂದು ಬೆಳಗ್ಗೆ 10:00ಕ್ಕೆ ನಡೆಯಲಿದ್ದ, ಕಾರ್ಯ ಕ್ರಮದಲ್ಲಿ ಭಾಗವಹಿಸಲು ಮುಂಬೈನಿಂದ ನೇರವಾಗಿ ಕಲಬುರಗಿ ನಗರದಲ್ಲಿರುವ ಮನೆಗೆ ಬುಧವಾರ ರಾತ್ರಿ ಬಂದು ವಾಸ್ತವ್ಯ ಮಾಡಿ ಗುರುವಾರ ಬೆಳಗ್ಗೆ ಬೆಡಸೂರ ತಾಂಡಾಕ್ಕೆ ತೆರಳಿದ್ದಾರೆ ತಿಳಿದು ಬಂದಿದೆ.

Advertisement

ಚಿಂಚೋಳಿ ಮತಕ್ಷೇತ್ರದಿಂದ ಸತತ ಎರಡು ಸಲ ಅತಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದ್ದರು ಸಹ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮನ ನೊಂದು ತಮ್ಮ ಮೊಬೈಲ್‌ ಸ್ವಿಚ್ ಆಪ್‌ ಮಾಡಿ ಮುಂಬೈ ನಗರದಲ್ಲಿ ಕಳೆದ ಒಂದು ವಾರದಿಂದ ಬೀಡು ಬಿಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂದು ವದಂತಿ ಹರಡಿವೆ. ಹಾಗೆಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಗೆ ಅನಾರೋಗ್ಯ ಕಾರಣ ತೋರಿಸಿ ಬರಲು ಸಾಧ್ಯವಿಲ್ಲ ಎಂದು ಫ್ಯಾಕ್ಸ್‌ ಮೂಲಕ ಪತ್ರ ರವಾನಿಸಿದ್ದರು. ಗುರುವಾರ ಬೆಡಸೂರ ತಾಂಡಾಕ್ಕೆ ಭೇಟಿ ನೀಡಲಿರುವ ಶಾಸಕರು ಅಲ್ಲಿಯೇ ತಮ್ಮ ಮುಂದಿನ ನಡೆ ಪ್ರಕಟಿಸಲಿದ್ದಾರೆ. ಅಲ್ಲದೇ ಕೆಲವು ಹಿರಿಯ ಕಾಂಗ್ರೆಸ್‌ ಮುಖಂಡರನ್ನು ಹಾಗೂ ಬಂಜಾರ ಸಮಾಜದ ಹಿರಿಯ ಮುಖಂಡರನ್ನು ಅಲ್ಲಿಗೆ ಕರೆಯಿಸಿ ಮಾತುಕತೆ ನಡೆಸಲಿದ್ದಾರೆ. ಹಾಗಾಗಿ ಶಾಸಕರ ಬೆಡಸೂರ ತಾಂಡಾದ ಭೇಟಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next