Advertisement

“ಜೋಡೆತ್ತು’, “ಎಲ್ಲಿದ್ದೀಯಪ್ಪ’, “ನಿಖಿಲ್‌ ಎಲ್ಲಿದ್ದೀಯಪ್ಪ’ಟೈಟಲ್‌ ಸಿಕ್ತು

09:14 AM May 16, 2019 | Lakshmi GovindaRaj |

ಲೋಕಸಭೆ ಚುನಾವಣೆ ವೇಳೆ ಹೆಚ್ಚು ಕುತೂಹಲ ಕೆರಳಿಸಿದ್ದು, ಈಗಲೂ ಕೆರಳಿಸಿರೋದು ಮಂಡ್ಯ ಕ್ಷೇತ್ರ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಅಲ್ಲಿ ಜೋರಾಗಿ ಸದ್ದು ಮಾಡಿದ “ನಿಖಿಲ್‌ ಎಲ್ಲಿದ್ದೀಯಪ್ಪ’ ಮತ್ತು “ಜೋಡೆತ್ತು’ ಮಾತುಗಳು. ಅತೀ ಹೆಚ್ಚು ಕೇಳಲ್ಪಟ್ಟ ಈ ಪದಗಳೀಗ ಸಿನಿಮಾ ಶೀರ್ಷಿಕೆಗಳಾಗಿವೆ ಎಂಬುದೇ ಈ ಹೊತ್ತಿನ ವಿಶೇಷ.

Advertisement

ಹೌದು, “ಜೋಡೆತ್ತು’ ಮತ್ತು “ನಿಖಿಲ್‌ ಎಲ್ಲಿದ್ದೀಯಪ್ಪ’ ಶೀರ್ಷಿಕೆಗಳು ನೋಂದಣಿಯಾಗಿವೆ. ಅಷ್ಟೇ ಅಲ್ಲ, ಆ ಶೀರ್ಷಿಕೆಯಡಿ ಸಿನಿಮಾ ಮಾಡಲು ನಿರ್ಮಾಪಕರೂ ತಯಾರಾಗಿದ್ದಾರೆ. ಆ ಕುರಿತು “ಜೋಡೆತ್ತು’ ಶೀರ್ಷಿಕೆಯನ್ನು ತಮ್ಮ ಬ್ಯಾನರ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ನಿರ್ಮಾಪಕ ಎಂ.ಜಿ.ರಾಮಮೂರ್ತಿ “ಉದಯವಾಣಿ’ ಜೊತೆ ಮಾತನಾಡಿ, ಹೇಳಿದ್ದಿಷ್ಟು.

“ನಾನು ಈಗಾಗಲೇ “ಜೋಡೆತ್ತು’ ಎಂಬ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದೇನೆ. ಅದಕ್ಕೂ ಮೊದಲು, ನಿರ್ಮಾಪಕ ಎ.ಗಣೇಶ್‌ ಅವರು ಸಹ ಅವರ ಬ್ಯಾನರ್‌ನಲ್ಲಿ “ಎಲ್ಲಿದ್ದೀಯಪ್ಪ’ ಎಂಬ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದರು. ಆ ವಿಷಯ ಹೊರಬರುತ್ತಿದ್ದಂತೆಯೇ, “ಜೋಡೆತ್ತು’ ಶೀರ್ಷಿಕೆಯೂ ನೋಂದಣಿ ಆಗಿರುವ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ.

ಸದ್ಯಕ್ಕೆ “ಜೋಡೆತ್ತು’ ಶೀರ್ಷಿಕೆ ಪಕ್ಕಾ ಆಗಿದೆ. ಕಥೆ ಈಗಷ್ಟೇ ರೆಡಿಯಾಗಬೇಕಿದೆ. ಒಂದು ವೇಳೆ, ಕಥೆ ಚೆನಾಗಿದ್ದು, ದರ್ಶನ್‌ ಅವರು ಶೀರ್ಷಿಕೆ ಹಾಗೂ ಕಥೆ ಒಪ್ಪಿದರೆ “ಜೋಡೆತ್ತು’ ಚಿತ್ರ ಶುರುವಾಗಲಿದೆ. ಇನ್ನು, ಚಿತ್ರದಲ್ಲಿ ದರ್ಶನ್‌ ಜೊತೆ ಯಾರು ಇರಬೇಕು ಎಂಬುದನ್ನೂ ಇನ್ನು ನಿರ್ಧರಿಸಿಲ್ಲ. ದರ್ಶನ್‌ ಅವರು ಮೊದಲು ಒಪ್ಪಬೇಕು.

ಆ ಬಳಿಕ ಯಾರು ಇರಬೇಕು ಎಂಬ ಬಗ್ಗೆ ಸ್ಪಷ್ಟನೆ ಸಿಗಲಿದೆ. ದರ್ಶನ್‌ ಅವರಿಗಿನ್ನೂ “ಜೋಡೆತ್ತು’ ಶೀರ್ಷಿಕೆ ಬಗ್ಗೆ ಗೊತ್ತಿಲ್ಲ. ಶೀರ್ಷಿಕೆಯಲ್ಲಿ ಫೋರ್ಸ್‌ ಇದೆ ಮತ್ತು ಹೆಚ್ಚು ಬಳಕೆಯಾದ ಪದ ಎಂಬ ಕಾರಣಕ್ಕೆ ನೋಂದಣಿ ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಎಲ್ಲವೂ ಸ್ಪಷ್ಟತೆ ಸಿಗಲಿದೆ’ ಎನ್ನುತ್ತಾರೆ ನಿರ್ಮಾಪಕ ಎಂ.ಜಿ.ರಾಮಮೂರ್ತಿ.

Advertisement

ಇನ್ನು, ನಿರ್ಮಾಪಕ ಎ.ಗಣೇಶ್‌ ಅವರು ತಮ್ಮ ಬ್ಯಾನರ್‌ನಲ್ಲಿ “ಎಲ್ಲಿದ್ದೀಯಪ್ಪ’ ಎಂಬ ಶೀರ್ಷಿಕೆ ನೋಂದಣಿ ಮಾಡಿಸಿದ್ದಾರೆ. ಆದರೆ, ಆ ಚಿತ್ರಕ್ಕೆ ನಿರ್ದೇಶಕ, ನಾಯಕ ಯಾರೆಂಬುದು ಗೊತ್ತಿಲ್ಲ. ಹೆಸರಷ್ಟೇ ಸುದ್ದಿಯಲ್ಲಿದೆ. ಅತ್ತ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಅವರು ಸಹ ತಮ್ಮ ಚೇಂಬರ್‌ನಲ್ಲಿ ಮತ್ತು ಅವರದೇ ಬ್ಯಾನರ್‌ನಲ್ಲಿ “ನಿಖಿಲ್‌ ಎಲ್ಲಿದ್ದೀಯಪ್ಪ’ ಶೀರ್ಷಿಕೆ ನೋಂದಾಯಿಸಿದ್ದಾರೆ.

ಈ ಚಿತ್ರಕ್ಕೂ ಈಗಷ್ಟೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆಯಂತೆ. ಆ ಕುರಿತು ಹೇಳಿಕೊಳ್ಳುವ ಕೃಷ್ಣೇಗೌಡರು, “ಒನ್‌ಲೈನ್‌ ಸ್ಟೋರಿ ಇಟ್ಟುಕೊಂಡು ಚಿತ್ರ ಮಾಡಲು ನಿರ್ಧರಿಸಿದ್ದೇನೆ. ಇಲ್ಲಿ ಚುನಾವಣೆ ಸಮಯದಲ್ಲಿ ನಡೆದ ಘಟನೆಗಳು ಸೇರಿದಂತೆ ತೆರೆಮರೆಯಲ್ಲಿ ನಡೆದ ಅನೇಕ ವಿಷಯಗಳೂ ಇಲ್ಲಿರಲಿವೆ. ಚಿತ್ರದಲ್ಲಿ ಭಾ.ಮ.ಹರೀಶ್‌ ಅವರು ಮಾಜಿ ಸಿಎಂ ಪಾತ್ರ ನಿರ್ವಹಿಸಲಿದ್ದಾರೆ.

ಉಳಿದಂತೆ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಇನ್ನು ಸ್ವಲ್ಪ ದಿನ ಕಾಯಬೇಕು. ಇನ್ನು, “ನಿಖಿಲ್‌ ಎಲ್ಲಿದ್ದೀಯಪ್ಪ’ ಎಂದು ಎಲ್ಲೆಡೆ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸಚಿವ ಸಾ.ರಾ.ಮಹೇಶ್‌ ಅವರು ಈ ಹೆಸರಲ್ಲಿ ಸಿನಿಮಾ ಸೆಟ್ಟೇರಿದರೆ, ನಾನು ನಟನೆ ಮಾಡ್ತೀನಿ ಅಂತ ಹೇಳಿಕೆ ನೀಡಿದ್ದರು. ಇಷ್ಟರಲ್ಲೇ ಅವರನ್ನು ಭೇಟಿ ಮಾಡಿ ಕಥೆ, ಪಾತ್ರ ಬಗ್ಗೆ ವಿವರಿಸುವುದಾಗಿ’ ಹೇಳುತ್ತಾರೆ ಅವರು.

ಚಿತ್ರ ರಾಜಕೀಯ ಹಿನ್ನೆಲೆಯಲ್ಲಿ ನಡೆಯಲಿದ್ದು, ಹಾಸ್ಯದ ಜೊತೆಗೊಂದು ಸಂದೇಶವೂ ಇದೆ. ಯುವ ಪೀಳಿಗೆ ಮತ್ತು ಸಮಾಜದ ನಡುವಿನ ಕಥೆ ಇಲ್ಲಿರಲಿದೆಯಂತೆ. “ಇದು ಯಾರ ಘನತೆಗೂ ಧಕ್ಕೆ ತರುವಂತಹ ಸಿನಿಮಾವಲ್ಲ. ಸದ್ಯಕ್ಕೆ ಸ್ಕ್ರಿಪ್ಟ್ ನಡೆಯುತ್ತಿದೆ.

ಇಲ್ಲೂ ಮೂರು ಹಾಡುಗಳಿವೆ. ತಂತ್ರಜ್ಞರು ಮತ್ತು ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಸದ್ಯ “ನಿಗರ್ವ’ ಚಿತ್ರ ಪೂರ್ಣಗೊಂಡಿದ್ದು, ಆ ಮಧ್ಯೆ ಇನ್ನೊಂದು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅದಾದ ಬಳಿಕ “ನಿಖಿಲ್‌ ಎಲ್ಲಿದ್ದೀಯಪ್ಪ’ ಚಿತ್ರ ಕೈಗೆತ್ತಿಕೊಳ್ಳುವುದಾಗಿ’ ಹೇಳುತ್ತಾರೆ ಕೃಷ್ಣೇಗೌಡ.

Advertisement

Udayavani is now on Telegram. Click here to join our channel and stay updated with the latest news.

Next