ಬನಹಟ್ಟಿ: ನೇಕಾರರಿಗೆ ಉದ್ಯೋಗ ಭದ್ರತೆ, ಪ್ರೋತ್ಸಾಹ ಹಾಗೂ ವೇತನ ಹೆಚ್ಚಳ ನೀಡುವಮೂಲಕ ಒಂದು ವರ್ಷದೊಳಗಾಗಿ ನಿಗಮವನ್ನು ಸರಿದಾರಿಗೆ ತರುವೆ. ಇದಕ್ಕೆ ಸರ್ಕಾರವೂ ಪೂರಕವಾಗಿ ಸ್ಪಂದಿಸಲಿದೆ. ಸ್ಪಂದಿಸದಿದ್ದಲ್ಲಿ ನಿಗಮದಿಂದ ಹೊರಬರುತ್ತೇನೆ ಎಂದು ಶಾಸಕ, ಕೆಎಚ್‌ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ರವಿವಾರ ಸಂಜೆ ನಗರದ ಕೆಎಚ್‌ಡಿಸಿ ಪ್ರಧಾನ ಕಚೇರಿಯಲ್ಲಿ ಕೈಮಗ್ಗ ನೇಕಾರರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಾಭವಿರುವ ನಿಗಮಗಳನ್ನು ಲಾಭದಲ್ಲಿ ಮುಂದುವರಿಸುವುದು ದೊಡ್ಡದಲ್ಲ. ಇಂತಹ ನಿಗಮಗಳು ಸಂಪೂರ್ಣ ನೆಲಕಚ್ಚಿವೆ. ಇವುಗಳ ಹಾನಿ ತುಂಬುವ ಮೂಲಕ ಲಾಭದಾಯಕ ಮಾಡುವುದು ಸವಾಲಾಗಿದೆ. ಒಂದು ವರ್ಷದೊಳಗಾಗಿ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದರು.
ಸರ್ಕಾರವು ಶಾಲಾ ಮಕ್ಕಳಿಗೆ ಒದಗಿಸುವ ಬಟ್ಟೆಯನ್ನು ಕಾರ್ಖಾನೆಗಳ ಮೂಲಕ ಖರೀದಿಸುತ್ತಿದೆ. ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ನಿಗಮದಿಂದಲೇ ಬಟ್ಟೆ ಖರೀದಿಸುವ ವ್ಯವಸ್ಥೆ ಮಾಡಬೇಕಿದೆ. ನೇಕಾರರ ಡಚ್ ಮನೆಗಳಿಗೆ ಅತಿ ಶೀಘ್ರವೇ ಸಿಟಿಎಸ್ ಉತಾರ ಅನ್ನು ಸರ್ಕಾರದಿಂದ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೆ ನಿಗಮಕ್ಕೆ ಹಾನಿಯಾಗದೆ, ಸಬಲೀಕರಣಕ್ಕೆ ಶ್ರಮಿಸುವುದಾಗಿ ಸವದಿ ತಿಳಿಸಿದರು.
ಒಂದೇ ನಿಗಮವಾಗಲಿ: ರಾಜ್ಯದಲ್ಲಿ ಕಾವೇರಿ ಕೈಮಗ್ಗ ಅಭಿವೃದ್ಧಿ ನಿಗಮ, ಪಾವರ್‌ಲೂಮ್ ನಿಗಮ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹೀಗೆ ಹಲವಾರು ರೀತಿಯಲ್ಲಿ ಭಿನ್ನಗೊಂಡಿವೆ. ಇವೆಲ್ಲವನ್ನೂ ಒಂದೇ ಸೂರಿನಲ್ಲಿ ಬೃಹತ್ ನಿಗಮ ಸ್ಥಾಪಿಸುವ ಮೂಲಕ ಸರ್ಕಾರದ ಸಹಾಯ ಹಾಗೂ ನಿಗಮ ಅಭಿವೃದ್ಧಿ ಸಹಕಾರಿಯಾಗಲಿದೆ. ಮುಂಬರುವ ಅಧಿವೇಶನದಲ್ಲಿ ಧನಾತ್ಮಕ ಯೋಚನೆಗಳೊಂದಿಗೆ ಎಲ್ಲ ನಿಗಮ ಒಗ್ಗೂಡಿಸುವುದಾಗಿ ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಯಾವ ಸಮುದಾಯವೂ ಇಷ್ಟೊಂದು ಅಗ್ಗದ ದರದಲ್ಲಿ ಕನಿಷ್ಠ ಕೂಲಿ ಮಾಡುತ್ತಿಲ್ಲ. ಆದರೂ ನೇಕಾರರು ಬದುಕು ನಿರ್ವಹಿಸುತ್ತಿದ್ದಾರೆ. ಸಂದಿಗ್ಧ ಪರಿಸ್ಥಿತಿಯನ್ನು ದೂರ ಮಾಡಲು ವೇತನ ಹೆಚ್ಚಳಗೊಳಿಸುವಂತೆ ಅಥವಾ ಕಾರ್ಮಿಕರೆಂದು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಅವರಿಗೆ ಕೆಎಚ್‌ಡಿಸಿ ನೇಕಾರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು. ವೀರಭದ್ರ ಕುಂಚನೂರ, ಶಂಕರ ಕುರಂದವಾಡ, ನಾಗಯ್ಯ ಬಿ., ಸಿದ್ದಪ್ಪ ಗಂವಾರ, ಸುರೇಶ ಮಠದ, ಸಿದ್ದು ಕಡ್ಲಿಮಟ್ಟಿ, ದೇವೇಂದ್ರ ಶೀಲವಂತ, ಇಮಾಮಸಾಬ್ ಮುಲ್ಲಾ, ನಾಮದೇವ ಗೋಂದಕರ, ಕಾಡಪ್ಪ ಮಳಗಲಿ, ರಾಜಶೇಖರ ಬೀಳಗಿ, ಎಸ್.ಎ. ಗುಟಿ, ರಾಜೇಂದ್ರ ಹಳ್ಯಾಳ ಇತರರು ಇದ್ದರು.