ಬೆಂಗಳೂರು: ವಾಟ್ಸ್‌ಆ್ಯಪ್, ಟೆಲಿಗ್ರಾಂ ಮೂಲಕ ವರ್ಕ್ ಫ್ರಂ ಹೋಮ್ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಹೂಡಿಕೆ ಮಾಡಿಕೊಂಡು ವಂಚಿಸುತ್ತಿದ್ದ ಪ್ರಕರಣ ಬೇಧಿಸಿರುವ ನಗರ ಸೈಬರ್ ಕ್ರೈಂ ಪೊಲೀಸರು ಮಹಿಳೆ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.
ಇದೇ ವೇಳೆ ಆರೋಪಿಗಳ ವಿಚಾರಣೆಯಲ್ಲಿ ಬೆಂಗಳೂರು ಸೇರಿ ದೇಶದ ವಿವಿಧೆಡೆ ದಾಖಲಾಗಿದ್ದ 2,143 ಪ್ರಕರಣಗಳಲ್ಲಿ 158 ಕೋಟಿ ರೂ. ವಂಚಿಸಿದ್ದಾರೆ ಎಂಬುದು ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಹಮೀದ್ ಸುಹೇಲ್, ಇನಾಯತ್ ಖಾನ್, ನಯಾಜ್ ಅಹ್ಮದ್, ಆದಿಲ್ ಆಗಾ, ಸೈಯದ್ ಅಬ್ಟಾಸ್ ಆಲಿಖಾನ್, ಮಿಥುಲ… ಅಮಿರ್ ಸುಹಾಲಿ, ನೈನಾ ತಾರಾಚಂದ್, ಮಿಹಿರ್ ಶಶಿಕಾಂತ್ ಶಾ ಮತ್ತು ಸತೀಶ್ ಕೊಲಂಗಿ ಬಂಧಿತರು. ಈ ಪೈಕಿ ಬೆಂಗಳೂರಿನ ಇಬ್ಬರು, ಹೈದ್ರಾಬಾದ್‌ನ ಮೂವರು, ಮುಂಬಯಿಯ ನಾಲ್ವರು ಸೇರಿದ್ದಾರೆ. ಇತರ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.
ಆರೋಪಿಗಳು ನಕಲಿ ದಾಖಲೆ ಗಳನ್ನು ಸಲ್ಲಿಸಿ ಬ್ಯಾಂಕ್ ಖಾತೆಗಳನ್ನು ತೆರೆದು, ಸಾರಸಗಟಾಗಿ ವಾಟ್ಸ್‌ಆ್ಯಪ್, ಟೆಲಿಗ್ರಾಂ ಮೂಲಕ ವರ್ಕ್ ಫ್ರಂ ಹೋಮ್ ಕೆಲಸ ಕೊಡುವುದಾಗಿ ಸಂದೇಶ ಕಳುಹಿಸುತ್ತಿದ್ದರು. ಅದನ್ನು ನಂಬಿ ಪ್ರತಿಕ್ರಿಯೆ ನೀಡುತ್ತಿದ್ದ ಸಾರ್ವಜನಿಕರಿಗೆ ವೀಡಿಯೋ ಮತ್ತು ಫೋಟೋಗಳನ್ನು ಲೈಕ್ ಮಾಡಿ ಶೇರ್ ಮಾಡಿದರೇ ಒಂದಕ್ಕೆ 150 ರೂ. ಸಿಗಲಿದೆ. ಮನೆಯಲ್ಲಿಯೇ ಕುಳಿತು ದಿನಕ್ಕೆ 500 ರೂ.ನಿಂದ 10 ಸಾವಿರ ರೂ. ವರೆಗೂ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡುತ್ತಿದ್ದರು ಎಂದರು.
ಪ್ರಕರಣ ಗಂಭೀರವಾಗಿದೆ. ತನಿಖೆ ಮುಂದುವರಿಯುತ್ತದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.