ಸವದತ್ತಿ: ಪಿಡಿಒ ಸಹಿಯೊಂದಿಗೆ ಓರ್ವ ಸದಸ್ಯ ತನ್ನ ಇಬ್ಬರು ಅಪ್ರಾಪ್ತ ಮಕ್ಕಳ ಹೆಸರಲ್ಲಿ ಜಾಬ್ ಕಾರ್ಡ್ ಮಾಡಿಸಿ 2016ರಿಂದ 1.65 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಬಾಲ ಕಾರ್ಮಿಕ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ಹೇಳಿದರು.
ತಾಪಂ ಸಭಾಭವನದಲ್ಲಿ ನಡೆದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಕುರಿತು ಪಿಡಿಒ ಅವರನ್ನು ಅಮಾನತುಗೊಳಿಸಲಾಯಿತು. ನರೇಗಾದಲ್ಲಿ ಜಾಬ್ ಕಾರ್ಡ್ ನೀಡುವಾಗ ಪಿಡಿಒಗಳು ವಯಸ್ಸಿನ ದಾಖಲಾತಿ ಎಚ್ಚರದಿಂದ ಪರಿಶೀಲಿಸಬೇಕು. ತಮ್ಮ ವ್ಯಾಪ್ತಿಯಲ್ಲಿ 3 ತಿಂಗಳಿಗೆ ಒಂದಾದರೂ ಮಗುವಿನ ರಕ್ಷಣೆಗೆ ಶ್ರಮಿಸಬೇಕಿದೆ ಎಂದರು.
ಇಲಾಖೆಯಿಂದ ಜಿಲ್ಲೆಯಲ್ಲಿ ಆ.16ರಿಂದ ನಡೆದ ಸಮೀಕ್ಷೆಯಲ್ಲಿ 16,595 ಸಂಸ್ಥೆ ತಪಾಸಣೆಗೆ ಒಳಪಡಿಸಿದಾಗ 68 ಪ್ರಕರಣ ಬೆಳಕಿಗೆ ಬಂದಿವೆ. 5 ಪ್ರಕರಣಗಳಲ್ಲಿ ಬಾಲ ಕಾರ್ಮಿಕ ಕುರಿತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಇನ್ನುಳಿದಂತೆ 63 ಪ್ರಕರಣ ಕುರಿತು ಕಿಶೋರ ಕಾರ್ಮಿಕ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಸವದತ್ತಿಯಲ್ಲಿ 1 ಬಾಲ ಕಾರ್ಮಿಕ, 5 ಕಿಶೋರ ಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ ಅವರು, ಜನತೆಯಲ್ಲಿ ಅರಿವು ಮೂಡಿಸಿ ಅಪರಾಧಗಳು ಕಡಿಮೆಯಾಗುವಂತೆ ಕಾರ್ಯ ನಿರ್ವಹಿಸಬೇಕಿದೆ. ಬಾಲ ಕಾರ್ಮಿಕ, ಜೀತ ಮತ್ತು ಒತ್ತೆಯಾಳು ಪ್ರಕರಣಗಳು ಕಂಡು ಬಂದಲ್ಲಿ ಇಲಾಖೆ ಗಮನಕ್ಕಿರಿಸಿ. ಇಲ್ಲವೇ ಸಹಾಯವಾಣಿ 1098 ಸಂಖ್ಯೆಗೆ ಮಾಹಿತಿ ನೀಡಿ ಎಂದರು.
ತಹಶೀಲ್ದಾರ್ ಪ್ರಶಾಂತ ಪಾಟೀಲ ಮಾತನಾಡಿ, ಸುಶಿಕ್ಷಿತರೇ ತಮ್ಮ ಮಕ್ಕಳ ಪಾಲನೆಗೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಇಟ್ಟಂಗಿ ಭಟ್ಟಿ, ಬೋರ್‌ವೆಲ್, ಧಾಬಾಗಳಲ್ಲಿ ಹೆಚ್ಚು ಬಾಲ ಕಾರ್ಮಿಕರು ಕಾರ್ಯದಲ್ಲಿ ತೊಡಗಿದ್ದಾರೆ. ಜಾಗೃತಿ ಕಾರ್ಯಕ್ರಮ ನಡೆಸಿದರೂ ಜನತೆ ಎಚ್ಚೆತ್ತಕೊಳ್ಳುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಶಶಿಧರ ಎಂ. ಗೌಡ, ಎಸ್.ಎಂ. ನದಾಫ್, ಪ್ರಕಾಶ ಚನ್ನಪ್ಪನವರ, ಮಹೇಶ ಚಿತ್ತರಗಿ, ಆರ್.ಆರ್. ಕುಲಕರ್ಣಿ, ಕಾರ್ಮಿಕ ನಿರೀಕ್ಷಕ ರಮೇಶ ಸಿಂದಗಿ, ಎಸ್.ಎಸ್. ಮಾನೆ ಸೇರಿದಂತೆ ಅಧಿಕಾರಿಗಳು ಇದ್ದರು.