ನವದೆಹಲಿ: ದೆಹಲಿ ಜವಾಹರಲಾಲ್ ನೆಹರು ಯೂನಿರ್ವಸಿಟಿ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಸೋಮವಾರ ದೆಹಲಿಯ ಸಂಸದ್ ಮಾರ್ಗ ಪ್ರದೇಶದಲ್ಲಿನ ಹೊರವಲಯದಲ್ಲಿ ನಡೆದಿದೆ.
ಇಲ್ಲಿನ ಕಾನ್ ಸ್ಟಿಟ್ಯೂಷನ್ ಕ್ಲಬ್ ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಖಾಲಿದೆ ಮೇಲೆ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಖಾಲಿದ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ. ಬಿಳಿ ಶರ್ಟ್ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ಏಕಾಏಕಿ ತಳ್ಳಿ ಗುಂಡು ಹಾರಿಸಿದ್ದ. ಈ ಸಂದರ್ಭದಲ್ಲಿ ಖಾಲಿದ್ ಆಯತಪ್ಪಿ ಕೆಳಗೆ ಬಿದ್ದಿದ್ದು, ಇದರಿಂದಾಗಿ ಗುಂಡು ತಗುಲದೆ ಅಪಾಯದಿಂದ ಪಾರಾಗಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ನಾವು ಆತನನ್ನು ಹಿಡಿಯಲು ಯತ್ನಿಸಿದೆವು, ಆದರೆ ಆತ ಅಷ್ಟರಲ್ಲಿ ತಪ್ಪಿಸಿಕೊಂಡು ಹೋಗಿದ್ದ ಎಂದು ವಿವರಿಸಿದ್ದಾರೆ.
ದೇಶವಿರೋಧಿ ಘೋಷಣೆ ..
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ 2016ರ ಫೆ.9ರಂದು ನಡೆದ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್ ದೇಶ ವಿರೋಧಿ ಘೋಷಣೆ ಕೂಗಿರುವ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ. ಈ ಹಿಂದೆ ನೀಡಲಾದ ಶಿಕ್ಷೆಯನ್ನು ಮರುಪರಿಶೀಲಿಸಲು ರೂಪಿಸಲಾದ ಆಡಳಿತದ ಮೇಲ್ಮನವಿ ಸಮಿತಿ ಕನ್ನಯ್ಯ ಕುಮಾರ್ ಹಾಗೂ ಉಮರ್ ಸೇರಿದಂತೆ ಇತರರಿಗೆ ಇತ್ತೀಚೆಗೆ ದಂಡ ವಿಧಿಸಿತ್ತು.