ಹೊಸದಿಲ್ಲಿ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಇಲ್ಲಿನ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೈಫ್ ಸಯನ್ಸಸ್ (ಎಸ್‌ಎಲ್‌ಎಸ್) ನ ಪ್ರೊಫೆಸರ್ ಅತುಲ್ ಜೊಹ್ರಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅತುಲ್ ಜೊಹ್ರಿಯ ಲೈಂಗಿಕ ಕಿರಕುಳದಿಂದ ಬೇಸತ್ತ 26ರ ಹರೆಯದ ವಿದ್ಯಾರ್ಥಿನಿಯೋರ್ವಳು ಈಚೆಗೆ ನಾಪತ್ತೆಯಾಗಿ ಬಳಿಕ ತನ್ನ ಸಂಬಂಧಿಕರಲ್ಲಿ ಪತ್ತೆಯಾಗಿದ್ದಳು. ಆಕೆ ವಿದ್ಯಾಲಯದ ಆಡಳಿತೆಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಾನು ಲೈಂಗಿಕ ಕಿರುಕುಳದಿಂದ ಬೇಸತ್ತು ಯುನಿವರ್ಸಿಟಿಯನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾಳೆ.
ಜೊಹ್ರಿಗೆ ತನ್ನ ತರಗತಿಗಳಲ್ಲಿ ವಿದ್ಯಾರ್ಥಿನಿಯರ “ಫಿಗರ್’ ವರ್ಣಿಸುವ ಕೆಟ್ಟ ಅಭ್ಯಾಸವೂ ಇದೆ; ಇದನ್ನು ವಿರೋಧಿಸುವವರ ವಿರುದ್ಧ ಆತ ಗ್ರಜ್ ಕಟ್ಟಿಕೊಳ್ಳುತ್ತಾನೆ ಎಂಬ ಆರೋಪ ವಿದ್ಯಾರ್ಥಿನಿಗಳಿಂದ ಇದೆ.
ಪ್ರೊ. ಜೊಹ್ರಿ ವಿರುದ್ಧ ವಿಶ್ವವಿದ್ಯಾಲಯದಲ್ಲಿ ಸಿಬಂದಿಗಳೊಂದಿಗಿನ ಶಾಮೀಲಾತಿಯಲ್ಲಿ ಹಣಕಾಸು ಅಕ್ರಮ ನಡೆಸಿರುವ ಆರೋಪಗಳೂ ಇವೆ.
ಆದರೆ ತನ್ನ ವಿರುದ್ಧದ ಎಲ್ಲ ಅರೋಪಗಳನ್ನು ಅಲ್ಲಗಳೆದಿರುವ ಜೊಹ್ರಿ, ತಾನು ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ ಕ್ರಮವನ್ನು ಬೆಂಬಲಿಸಿರುವ ಕಾರಣಕ್ಕೆ ತನ್ನ ವಿರುದ್ದ ಸಂಚು ಹೂಡಲಾಗಿದೆ ಎಂದು ಹೇಳಿದ್ದಾರೆ.