ಬಳ್ಳಾರಿ: ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಪೊಲೀಸರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಬಜೆಟ್ ಅಧಿವೇಶನದಿಂದ ದೂರ ಉಳಿದಿದ್ದಕ್ಕೆ ಕೊನೆಗೂ ಆಪ್ತರ ಎದುರು ಪಶ್ಚಾತ್ತಾಪ ಪಟ್ಟಿದ್ದಾರೆ. ವಿಧಾನಸಭೆಗೆ ಹೋಗಬೇಕಿತ್ತು. ಆದರೆ, ಹೋಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸ್ವಯಂಕೃತ ಅಪರಾಧಕ್ಕೆ ಬಲಿಯಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರೂ, 33 ಸಾವಿರಕ್ಕೂ ಹೆಚ್ಚು ಮತ ಪಡೆದು ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆದುಕೊಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜೆ.ಎನ್.ಗಣೇಶ್, 5555 ಮತಗಳ ಅಂತರದಿಂದ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿನ ಸೋಲೇ, 2018ರಲ್ಲಿ ಗೆಲ್ಲಲು ಕಾರಣ ಎಂಬ ಕ್ಷೇತ್ರದ ಜನರು ವಿಶ್ಲೇಷಿಸಿದ್ದರು. ಆದರೆ, ಗೆಲುವಿನಿಂದ ಸಾಕಷ್ಟು ಕನಸು ಹೊತ್ತಿದ್ದ ಶಾಸಕ ಗಣೇಶ್‌ಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಸ್ವಯಂಕೃತ ಅಪರಾಧವೇ ತಮ್ಮ ರಾಜಕೀಯ ಭವಿಷ್ಯಕ್ಕೆ ಮುಳುವಾಗಲು ಕಾರಣವಾಗಿದೆ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಆಪ್ತರೆದುರು ಕಣ್ಣೀರು: ಬೆಂಗಳೂರಿನ ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆಸಿರುವ ಗಣೇಶ್, ಇದೀಗ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಇದರಿಂದ ಬಜೆಟ್ ಅಧಿವೇಶನದಿಂದಲೂ ದೂರ ಉಳಿದಿದ್ದಾರೆ. ಆಗಮಿಸಿದರೆ ಬಂಧನ, ಆಗಮಿಸದಿದ್ದರೆ ಪಕ್ಷ ಜಾರಿಗೊಳಿಸಿರುವ ವಿಪ್ ಉಲ್ಲಂಘಿಸಿ ಪಕ್ಷದ ಕೆಂಗಣ್ಣಿಗೆ ಗುರಿಯಾಗುವ ಪರಿಸ್ಥಿತಿ. ತಮ್ಮ ರಾಜಕೀಯ ಭವಿಷ್ಯವನ್ನು ನೆನೆದು ಕಣ್ಣೀರು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆಸಿ ಗುರುವಿನಿಂದಲೂ ದೂರಾಗುವಂತಾಗಿದೆ. ಚುನಾವಣೆಯಲ್ಲಿ ಗೆಲ್ಲಿಸಿ ರಾಜಕೀಯ ಭವಿಷ್ಯ ನೀಡಿದ್ದ ಕ್ಷೇತ್ರದ ಜನರಿಂದಲೂ ಸಂಪರ್ಕ ಕಡಿತಗೊಂಡಿದೆ. ಇದೀಗ ತಲೆಮರೆಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಮೊದಲ ಬಾರಿ ಶಾಸಕನಾಗಿ ಹೊತ್ತಿದ್ದ ನೂರಾರು ಕನಸುಗಳೆಲ್ಲವೂ ಹಾಳಾಯ್ತು ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಂಪ್ಲಿ ಶಾಸಕರಿಗಿದೆಯಾ ಗಂಡಾಂತರ?
ಕ್ಷೇತ್ರ ಮರುವಿಂಗಡಣೆಯಿಂದ 2008ರಲ್ಲಿ ಮೊದಲ ಬಾರಿಗೆ ಕಂಪ್ಲಿ ಕ್ಷೇತ್ರ, ವಿಧಾನಸಭಾ ಕ್ಷೇತ್ರವಾಗಿ ರಚನೆಯಾಯಿತು. ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಕಂಪ್ಲಿ ಕ್ಷೇತ್ರದಿಂದ ಟಿ.ಎಚ್.ಸುರೇಶ್ ಬಾಬು 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ, ವಿಧಾನಸಭೆಯಲ್ಲಿ ಗಲಾಟೆ ಮಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದರು. ಪರಿಣಾಮ ಕಾಂಗ್ರೆಸ್‌ನವರು ಬೆಂಗಳೂರಿನಿಂದ ಪಾದಯಾತ್ರೆ ನಡೆಸಿದರು. ಬಳಿಕ, ಅಕ್ರಮ ಗಣಿಗಾರಿಕೆ ಪ್ರಕರಣದಿಂದ ಕೆಲ ದಿನಗಳ ಕಾಲ ನಾಪತ್ತೆಯಾಗಿದ್ದ ಟಿ.ಎಚ್.ಸುರೇಶ್‌ಬಾಬು, ಬಳಿಕ ಜೈಲಿಗೂ ಹೋಗಿದ್ದರು. ಅದರಂತೆ ಇದೀಗ ಕಂಪ್ಲಿ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೆ.ಎನ್.ಗಣೇಶ್ ಸಹ ಶಾಸಕರ ಮೇಲೆಯೇ ಹಲ್ಲೆ ನಡೆಸಿ ಬಂಧನ ಭೀತಿ ಎದುರಿಸುತ್ತಿದ್ದಾರೆ.
ವೆಂಕೋಬಿ ಸಂಗನಕಲ್ಲು