ಬೆಂಗಳೂರು/ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಶಂಕಿತ ಭಯೋತ್ಪಾದಕರು ಆಶ್ರಯ ಪಡೆದು ಕೊಳ್ಳುತ್ತಿರುವುದಕ್ಕೆ ಮತ್ತೂಂದು ಸಾಕ್ಷ್ಯ ದೊರೆತಿದ್ದು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ರಾಜಧಾನಿಯ ಸನಿಹದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಹಬೀಬುರ್ ರೆಹಮಾನ್ ಶೇಕ್ ಅಲಿಯಾಸ್ ಶೇಖ್ ಬಂಧಿತ. ಈತ ಕಳೆದ ವರ್ಷ ರಾಮನಗರದಲ್ಲಿ ಬಂಧಿತನಾಗಿದ್ದ ಜೆಎಂಬಿ ಸಂಘಟನೆಯ ಕೌಸರ್‌ನ ಹತ್ತಿರದ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.
2014ರಲ್ಲಿ ಪಶ್ಚಿಮ ಬಂಗಾಲದ ಬುಧ್ವಾìನ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಹಬೀಬುರ್ ರೆಹಮಾನ್ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಎನ್‌ಐಎ ಕಾರ್ಯಾ ಚರಣೆ ನಡೆಸುತ್ತಿತ್ತು.
ಕಳೆದ ಕೆಲವು ವರ್ಷಗಳಿಂದ ರಾಜ್ಯ ದಲ್ಲಿದ್ದ ಹಬೀಬುರ್ ದೊಡ್ಡಬಳ್ಳಾಪುರದ ಚಿಕ್ಕಪೇಟೆಯ ಮಸೀದಿಯಲ್ಲಿ ಆಶ್ರಯ ಪಡೆದುಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬುಧವಾರ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗುತ್ತದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಹಬೀಬುರ್‌ಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್ ಹುಸೇನ್‌ನನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೌಲ್ವಿ ಹಾಗೂ ಹಬೀಬುರ್ ಸಂಪರ್ಕ, ಇನ್ನಿತರ ವಿಚಾರಗಳ ಬಗ್ಗೆ ತನಿಖೆ ನಡೆಸ ಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.