ಶ್ರೀನಗರ: ಮಹಾರಾಜ ಹರಿ ಸಿಂಗ್ ಅವರ ಜನ್ಮದಿನವನ್ನು ಸಾರ್ವಜನಿಕ ರಜೆ ಎಂದು ಘೋಷಿಸಿದ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಕೃತಜ್ಞತೆಯನ್ನು ಸಲ್ಲಿಸಿದ್ದು, “ನನಗೆ ಸಂತೋಷವಾಗಿದೆ. ಬಹಳ ಪ್ರಯತ್ನದ ನಂತರ ಇದು ಸಾಧ್ಯವಾಗಿದ್ದು, ಪ್ರಯತ್ನಗಳನ್ನು ಮುಂದುವರಿಸಿದ ಜಮ್ಮುವಿನ ಯುವ ಪೀಳಿಗೆಯನ್ನು ನಾನು ಅಭಿನಂದಿಸುತ್ತೇನೆ. ಅವರು ಅದನ್ನು ಸಾಧ್ಯ ಮಾಡಿದರು, ಯಾರೂ ವಿರೋಧಿಸಲಿಲ್ಲ” ಎಂದು ಹೇಳಿದ್ದಾರೆ.
“ನನ್ನ ಮಕ್ಕಳಾದ ಅಜಾತಶತ್ರು ಮತ್ತು ವಿಕ್ರಮಾದಿತ್ಯ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ, ಅವರು ರಜೆಯ ಬಗ್ಗೆ ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದರು. ಯಾರೂ ಅದನ್ನು ಮುಂದಕ್ಕೆ ಸಾಗಿಸಲಿಲ್ಲ. ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಅದಕ್ಕಾಗಿ ನಾನು ಕೂಡ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಚೀತಾಗಳು ಮೊದಲು ವಾತಾವರಣಕ್ಕೆ ಹೊಂದಿಕೊಳ್ಳಬೇಕು: ಮಧ್ಯಪ್ರದೇಶ ಸಿಎಂ ಚೌಹಾಣ್
ಈ ಹಿಂದೆ, ಮಹಾರಾಜ ಹರಿ ಸಿಂಗ್ ಅವರ ಪುತ್ರ ಕರಣ್ ಸಿಂಗ್ ಅವರು ಸೆಪ್ಟೆಂಬರ್ 23 ಅನ್ನು ಸಾರ್ವಜನಿಕ ರಜೆ ಎಂದು ಘೋಷಿಸಲು ಸ್ಥಳೀಯರ ಬೇಡಿಕೆಯನ್ನು ಅನುಮೋದಿಸಿದ್ದರು.ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೆಪ್ಟೆಂಬರ್ 23 ರಂದು ಮಹಾರಾಜ ಹರಿ ಸಿಂಗ್ ಅವರ ಜನ್ಮದಿನವನ್ನು ಸಾರ್ವಜನಿಕ ರಜೆ ಎಂದು ಘೋಷಿಸಲು ನಿರ್ಧರಿಸಿದೆ. ಈ ಕುರಿತು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಎಂದು ಅಧಿಕೃತ ವಕ್ತಾರರು ಗುರುವಾರ ರಾತ್ರಿ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗುರುವಾರ ರಾಜಭವನದಲ್ಲಿ ಸಾರಿಗೆ ಒಕ್ಕೂಟದ ಮುಖ್ಯಸ್ಥರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರು, ಯುವ ರಜಪೂತ ಸಭಾ ಸದಸ್ಯರು, ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ನಿಯೋಗವನ್ನು ಭೇಟಿಯಾದ ನಂತರ ಈ ಘೋಷಣೆ ಮಾಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಸಂಬಂಧ ಈಗ ಬಹುತೇಕ ಶೂನ್ಯ
”ನಾನು 1967 ರಲ್ಲಿ ಕಾಂಗ್ರೆಸ್ ಸೇರಿದ್ದೆ. ಆದರೆ ಕಳೆದ 8-10 ವರ್ಷಗಳಲ್ಲಿ ನಾನು ಸಂಸತ್ತಿನಲ್ಲಿ ಇಲ್ಲ, ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಯಿತು. ನಾನು ಕಾಂಗ್ರೆಸ್‌ನಲ್ಲಿದ್ದೇನೆ ಆದರೆ ಯಾವುದೇ ಸಂಪರ್ಕವಿಲ್ಲ, ಯಾರೂ ನನ್ನನ್ನು ಏನನ್ನೂ ಕೇಳುವುದಿಲ್ಲ. ನಾನು ನನ್ನ ಸ್ವಂತ ಕೆಲಸವನ್ನು ಮಾಡುತ್ತೇನೆ. ಪಕ್ಷದೊಂದಿಗೆ ನನ್ನ ಸಂಬಂಧ ಈಗ ಬಹುತೇಕ ಶೂನ್ಯವಾಗಿದೆ ಎಂದು ಕರಣ್ ಸಿಂಗ್ ಹೇಳಿದ್ದಾರೆ.