Advertisement

ಮೇ 1ರ ಮೇಲೆ ಜೆಕೆ ಕಣ್ಣು

10:43 AM Sep 11, 2017 | Team Udayavani |

ಕನ್ನಡ ಚಿತ್ರರಂಗದಲ್ಲಿ ಜೆಕೆ ಎಂದೇ ಕರೆಸಿಕೊಳ್ಳುವ ನಟ ಜಯರಾಮ್‌ ಕಾರ್ತಿಕ್‌, ಹೇಮಂತ್‌ ಹೆಗಡೆ ನಿರ್ದೇಶನದ ‘ಸ’ ಚಿತ್ರದ ಬಳಿಕ ಎಲ್ಲೂ ಸುದ್ದಿಯಾಗಲಿಲ್ಲ. ಅವರು ಬಾಲಿವುಡ್‌ ಅಂಗಳಕ್ಕೆ ಜಿಗಿದು, ಅಲ್ಲಿ ಹಿಂದಿ ಧಾರಾವಾಹಿಯಲ್ಲಿ ನಟಿಸುವತ್ತ ಬಿಜಿಯಾಗಿದ್ದರು. ಅದರ ನಡುವೆಯೇ ಅವರು ಗಾಂಧಿನಗರಕ್ಕೆ ಯು ಟರ್ನ್ ತೆಗೆದುಕೊಂಡು ಬಂದು ಸದ್ದಿಲ್ಲದೆಯೇ ಒಂದು ಸಿನಿಮಾದಲ್ಲಿ ನಟಿಸಿದ್ದಾಗಿದೆ.

Advertisement

ಅಂದಹಾಗೆ, ಆ ಚಿತ್ರದ ನಿರ್ದೇಶಕರು ನಾಗೇಂದ್ರ ಅರಸ್‌. ಈ ಹಿಂದೆಯೇ ನಾಗೇಂದ್ರ ಅರಸ್‌, ಜೆಕೆ ಅವರಿಗೊಂದು ಕಥೆ ಮಾಡಿಕೊಂಡಿದ್ದರು. ಅದನ್ನು ಜೆಕೆ ಅವರಿಗೆ ಹೇಳಿದ ಕೂಡಲೇ ಜೆಕೆ ಕೂಡ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದರು. ಅದು ಎಲ್ಲೂ ಸುದ್ದಿಯಾಗದೆ, ಚಿತ್ರೀಕರಣಗೊಂಡು ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಅಂದಹಾಗೆ, ಚಿತ್ರೀಕರಣಕ್ಕೆ ಹೋಗಿದ್ದಾಗ ಆ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿರಲಿಲ್ಲ.

ಈಗ “ಮೇ1′ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ವೊಂದು ಬಿಡುಗಡೆಯಾಗಿದ್ದು, ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್ ಇರುವಂತಹ ಚಿತ್ರ ಇರಬಹುದೇನೋ ಅನಿಸುವುದುಂಟು. ಅದರಲ್ಲೂ ಶೀರ್ಷಿಕೆ ನೋಡಿದವರಿಗೆ ಅದೊಂದು ಹಾರರ್‌ ಚಿತ್ರ ಇರಬಹುದಾ ಎಂಬ ಅನುಮಾನವೂ ಮೂಡುವುದುಂಟು.

ಆದರೆ, ಈ ಎಲ್ಲಾ ಅನಿಸಿಕೆ, ಅನುಮಾನಗಳಿಗೆ “ಮೇ 1′ ರಿಲೀಸ್‌ ಆಗುವವರೆಗೆ ಕಾಯಲೇಬೇಕು. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಚಿತ್ರವನ್ನು ವಾಣಿ ರಾಜು ನಿರ್ಮಿಸಿದ್ದಾರೆ. ಜಿ. ಸತೀಶ್‌ ಬಾಬು ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಕಿರಣ್‌, ಸತೀಶ್‌, ಆನಂದ ಪ್ರಿಯ, ಕಮಲ್‌, ಪ್ರವೀಣ್‌ ಇತರರು ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next