Advertisement

ಜಮ್ಮು-ಕಾಶ್ಮೀರ ಡಿಡಿಸಿ ಫಲಿತಾಂಶ: ಅಧಿಕಾರದ ಗದ್ದುಗೆ ಗುಪ್ಕಾರ್ ಮೈತ್ರಿಗೋ, ಬಿಜೆಪಿಗಾ?

01:36 PM Dec 22, 2020 | Nagendra Trasi |

ಜಮ್ಮು: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಕಲಂ 370 ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ನಡೆದ ಮೊತ್ತ ಮೊದಲ ಜಮ್ಮು-ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯ ಮತಎಣಿಕೆ ಮಂಗಳವಾರ(ಡಿಸೆಂಬರ್ 22, 2020) ಬೆಳಗ್ಗೆ 9ಗಂಟೆಗೆ ಆರಂಭಗೊಂಡಿದ್ದು, ಮತ ಎಣಿಕೆ ಮುಂದುವರಿದಿದೆ.

Advertisement

ಎಲ್ಲಾ 20 ಜಿಲ್ಲೆಗಳಿಗೆ ನಡೆದ ಡಿಡಿಸಿ ಚುನಾವಣೆಯ ಮತಎಣಿಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರಂಭಗೊಂಡಿದ್ದು, ಆರಂಭಿಕ ಫಲಿತಾಂಶದ ಪ್ರಕಾರ ಗುಪ್ಕಾರ್ ಮೈತ್ರಿಕೂಟ ಹಾಗೂ ಭಾರತೀಯ ಜನತಾ ಪಕ್ಷದ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿರುವುದಾಗಿ ವರದಿ ತಿಳಿಸಿದೆ.

ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿಯ ಪೀಪಲ್ಸ್ ಡೆಮೋಕ್ರಟಿಕ್ ಪಕ್ಷದ ಗುಪ್ಕಾರ್ ಮೈತ್ರಿಕೂಟ 53 ಸ್ಥಾನಗಳಲ್ಲಿ ಹಾಗೂ ಭಾರತೀಯ ಜನತಾ ಪಕ್ಷ 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 18 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿಗಾಗಿ ನವೆಂಬರ್ 28ರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಡಿಸೆಂಬರ್ 19ರಂದು ಚುನಾವಣೆ ಮುಕ್ತಾಯವಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಸ್ಥಳೀಯ ಚುನಾವಣೆಯಲ್ಲಿ ಶೇ.51ರಷ್ಟು ಮತದಾರರು ಶಾಂತಿಯುತವಾಗಿ ಮತ ಚಲಾಯಿಸಿದ್ದರು.

ಇದನ್ನೂ ಓದಿ:ದೆಹಲಿಯ ಪ್ರತಿಭಟನೆಕಾರರು ರೈತರಲ್ಲ, ಅರ್ಬನ್ ನಕ್ಸಲರು: ಶೋಭಾ ಕರಂದ್ಲಾಜೆ

Advertisement

ಜಮ್ಮು-ಕಾಶ್ಮೀರದ 280 ಡಿಡಿಸಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 450 ಮಹಿಳೆಯರು ಸೇರಿದಂತೆ 4,181 ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗವಾಗಲಿದೆ. ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ. ನೆರೆಯ ಕುಲ್ಗಾಮ್ ಜಿಲ್ಲೆಯಲ್ಲಿ ನ್ಯಾಷನಲ್ ಕಾಂಗ್ರೆಸ್ 5 ವಾರ್ಡ್ ಗಳಲ್ಲಿ, ಸಿಪಿಐಎಂ 4 ವಾರ್ಡ್ ಗಳಲ್ಲಿ ಪಕ್ಷೇತರರು ಎರಡು ಹಾಗೂ ಪಿಡಿಪಿ ಮತ್ತು ಅಪ್ನಿ ಪಾರ್ಟಿ ತಲಾ ಒಂದು ವಾರ್ಡ್ ನಲ್ಲಿ ಮುನ್ನಡೆ ಸಾಧಿಸಿದೆ.

370ನೇ ವಿಧಿ ರದ್ದುಗೊಂಡ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಕುತೂಹಲ ನೆಟ್ಟಿದ್ದು, ಸಂಜೆಯೊಳಗೆ ಪೂರ್ಣ ಫಲಿತಾಂಶ ಹೊರಬೀಳುವ ಮೂಲಕ ಡಿಡಿಸಿ ಅಧಿಕಾರದ ಗದ್ದುಗೆ ಯಾರಿಗೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next