ಶ್ರೀನಗರ :ಸೇನಾ ಅಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ನಿಗೂಢವಾಗಿ ಹತ್ಯೆಗೈದಿದ್ದ ಲಷ್ಕರ್ ಎ ತೋಯ್ಬಾ ಉಗ್ರನನ್ನು ಕುಲ್ಗಾಮ್ ಜಿಲ್ಲೆಯ ತಂತ್ರಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳು ಶನಿವಾರ ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಮಚೀವಾ ಪ್ರದೇಶದ ನಿವಾಸಿ ಇಷ್ಫಾಕ್ ಪಡ್ಡರ್ ಎಂಬ ಉಗ್ರನನ್ನು ಹತ್ಯೆಗೈಯಲಾಗಿದೆ.
ಮೇ 10 ರಂದು ಸೇನಾ ಅಧಿಕಾರಿ ಉಮರ್ ಫಯಾಜ್ ಅವರನ್ನು ಉಗ್ರರು ಅಪಹರಿಸಿ ಗುಂಡಿಕ್ಕಿ ಹತ್ಯೆಗೈದಿದ್ದರು. ಗುಂಡುಗಳು ಹೊಕ್ಕ ಫಯಾಜ್ ಅವರ ಶವ ಶೋಪಿಯಾನ್‌ನ ಹರ್ಮಾನ್ ಪ್ರದೇಶದಲ್ಲಿ ಪತ್ತೆಯಗಿತ್ತು. ಹತ್ಯೆಯಲ್ಲಿ ಪಡ್ಡರ್ ಪಾತ್ರವಿರುವುದು ತನಿಖೆಯಲ್ಲಿ ತಿಳಿದು ಬಂದಿತ್ತು.
ಸ್ಥಳದಲ್ಲಿ ಇನ್ನೂ ಕೆಲ ಉಗ್ರರು ಅಡಗಿರುವ ಹಿನ್ನಲೆಯಲ್ಲಿ ಸೇನಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ.
ಉಗ್ರನ ಹತ್ಯೆಯ ಬಳಿಕ ಕುಲ್‌ಗಾಮ್‌ನಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಪಾಕ್ ಸೈನಿಕರು ಶನಿವಾರ ಬೆಳಗ್ಗೆ ಪೂಂಚ್ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮನಾಗಿದ್ದಾರೆ.