ರಾಮದುರ್ಗ: ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿವ ನೀರು ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ಮೊದಲ ಆದ್ಯತೆ ನೀಡಿ ಕೋಟ್ಯಾಂತರ ಅನುದಾನ ನೀಡಿದ್ದು, ತಾಲೂಕಿನಲ್ಲಿ ಎಲ್ಲ ಹಳ್ಳಿಗಳಲ್ಲಿಯೂ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಹೊಸಕೇರಿ ಗ್ರಾಮದಲ್ಲಿ ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ 99.47 ಲಕ್ಷ ರೂ. ಅನುದಾನದಲ್ಲಿ ಮನೆ- ಮನೆಗೆ ನಲ್ಲಿ ಜೋಡಣೆ ಕಾಮಗಾರಿಗೆ ಹಾಗೂ ಶಾಸಕರ ಪ್ರದೇಶಾಭಿವೃದ್ಧಿಯ 10 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ ಹಾಗೂ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಹಾಗೂ ಪ್ರವಾಹದಂತಹ ಗಂಭೀರ ಪರಿಸ್ಥಿತಿ ಎದುರಿಸಿದ ಸರ್ಕಾರ ಆರ್ಥಿಕ ಸಮಸ್ಯೆಯಾದರೂ ಜನರಿಗೆ ಸಿಗಬೇಕಾದ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸಿದೆ. ಈಗಾಗಲೇ ಎಲ್ಲ ಹಳ್ಳಿಗಳಿಗೂ ಜೆಜೆಎಂ ಯೋಜನೆಯಡಿ 150 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಶೇ.80 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನುಳಿದ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಶಿಕ್ಷಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ನೂರಾರು ಶಾಲಾ ಕೊಠಡಿ ನಿರ್ಮಿಸಲಾಗಿದೆ. ಮಕ್ಕಳ ಕಲಿಕೆಗೆ ತೊಂದರೆಯಾಗದ ನಿಟ್ಟಿನಲ್ಲಿ ಸರ್ಕಾರ ಶ್ರಮವಹಿಸಿ ಸಾಕಷ್ಟು ಅನುದಾನ ನೀಡಿದೆ. ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ವೇಳೆ ಗ್ರಾಪಂ ಸದಸ್ಯ ಬಿ.ಎಸ್. ಬೆಳವಣಕಿ, ತಾಪಂ ಇಒ ಪ್ರವೀಣಕುಮಾರ ಸಾಲಿ, ಬಿಇಒ ಎನ್. ವೈ. ಕುಂದರಗಿ, ಪಿಡಿಒ ಬಲರಾಮ ಲಮಾಣಿ, ಮುಖಂಡರಾದ ಫಕೀರಪ್ಪ ಬೆಳವಣಕಿ, ಶಿವಪ್ಪ ಕಿತ್ತಲಿ, ನಾಗಪ್ಪ ಪೂಜೇರ, ಕುಮಾರ ಕಿತ್ತಲಿ ಸೇರಿದಂತೆ ಇತರರಿದ್ದರು.