ಹೊಸದಿಲ್ಲಿ: ಭಾರತದ ಜಿತು ರಾಯ್ ಸದ್ಯ ಸಾಗುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ್ದಾರೆ. ಈಗಾಗಲೇ ಕಂಚಿನ ಪದಕ ಜಯಿಸಿದ್ದ ಜಿತು ಬುಧವಾರ ನಡೆದ ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದರು. ಇದು ಭಾರತಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ. ಇದೇ ಸ್ಪರ್ಧೆಯಲ್ಲಿ ಭಾರತದ ಅಮನ್‌ಪ್ರೀತ್ ಸಿಂಗ್ ಬೆಳ್ಳಿಯ ಪದಕ ಜಯಿಸಿದ್ದಾರೆ.
ಮಂಗಳವಾರ ನಡೆದ 10 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದ ಆರ್ಮಿಯ ಜಿತು 230.1 ಅಂಕ ಗಳಿಸಿ ನೂತನ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು. ಫೈನಲ್‌ನಲ್ಲಿ ಬಹುತೇಕ ಹೊತ್ತು ಮುನ್ನಡೆಯಲ್ಲಿದ್ದ ಅಮನ್‌ಪ್ರೀತ್ ಸಿಂಗ್ ಅಂತಿಮವಾಗಿ 226.9 ಅಂಕಗಳೊಂದಿಗೆ ಬೆಳ್ಳಿಯ ಪದಕಕ್ಕೆ ತೃಪ್ತಿಪಡಬೇಕಾಯಿತು. ಇರಾನ್‌ನ ವಹಿದ್ ಗೋಲ್ಕಾಂಡನ್ 208.0 ಅಂಕ ಗಳಿಸಿ ಕಂಚು ಪಡೆದರು.
ಐದು ಹೊಡೆತಗಳ ಫೈನಲ್ ಹೋರಾಟದ ಮೊದಲೆರಡು ಸುತ್ತು ಮುಗಿದಾಗ 29ರ ಹರೆಯದ ಜಿತು ಆರನೇ ಸ್ಥಾನದಲ್ಲಿದ್ದರು. ಮೊದಲೆರಡು ಹೊಡೆತಗಳಲ್ಲಿ ಅವರು ತಲಾ 93.8 ಅಂಕ ಗಳಿಸಿದ್ದರು. ಈ ಹಂತದಲ್ಲಿ ಎಂಟು ಸ್ಪರ್ಧಿಗಳ ಈ ಹೋರಾಟದಲ್ಲಿ ಅಮನ್‌ಪ್ರೀತ್ 98.9 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರು. ಮುಂದಿನ ಸುತ್ತುಗಳಲ್ಲಿ ಪಂಜಾಬ್‌ನ ಅಮನ್‌ಪ್ರೀತ್ ಮುನ್ನಡೆಯನ್ನು ವಿಸ್ತರಿಸಿದ್ದರು. ಆದರೆ ಎಲಿಮಿನೇಶನ್ ಸುತ್ತಿನಲ್ಲಿ ಜಿತು ಅದ್ಭುತ ರೀತಿಯಲ್ಲಿ 10.8 ಅಂಕ ಗಳಿಸಿದ್ದರಿಂದ ಆರರಿಂದ ಮೂರನೇ ಸ್ಥಾನಕ್ಕೇರುವಂತಾಯಿತು ಮತ್ತು ಕಝಾಕ್‌ಸ್ಥಾನದ ಖ್ಯಾತ ಶೂಟರ್ ವ್ಲದಿಮಿರ್ ಇಸ್ಸಾಚೆಂಕೊ ಅವರನ್ನು ಹೊರಗಟ್ಟಿದರು.ಮುಂದಿನೆರಡು ಸುತ್ತಿನಲ್ಲಿ ಜಿತು ಮತ್ತೆ 10.4 ಮತ್ತು 10.0 ಅಂಕ ಗಳಿಸಿ ಮೇಲುಗೈ ಸಾಧಿಸಿದರು. ಆದರೆ ಚೊಚ್ಚಲ ವಿಶ್ವಕಪ್‌ನಲ್ಲಿ ಆಡಿದ ಅಮನ್‌ಪ್ರೀತ್ ಹಿನ್ನಡೆ ಅನುಭವಿಸಿದರು. ಅಂತಿಮವಾಗಿ ಚಿನ್ನ ನಿರ್ಧಾರದ ಸುತ್ತಿನಲ್ಲಿ ಮ.ತ್ತೆ 10.5 ಅಂಕ ಪಡೆದ ಜಿತು ಅಗ್ರಸ್ಥಾನದೊಂದಿಗೆ ಚಿನ್ನ ಗೆದ್ದರು.ನನ್ನ ಬೆಂಬಲಿಗರ ಸಮ್ಮುಖದಲ್ಲಿ ಭಾರತದಲ್ಲಿ ನಡೆದ ಈ ಕೂಟದಲ್ಲಿ ಚಿನ್ನ ಗೆದ್ದಿರುವುದು ಅದ್ಭುತ ಕ್ಷಣ. ಇದೊಂದು ಬಲುದೊಡ್ಡ ಗೌರವ ಮತ್ತು ಪದಕ ವಿತರಣೆಯ ವೇಳೆ ಭಾರತೀಯ ಧ್ವಜವನ್ನು ಹಾರಿಸುವಾಗ ನನಗಾಗ ಖುಷಿಯನ್ನು ವ್ಯಕ್ತಪಡಿಸಲು ಶಬ್ದಗಳು ಹೊರಡುತ್ತಿಲ್ಲ ಎಂದು ಜಿತು ತಿಳಿಸಿದರು