Advertisement
ಇದರೊಂದಿಗೆ ಸತತ 2ನೇ ಒಲಿಂಪಿಕ್ಸ್‌ನಿಂದ ಸುಶೀಲ್ ಕುಮಾರ್ ಹೊರಬೀಳಲಿದ್ದಾರೆ. ಕೈಗೆ ಗಾಯವಾಗಿರುವ ಕಾರಣ 74 ಕೆ.ಜಿ. ವಿಭಾಗದ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಕೂಟವನ್ನು ಮುಂದೂಡಿ ಎಂದು ಸುಶೀಲ್ ಕುಮಾರ್ ಭಾರತೀಯ ಕುಸ್ತಿ ಒಕ್ಕೂಟಕ್ಕೆ (ಡಬ್ಲ್ಯುಎಫ್ಐ) ಮನವಿ ಸಲ್ಲಿಸಿದ್ದರು. ಆದರೆ ಇದು ತಿರಸ್ಕೃತಗೊಂಡಿತ್ತು. ಇದೀಗ ಸುಶೀಲ್ ಅವರ ವಿಭಾಗದಲ್ಲಿ ಸ್ಪರ್ಧೆಗಿಳಿದ ಜಿತೇಂದರ್ ಕುಮಾರ್ ಗೆದ್ದು ಬಂದಿದ್ದಾರೆ. ಮುಂದಿನ ಕೂಟಗಳಲ್ಲಿ ಜಿತೇಂದರ್ ಉತ್ತಮ ಪ್ರದರ್ಶನ ನೀಡಿದರೆ ಒಲಿಂಪಿಕ್ಸ್ ಪ್ರವೇಶಿಸಲು ಅವಕಾಶ ಇದೆ.
ಖ್ಯಾತ ಕುಸ್ತಿಪಟುಗಳಾದ ದೀಪಕ್ ಪೂನಿಯ (86 ಕೆ.ಜಿ.) ಹಾಗೂ ರವಿ ಕುಮಾರ್ ದಹಿಯಾ (57 ಕೆ.ಜಿ.) ತಮ್ಮ ಎದುರಾಳಿಗಳನ್ನು ಸುಲಭವಾಗಿ ಸೋಲಿಸುವ ಮೂಲಕ ಏಶ್ಯನ್ ಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಸುಮಿತ್ ಮಲಿಕ್ (125 ಕೆ.ಜಿ) ಹಾಗೂ ಸತ್ಯವೃತ್ ಕಾಡಿಯನ್ (97 ಕೆ.ಜಿ.) ಕೂಡ ಜಯ ಸಾಧಿಸಿ ಅರ್ಹತೆ ಪಡೆದಿದ್ದಾರೆ. ಜ. 15ರಿಂದ ಇಟಲಿಯಲ್ಲಿ ಶ್ರೇಯಾಂಕ ಕೂಟ, ಫೆ. 18ರಿಂದ ಹೊಸದಿಲ್ಲಿಯಲ್ಲಿ ಏಶ್ಯನ್ ಚಾಂಪಿಯನ್ ಹಾಗೂ ಮಾ. 27ರಿಂದ ಕ್ಸಿಯಾನ್‌ನಲ್ಲಿ ಒಲಿಂಪಿಕ್ಸ್ ಅರ್ಹತಾ ಕೂಟ ನಡೆಯಲಿದೆ ಎಂದು ಡಬ್ಲ್ಯುಎಫ್ಐ ತಿಳಿಸಿತ್ತು. ಆದರೆ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಕ್ಸಿಯಾನ್ ಕೂಟಕ್ಕೂ ಮೊದಲು ಯಾವುದೇ ಹೊಸ ಅರ್ಹತಾ ಕೂಟವನ್ನು ಭಾರತದಲ್ಲಿ ಆಯೋಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಸುಶೀಲ್ ಕುಮಾರ್‌ಗೆ ಒಲಿಂಪಿಕ್ಸ್ ಬಾಗಿಲು ಸಂಪೂರ್ಣ ಮುಚ್ಚಿದಂತಾಗಿದೆ.