ನವದೆಹಲಿ: ಕ್ಯಾಶ್ ರಿಚ್ ಐಪಿಎಲ್ ಪಂದ್ಯಗಳ ಪ್ರಸಾರಕ್ಕೆ ಪೈಪೋಟಿ ಸಹಜ. ಎಂದಿನಂತೆ ಸ್ಟಾರ್ ನ್ಪೋರ್ಟ್ಸ್ ನೆಟ್‌ವರ್ಕ್ ಟೆಲಿವಿಷನ್‌ನಲ್ಲಿ ನೇರ ಪ್ರಸಾರ ಮಾಡಿದರೆ, ಮೊಬೈಲ್ ವೀಕ್ಷಕರಿಗೆ ಜಿಯೋ ಸಿನೆಮಾ ಉಚಿತ ಸೇವೆ ಒದಗಿಸಲಿದೆ. ಬೇಕಾದ ಕೆಮರಾ ಪೊಸಿಶನ್‌ನೊಂದಿಗೆ ಐದಾರು ಕೋನಗಳಲ್ಲಿ ವೀಕ್ಷಣೆಗೆ ಅವಕಾಶ ನೀಡುವುದು ಜಿಯೋ ಸಿನೆಮಾದ ಹೆಗ್ಗಳಿಕೆ.
ಎರಡೂ ಪ್ರಸಾರಕರು ತಮ್ಮದೇ ಆದ ವೀಕ್ಷಕ ವಿವರಣಕಾರರ ತಂಡಗಳನ್ನು ಹೊಂದಿವೆ. ಜಿಯೋ ಸಿನೆಮಾ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಬಂಗಾಲಿ, ಒರಿಯಾ, ಮಲಯಾಳಂ, ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಿದೆ. ಬುಧವಾರ ಇದರ ಕಮೆಂಟ್ರಿ ಟೀಮ್ ಪ್ರಕಟಗೊಂಡಿದೆ.
ಇಂಗ್ಲಿಷ್‌ನಲ್ಲಿ ಕ್ರಿಸ್ ಗೇಲ್, ಎಬಿ ಡಿ ವಿಲಿಯರ್; ಹಿಂದಿಯಲ್ಲಿ ಆರ್‌ಪಿ ಸಿಂಗ್, ಪಾರ್ಥಿವ್ ಪಟೇಲ್, ಆಕಾಶ್ ಚೋಪ್ರಾ, ನಿಖೀಲ್ ಚೋಪ್ರಾ, ಪ್ರಗ್ಯಾನ್ ಓಜಾ, ರಾಬಿನ್ ಉತ್ತಪ್ಪ, ಜಹೀರ್ ಖಾನ್, ಸುರೇಶ್ ರೈನಾ, ಅನಿಲ್ ಕುಂಬ್ಳೆ; ಮರಾಠಿಯಲ್ಲಿ ಕಿರಣ್ ಮೋರೆ, ಕೇದಾರ್ ಜಾಧವ್, ಧವಳ್ ಕುಲಕರ್ಣಿ; ತೆಲುಗಿನಲ್ಲಿ ಹನುಮ ವಿಹಾರಿ ಕಮೆಂಟ್ರಿ ನೀಡಲಿದ್ದಾರೆ. ಬಂಗಾಲಿ ಕಮೆಂಟ್ರಿ ಟೀಮ್‌ನಲ್ಲಿ ಮಾಜಿ ಆಟಗಾರ್ತಿ ಜೂಲನ್ ಗೋಸ್ವಾಮಿ ಇದ್ದಾರೆ.
ಕನ್ನಡಿಗರ ತಂಡ:
ಕನ್ನಡ ವೀಕ್ಷಕ ವಿವರಣಕಾರರ ತಂಡದಲ್ಲಿ ಖ್ಯಾತನಾಮರಿದ್ದಾರೆ. ವೆಂಕಟೇಶ ಪ್ರಸಾದ್, ಎಸ್. ಅರವಿಂದ್, ವೇದಾ ಕೃಷ್ಣಮೂರ್ತಿ, ಅಮಿತ್ ವರ್ಮ, ಎಚ್. ಶರತ್, ದೀಪಕ್ ಚೌಗುಲೆ ಇವರಲ್ಲಿ ಪ್ರಮುಖರು.