Advertisement

ಜಿಯೋ ಮತ್ತು ಏರ್ ಟೆಲ್ ನಿಂದ ವೈಫೈ ಕರೆ ಸೌಲಭ್ಯ ; ಇಲ್ಲಿದೆ ಸಂಪೂರ್ಣ ಮಾಹಿತಿ

10:17 AM Jan 11, 2020 | Hari Prasad |

ನವದೆಹಲಿ: ನೀವು ಏರ್ ಟೆಲ್ ಅಥವಾ ಜಿಯೋ ಬಳಕೆದಾರರಾಗಿದ್ದಲ್ಲಿ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಈ ಎರಡು ಮೊಬೈಲ್ ಸೇವಾದಾರ ಕಂಪೆನಿಗಳು ಇದೀಗ ಹೊಸ ತಂತ್ರಜ್ಞಾನದ ಕರೆ ಸೌಲಭ್ಯವೊಂದನ್ನು ಗ್ರಾಹಕರಿಗೆ ಪರಿಚಯಿಸುತ್ತಿವೆ, ಅದೇ ವೈಫೈ ಕಾಲಿಂಗ್ ಸೌಲಭ್ಯ. ಅಂದರೆ ಸರಳವಾಗಿ ವಿವರಿಸಬೇಕಾದರೆ ನಿಮ್ಮ ಸ್ಮಾರ್ಟ್ ಫೋನಿನಿಂದ ವೈಫೈ ಇಂಟರ್ನೆಟ್ ಬಳಸಿಕೊಂಡು ಕರೆ ಮಾಡುವ ಸೌಲಭ್ಯ ಇದಾಗಿರುತ್ತದೆ. ನೀವು ಪ್ರೀ ಪೇಯ್ಡ್ ಅಥವಾ ಪೋಸ್ಟ್ ಪೈಯ್ಡ್ ಗ್ರಾಹಕರಾಗಿದ್ದರೂ ನಿಮಗೆ ಈ ಹೊಸ ಸೌಲಭ್ಯ ಲಭಿಸಲಿದೆ

Advertisement

ವೈಫೈ ಕರೆ ಸೌಲಭ್ಯವನ್ನು ಏರ್ ಟೆಲ್ ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ತನ್ನ ಗ್ರಾಹಕರಿಗೆ ಪರಿಚಯಿಸಿತ್ತು. ಪ್ರಾರಂಭದಲ್ಲಿ ಈ ಸೇವೆ ದೆಹಲಿಯ ಎನ್.ಸಿ.ಆರ್. ಪ್ರದೇಶದಲ್ಲಿ ಮಾತ್ರವೇ ಲಭ್ಯವಿತ್ತು. ಇದೀಗ ಏರ್ ಟೆಲ್ ಈ ವಿನೂತನ ಸೇವೆಯನ್ನು ದೆಹಲಿ ಎನ್.ಸಿ.ಆರ್. ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಪಶ್ಚಿಮ ಉತ್ತರ ಪ್ರದೇಶ, ಮಹಾರಾಷ್ಟ್ರ, ಮುಂಬೈ, ಕೊಲ್ಕೊತ್ತಾ, ಪೂರ್ವ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ಸೇವೆಯನ್ನು ಪರಿಚಯಿಸುತ್ತಿದೆ..

ಇನ್ನು ಏರ್ ಟೆಲ್ ಗೆ ಪ್ರಬಲ ಸ್ಪರ್ಧಿಯಾಗಿರುವ ಜಿಯೋ ಸಹ ವೈ ಫೈ ಕರೆ ಸೌಲಭ್ಯವನ್ನು ಜನವರಿ 07ರಿಂದ ಪರಿಚಯಿಸಿದ್ದು ಜನವರಿ 16ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಗಾಗಿ ಜನವರಿ 16ರ ಬಳಿಕ ದೇಶಾದ್ಯಂತವಿರುವ ಜಿಯೋ ಬಳಕೆದಾರರಿಗೆ ಈ ಸೌಲಭ್ಯ ಲಭಿಸುವ ಸಾಧ್ಯತೆಗಳಿವೆ.

ಏನಿದು ವೈ ಫೈ ಕಾಲಿಂಗ್ ಸೌಲಭ್ಯ? ಮತ್ತಿದು ಹೇಗೆ ಕಾರ್ಯನಿರ್ವಹಿಸುತ್ತದೆ?
– ಗ್ರಾಹಕರು ತಾವು ಇದೀಗ ಹೊಂದಿರುವ ಫೋನ್ ನಂಬರ್ ಬಳಸಿಕೊಂಡು ವೈ ಫೈ ನೆಟ್ವರ್ಕ್ ಸಹಾಯದಿಂದ ಮಾಡಬಹುದಾದ ದೂರವಾಣಿ ಕರೆ ಇದಾಗಿದೆ. ಈ ಸೌಲಭ್ಯದಲ್ಲಿ ಗ್ರಾಹಕರ ಮೊಬೈಲ್ ನೆಟ್ವರ್ಕ್ ವೈಫೈ ಸಹಾಯದಿಂದ ಕರೆಗಳನ್ನು ಮಾಡುವುದು/ಸ್ವೀಕರಿಸುವುದರಿಂದ ಗ್ರಾಹಕರು ತಡೆರಹಿತ ಕರೆಗಳನ್ನು ಮಾಡಲು ಇದು ಸಹಕಾರಿಯಾಗಲಿದೆ.

– ಇದನ್ನು ಇನ್ನಷ್ಟು ಸರಳವಾಗಿ ವಿವರಿಸುವುದಾದಲ್ಲಿ, ಜಿಯೋ ಮತ್ತು ಏರ್ ಟೆಲ್ ಗಳು ಈಗಾಗಲೇ ವಾಯ್ಸ್ ಓವರ್ ಎಲ್.ಟಿ.ಇ. (VoLTE) ಕರೆ ಸೌಲಭ್ಯವನ್ನು ಹೊಂದಿದ್ದು ಇದರಲ್ಲಿ ಜಿ.ಎಸ್.ಎಂ. ನೆಟ್ ವರ್ಕ್ ಬದಲಿಗೆ ಇಂಟರ್ನೆಟ್ ಸಂಪರ್ಕದ ಮೂಲಕ ಕರೆಗಳನ್ನು ಮಾಡಲಾಗುತ್ತದೆ. ಈ ವೋಲ್ಟ್ ಗೆ ಹೊಸ ಸೇರ್ಪಡೆಯಾಗಿ ವೈಫೈ ಕರೆ ಸೌಲಭ್ಯ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಎಲ್.ಟಿ.ಇ. ಡಾಟಾ ಬಳಕೆಯ ಬದಲಾಗಿ ವೈಫೈ ಡಾಟಾವನ್ನು ಕರೆ ಮಾಡಲು/ಸ್ವೀಕರಿಸಲು ಬಳಸಿಕೊಳ್ಳಲಾಗುತ್ತದೆ. ಆದರೆ ಇಲ್ಲಿ ನಿಮ್ಮ ಮೊಬೈಲ್ ಉತ್ತಮ ವೈಫೈ ನೆಟ್ ವರ್ಕ್ ಸಂಪರ್ಕವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ.

Advertisement

ವೈಫೈ ಕರೆ ಸೌಲಭ್ಯದ ಪ್ರಯೋಜನಗಳೇನು?
ವೈಫೈ ಕರೆಗಳು ಸಹಜವಾಗಿಯೇ ವೇಗವಾಗಿರುತ್ತವೆ ಮಾತ್ರವಲ್ಲದೇ ಇವುಗಳು ಕೇಬಲ್ ಸಂಪರ್ಕದ ಮೂಲಕ ಕಾರ್ಯನಿರ್ವಹಿಸುವುದರಿಂದ ಇವುಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತವೆ. ಹೀಗಾಗಿ ನೀವು ಮಾಡುವ ಕರೆಗಳು ಸ್ಪಷ್ಟತೆಯಿಂದ ಕೂಡಿರುತ್ತದೆ ಮತ್ತು ನಿಮ್ಮಲ್ಲಿರುವ 4ಜಿ ಕನೆಕ್ಷನ್ ದುರ್ಬಲವಾಗಿದ್ದರೂ ಕಾಲ್ ಡ್ರಾಪ್ ನಂತಹ ಸಮಸ್ಯೆಗಳು ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next