Advertisement

ಜಿಂದಾಲ್‌: ನಿರ್ಧಾರ ಹಿಂಪಡೆಯಲು ಜಾರ್ಜ್‌ ಸಹಮತ?

11:04 PM Jun 09, 2019 | Lakshmi GovindaRaj |

ಬೆಂಗಳೂರು: ಜಿಂದಾಲ್‌ ಸಂಸ್ಥೆಗೆ ಜಮೀನು ಮಾರಾಟ ಮಾಡಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವುದಾದರೆ ಸರ್ಕಾರದ ನಿರ್ಧಾರ ಹಿಂಪಡೆಯುವ ಬಗ್ಗೆ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಸಹಮತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

Advertisement

ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಮ್ಮುಖದಲ್ಲಿ ಎಚ್‌.ಕೆ. ಪಾಟೀಲರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಜಾರ್ಜ್‌ ತಮ್ಮ ಮೇಲೆ ಅನಗತ್ಯ ಆರೋಪ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವುದಾದರೆ ಸಂಪುಟದ ನಿರ್ಧಾರ ವಾಪಸ್‌ ಪಡೆಯುವ ಬಗ್ಗೆ ನನ್ನ ಅಭ್ಯಂತರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಂಪುಟದಲ್ಲಿ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಅವರ ಒತ್ತಡದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಇದು ಸಚಿವ ಜಾರ್ಜ್‌ ಜಿಂದಾಲ್‌ ಕಂಪನಿಯಿಂದ ಪರೋಕ್ಷ ಲಾಭ ಪಡೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ನೇರವಾಗಿ ಆರೋಪ ಮಾಡುವಂತಾಯಿತು.

ಶನಿವಾರದ ಸಭೆಯಲ್ಲಿ ಸಂಪುಟದ ಈ ನಿರ್ಧಾರದ ಹಿಂದೆ ತಮ್ಮದೇನೂ ಪಾತ್ರ ಇಲ್ಲ ಎನ್ನುವುದನ್ನು ಜಾರ್ಜ್‌, ಎಚ್‌.ಕೆ. ಪಾಟೀಲರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಈ ನಿರ್ಧಾರದಿಂದ ಪಕ್ಷದ ಹಿತಕ್ಕೆ ಧಕ್ಕೆಯಾಗುವುದಾದರೆ, ಜಮೀನು ಮಾರಾಟ ನಿರ್ಧಾರ ಹಿಂಪಡೆಯುವ ಬಗ್ಗೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಈ ವಿಷಯದಲ್ಲಿ ಅಂತಿಮವಾಗಿ ಮುಖ್ಯಮಂತ್ರಿಯೇ ತೀರ್ಮಾನ ಕೈಗೊಳ್ಳುವುದರಿಂದ ಅವರಿಗೆ ವಸ್ತುಸ್ಥಿತಿಯ ಮನವರಿಕೆ ಮಾಡಿಕೊಡುವುದಾಗಿ ಸಭೆಯಲ್ಲಿ ಭರವಸೆ ನೀಡಿದ್ದರು ಎಂದು ತಿಳಿದು ಬಂದಿದೆ.

Advertisement

ಸಿಎಂ ಜತೆ ನಡೆಯದ ಸಭೆ: ಜಿಂದಾಲ್‌ ಕಂಪನಿಗೆ ಜಮೀನು ಮಾರಾಟ ಪ್ರಕರಣದ ಕುರಿತು ಭಾನುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗೆ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ನಡೆಸಬೇಕಿದ್ದ ಸಭೆ ಮುಂದೂಡಲಾಗಿದೆ. ದಿನೇಶ್‌ ಗುಂಡೂರಾವ್‌ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿರುವುದರಿಂದ ಜಾರ್ಜ್‌ ಭಾನುವಾರ ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು.

ಆದರೆ, ಭಾನುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಚ್ಚು ಸಮಯ ಮೀಸಲಿಟ್ಟಿದ್ದರು. ಅಲ್ಲದೇ ಜೂ. 12 ರಂದು ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರೊಂದಿಗೆ ಚರ್ಚಿಸಲು ಹೋಗಿದ್ದರು.

ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ಮೇಲೆ ಜಿಂದಾಲ್‌ ಕುರಿತು ಚರ್ಚಿಸಲು ಜಾರ್ಜ್‌ಗೆ ಸಮಯ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ, ದೇವೇಗೌಡರ ನಿವಾಸದಿಂದ ವಾಪಸಾದ ಮುಖ್ಯಮಂತ್ರಿ ವಿಶ್ರಾಂತಿಗೆ ತೆರಳಿದ್ದರಿಂದ ಸಭೆ ನಡೆಯಲಿಲ್ಲ ಎಂದು ತಿಳಿದು ಬಂದಿದೆ. ಸೋಮವಾರ ಮುಖ್ಯಮಂತ್ರಿಯೊಂದಿಗೆ ಸಚಿವ ಜಾರ್ಜ್‌ ಚರ್ಚಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next