Advertisement

ಕಂಠೀರವದಲ್ಲಿ ಜಿಂದಾಲ್ ಫ‌ುಟ್ಬಾಲ್: ಹೈಕೋರ್ಟ್‌ ಕಿಡಿಕಿಡಿ

02:48 AM Jun 28, 2019 | sudhir |

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಫ‌ುಟ್ಬಾಲ್ ಪಂದ್ಯಗಳನ್ನು ನಡೆಸಲು ಜಿಂದಾಲ್ ಸಮೂಹಕ್ಕೆ ಸೇರಿದ ‘ಜಿಂದಾಲ್ ಸೌಥ್‌ವೆಸ್ಟ್‌ ಬೆಂಗಳೂರು ಫ‌ುಟ್ಬಾಲ್ ಪ್ರೈವೇಟ್ ಲಿಮಿಟೆಡ್‌ ಕಂಪನಿ’ಗೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಉಚ್ಚ ನ್ಯಾಯಾಲಯ ಗುರುವಾರ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

Advertisement

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜುನ ಪ್ರಶಸ್ತಿ ವಿಜೇತೆ ಮಾಜಿ ಅಥ್ಲೀಟ್ ಅಶ್ವಿ‌ನಿ ನಾಚಪ್ಪ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ.ಎಚ್.ಟಿ.ನರೇಂದ್ರಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ನ್ಯಾಯಾಲಯದ ಈ ಹೇಳಿಕೆ, ಕೆಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಅಥ್ಲೀಟ್‌ಗಳಿಗೆ ಭಾರೀ ಸಾಂತ್ವನ ನೀಡಿದೆ.

ಈ ವೇಳೆ ಕ್ರೀಡಾಂಗಣ ಸರ್ಕಾರದ ಸ್ವತ್ತು. ಹೀಗಿದ್ದಾಗ ಅದನ್ನು ಬಳಸಿಕೊಳ್ಳಲು ಖಾಸಗಿ ಸಂಸ್ಥೆಗೆ ಅನುಮತಿ ಕೊಟ್ಟು ಒಪ್ಪಂದ ಮಾಡಿಕೊಂಡಿದ್ದು ಹೇಗೆ? ಈ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆಯೇ ಎಂದು ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿತು.

ಜಿಂದಾಲ್ ವಾದವೇನು?: ನ್ಯಾಯಾಲಯದ ಪ್ರಶ್ನೆಗಳನ್ನು ಕೇಳಿದ ನಂತರ ಜಿಂದಾಲ್ ಪರ ವಕೀಲರು ವಾದ ಮಂಡಿಸಿ, ಕಂಠೀರವ ಕ್ರೀಡಾಂಗಣದಲ್ಲಿ ಫ‌ುಟ್ಬಾಲ್ ಪಂದ್ಯಾವಳಿ ಆಯೋಜನೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಸಿಂಥೆಟಿಕ್‌ ಟ್ರ್ಯಾಕ್‌ ಸೇರಿದಂತೆ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲು ಜಿಂದಾಲ್ 6 ಕೋಟಿ ರು. ಖರ್ಚು ಮಾಡಿದೆ. ಫ‌ುಟ್ಬಾಲ್ ಪಂದ್ಯಾವಳಿ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ಯಾವುದೇ ಕ್ರೀಡಾಪಟುವಾದರೂ ಕ್ರೀಡಾಂಗಣವನ್ನು ಬಳಸಬಹುದು. ಅದಕ್ಕೆ ಮುಕ್ತ ಅವಕಾಶವಿದೆ. ಅನುಮತಿ ನವೀಕರಣಕ್ಕೆ ಜಿಂದಾಲ್ ಕಂಪನಿ ಅರ್ಜಿ ಸಲ್ಲಿಸಿದೆ. ಅದನ್ನು ಸರ್ಕಾರ ಇನ್ನೂ ಪರಿಗಣಿಸಬೇಕಿದೆ. ಕ್ರೀಡಾಂಗಣ ಬಳಕೆಗೆ ಕಂಪನಿ ಸರ್ಕಾರಕ್ಕೆ ಹಣ ಪಾವತಿಸುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕ್ರೀಡಾಂಗಣ ಸರ್ಕಾರದ ಆಸ್ತಿ. ನಿಮಗೆ ನೀಡಲಾದ ಅನುಮತಿ ನವೀಕರಣ ಆಗಿಲ್ಲ. ಅನುಮತಿಯಿಲ್ಲದೇ ಸರ್ಕಾರದ ಆಸ್ತಿಯನ್ನು ಉಪಯೋಗಿಸಲು ಅವಕಾಶವಿಲ್ಲ. ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ತಾತ್ಕಾಲಿಕವಾಗಿಯಷ್ಟೇ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಅನೇಕ ತೀರ್ಪುಗಳನ್ನು ನೀಡಿದೆ. ಒಂದೊಮ್ಮೆ ಸರ್ಕಾರ ಕ್ರೀಡಾಂಗಣವನ್ನು ಬಳಸಲು ಖಾಸಗಿಯವರಿಗೆ ಅನುಮತಿ ಕೊಟ್ಟರೆ, ನಿಯಮಗಳ ಪ್ರಕಾರ ಇತರ ಸಂಸ್ಥೆಗಳ ಜೊತೆಗೆ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಿ ಎಂದು ತೀಕ್ಷ್ಣವಾಗಿ ಹೇಳಿತು.

ಪ್ರಕರಣವೇನು?

ಜೆಎಸ್‌ಡಬ್ಲ್ಯೂ ಮಾಲಿಕತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್‌ನೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡು, ಕಂಠೀರವದಲ್ಲಿ ಫ‌ುಟ್ಬಾಲ್ ಪಂದ್ಯ ನಡೆಸಲು ಅನುಮತಿ ನೀಡಿತ್ತು. ಅನಂತರ ಅಲ್ಲಿನ ಸಿಂಥೆಟಿಕ್‌ ಟ್ರ್ಯಾಕ್‌ಗೆ ಬ್ಯಾರಿಕೇಡ್‌ ಅಳವಡಿಸಿ ಅಥ್ಲೀಟ್‌ಗಳಿಗೇ ಪ್ರವೇಶ ನಿರ್ಬಂಧಿಸಲಾಗಿದೆ, ನಿತ್ಯದ ಅಭ್ಯಾಸಕ್ಕೇ ತೊಂದರೆ ಯಾಗಿದೆ ಎಂದು ಆರೋಪಿಸಿ ಅರ್ಜುನ ಪ್ರಶಸ್ತಿ ವಿಜೇತರಾದ ಅಶ್ವಿ‌ನಿ ನಾಚಪ್ಪ ನೇತೃತ್ವದಲ್ಲಿ ಅಥ್ಲೀಟ್‌ಗಳು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 17 ರಾಷ್ಟ್ರೀಯ, ಅಂತಾರಾಷ್ಟ್ರೀಯ ತರಬೇತುದಾರರು, 33 ಕ್ರೀಡಾಪಟುಗಳು ಸೇರಿದ್ದಾರೆ. ಕೆಲವು ವರ್ಷಗಳಿಂದ ಈ ಪ್ರಕರಣದಲ್ಲಿ ಜಿಂದಾಲ್ – ಅಥ್ಲೀಟ್ ನಡುವೆ ಹೋರಾಟ ನಡೆಯುತ್ತಲೇ ಇದೆ.
ಜಿಂದಾಲ್ಗೆ ಅನುಮತಿ ನೀಡಲ್ಲ ಎಂದು ಮುಚ್ಚಳಿಕೆ ನೀಡಿ: ಸೂಚನೆ

ಕಂಠೀರವ ಕ್ರೀಡಾಂಗಣ ಬಳಕೆಗೆ ನೀಡಿರುವ ಅನುಮತಿ ನವೀಕರಣಕ್ಕೆ ಜಿಂದಾಲ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬಾರದು. ಕಾನೂನು ಪ್ರಕ್ರಿಯೆಯನ್ನು ಪಾಲಿಸದೇ ಕ್ರೀಡಾಂಗಣವನ್ನು ಖಾಸಗಿ ಕಂಪನಿಗಳು ಬಳಸುವುದಕ್ಕೆ ಅನುಮತಿ ನೀಡುವುದಿಲ್ಲ ಹಾಗೂ ಕ್ರೀಡಾಂಗಣ ಬಳಸಲು ಜಿಂದಾಲ್ ಕಂಪನಿಗೆ ನೀಡಿದ ಅನುಮತಿಯನ್ನು ನವೀಕರಿಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಸಲ್ಲಿಸುವಂತೆ ಇದೇ ವೇಳೆ ಉಚ್ಛ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿತು. ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮೌಖೀಕವಾಗಿ ನಿರ್ದೇಶಿಸಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು.
Advertisement
Advertisement

Udayavani is now on Telegram. Click here to join our channel and stay updated with the latest news.

Next