Advertisement

ಜಿಂದಾಲ್‌: ಉಪ ಸಮಿತಿಯಲ್ಲಿ ಬಿಎಸ್‌ವೈ ಇರಲಿ: ಸಿಎಂ

01:11 AM Jun 25, 2019 | Team Udayavani |

ಬೆಂಗಳೂರು: “ಜಿಂದಾಲ್‌ ಸಂಸ್ಥೆಗೆ ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ರಚಿಸಲು ನಿರ್ಧರಿಸಿರುವ ಸಂಪುಟ ಉಪ ಸಮಿತಿಯಲ್ಲಿ ತಾವು ಬಯಸಿದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಚ್‌.ಕೆ. ಪಾಟೀಲ ಅವರನ್ನೂ ಸೇರಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ) ಹಮ್ಮಿಕೊಂಡಿದ್ದ “ವಾಣಿಜ್ಯ ಸ್ಪಂದನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉದ್ದೇಶಿತ ಕಂಪನಿಗೆ ಹತ್ತು ವರ್ಷಗಳ ಲೀಸ್‌ ಕಂ ಸೇಲ್‌ಡೀಡ್‌ಗೆ ಭೂಮಿಯನ್ನು ನೀಡಿ ಸ್ವತಃ ಯಡಿಯೂರಪ್ಪ ಸಹಿ ಹಾಕಿದ್ದರು. ಹೀಗೆ ಸಹಿ ಹಾಕಿದ ಮೇಲೆ ಆ ಕಂಪನಿಗೆ ಭೂಮಿ ನೀಡಬೇಕೋ ಬೇಡವೋ ನೀವೇ ಹೇಳಿ ಎಂದು ಉದ್ಯಮಿಗಳನ್ನು ಪ್ರಶ್ನಿಸಿದರು. ಸಭೆಯಿಂದ “ನೀಡಲೇಬೇಕು’ ಎಂಬ ಒಕ್ಕೊರಲ ಕೂಗು ಕೇಳಿಬಂತು.

ಜಿಂದಾಲ್‌ಗೆ ಭೂಮಿ ನೀಡುವ ಬಗ್ಗೆಯೇ ಸಂಪುಟ ಸಭೆಯಲ್ಲಿ ಎರಡೂವರೆ ತಾಸು ಚರ್ಚೆ ನಡೆದಿದೆ. ಕೂಲಂಕಷವಾಗಿ ಪರಿಶೀಲಿಸಿಯೇ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಬಹಿರಂಗ ಚರ್ಚೆಗೂ ಸಿದ್ಧ ಎಂದು ಸವಾಲು ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ, “ಈಗಾಗಲೇ ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಆ ಸಮಿತಿಯಲ್ಲಿ ಬೇಕಿದ್ದರೆ, ವಿರೋಧ ವ್ಯಕ್ತಪಡಿಸುತ್ತಿರುವ ಯಡಿಯೂರಪ್ಪ ಮತ್ತು ಎಚ್‌.ಕೆ.ಪಾಟೀಲ ಅವರನ್ನೂ ಸೇರಿಸಿಕೊಂಡು ತೀರ್ಮಾನ ಕೈಗೊಳ್ಳಲಿ’ ಎಂದೂ ಹೇಳಿದರು.

ಇದೇ ವೇಳೆ ಉದ್ಯಮಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಯಾವುದೇ ರೀತಿಯ ಸಮಸ್ಯೆಗಳಿರಲಿ, ಎಂತಹ ಸಂದರ್ಭದಲ್ಲೂ ಪರಿಹಾರ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಟೌನ್‌ಶಿಪ್‌ ನಿರ್ಮಾಣ, ನಿವೇಶನಗಳ ಹಂಚಿಕೆ ಸೇರಿದಂತೆ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಚಂಬು ಹಿಡ್ಕೊಂಡು ಹೋಗ್ಬೇಕಿತ್ತಾ?: “ಯಾದಗಿರಿಯಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡಿದಾಗ, ಅಲ್ಲಿ ನಿರ್ಮಿಸಿದ ಶೌಚಾಲಯದ ಬಗ್ಗೆಯೂ ಟೀಕೆಗಳು ಬಂದವು. ನಾನು ಆ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಹೋದ ನಂತರ ಅಲ್ಲಿನ ಶೌಚಾಲಯದ ಸೌಲಭ್ಯ ಅದೇ ಶಾಲೆಯ ಮಕ್ಕಳಿಗೆ ಶಾಶ್ವತವಾಗಿ ದೊರೆಯಲಿದೆ. ಈ ನಿಟ್ಟಿನಲ್ಲಿ ಕನಿಷ್ಠ ಯೋಚನೆಯೂ ಮಾಡದೆ ಟೀಕೆ ಮಾಡಲಾಗುತ್ತಿದೆ. ಪ್ರಸ್ತುತ ಅಲ್ಲಿನ ಜನ ಬೆಳಗಾದರೆ ಚಂಬು ಹಿಡ್ಕೊಂಡು ಹೋಗುತ್ತಾರೆ. ನಾನೂ ಹಾಗೇ ಚಂಬು ಹಿಡ್ಕೊಂಡು ಹೋಗಬೇಕು ಎಂದು ಟೀಕಾಕಾರರು ಬಯಸುತ್ತಿದ್ದಾರೆಯೇ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

Advertisement

“ಬೆಂಗಳೂರಿಗರು ನಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ವೈಟ್‌ಫೀಲ್ಡ್‌ನಲ್ಲಿಯ ಐಟಿ ಕ್ಷೇತ್ರಕ್ಕೆ ಅಡಿಗಲ್ಲು ಹಾಕಿದವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು. ಒಂದೂವರೆ ದಶಕದ ಹಿಂದೆ ಪೆರಿಫೆರಲ್‌ ರಿಂಗ್‌ ರೋಡ್‌ ಯೋಚನೆ ನಾನೇ ಮಾಡಿದ್ದೆ. ಆಗ ಆ ಯೋಜನಾ ವೆಚ್ಚ 3,700 ಕೋಟಿ ರೂ. ಈಗ 17 ಸಾವಿರ ಕೋಟಿ ರೂ. ತಲುಪಿದೆ. ಬರೀ ಭೂಸ್ವಾಧೀನದ ಪರಿಹಾರ ಮೊತ್ತವೇ 4,500 ಕೋಟಿ ರೂ. ಆಗಿದೆ. ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಟೀಕೆಗಳು ಬರುತ್ತವೆ. ಹಾಗಿದ್ದರೆ, ನಗರದ ಸಂಚಾರದಟ್ಟಣೆ ಸಮಸ್ಯೆಗೆ ನೀವೇ (ಜನ-ಟೀಕಿಸುವವರು) ಪರಿಹಾರ ಹೇಳಿ. ಅದನ್ನೇ ಮಾಡುತ್ತೇವೆ’ ಎಂದೂ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿ, ಉದ್ಯಮಿಗಳು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರವು ಉದ್ಯಮಿಗಳ ಸಭೆ ಕರೆದು, ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಶೆಟ್ಟಿ, ಚುನಾಯಿತ ಅಧ್ಯಕ್ಷ ಸಿ.ಆರ್‌. ಜನಾರ್ಧನ, ನಿಕಟಪೂರ್ವ ಅಧ್ಯಕ್ಷ ರವಿ ಮತ್ತಿತರರು ಉಪಸ್ಥಿತರಿದ್ದರು.

ಅಷ್ಟು ಸುಲಭವಾಗಿ ಸರ್ಕಾರ ಬೀಳಲ್ಲ: “ಅಷ್ಟು ಸುಲಭವಾಗಿ ಈ ಸರ್ಕಾರ ಬೀಳುವುದಿಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ’ ಎಂದು ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಎಫ್ಕೆಸಿಸಿಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಶ್ಚರ್ಯಕರ ರೀತಿಯಲ್ಲಿ ಈ ಮೈತ್ರಿ ಸರ್ಕಾರ ರಚನೆ ಆಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದರ ಆಯಸ್ಸಿನ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಮೇ 23 ಆಯ್ತು. ಜೂನ್‌ ಕೂಡ ಹೋಯ್ತು. ಈಗ ಮತ್ತೂಂದು ಗಡುವು ನೀಡಲಾಗುತ್ತಿದೆ. ಅಷ್ಟು ಸುಲಭವಾಗಿ ಈ ಸರ್ಕಾರ ಹೋಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next