Advertisement

ಹೆಮ್ಮಾರಿ ಕೊರೊನಾ ತಡೆಗೆ ಜಿಮ್ಸ್‌ ಸನ್ನದ್ಧ

03:45 PM Feb 14, 2020 | Suhan S |

ಗದಗ: ಕೊರೊನಾ ಸೋಂಕಿನಿಂದಾಗಿ (ವೈರಸ್‌) ಚೀನಾದಲ್ಲಿ ಅಲ್ಲೋಲಕಲ್ಲೋಲನ್ನೇ ಎಬ್ಬಿಸಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ರಾಜ್ಯದ ವಿವಿಧೆಡೆ ಸೋಂಕು ಹರಡಿರುವ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದರೂ, ಯಾವೊಂದು ಪ್ರಕರಣವೂ ದೃಢಪಟ್ಟಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌) ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾ ಘಟಕ ಸ್ಥಾಪಿಸಿದೆ. ಸೋಂಕಿತ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿಯೊಂದಿಗೆ ಅಗತ್ಯ ಕ್ರಮಗಳೊಂದಿಗೆ ಸನ್ನದ್ಧವಾಗಿದೆ.

Advertisement

ನೆರೆಯ ರಾಷ್ಟ್ರ ಚೀನಾದಲ್ಲಿ ಕೊರೊನಾ ವೈರಾಣುಗಳು ಜನ ಜೀವನವನ್ನೇ ಹಿಂಡಿಹಿಪ್ಪೆ ಮಾಡಿದೆ. ಕೊರೊನಾ ರೋಗದ ಮಾತೆತ್ತಿದರೆ ಸಾಕು ಇಡೀ ವಿಶ್ವವೇ ಪತರಗುಟ್ಟುತ್ತಿದೆ. ಗಂಭೀರ ಕಾಯಿಲೆಯಿಂದಾಗಿ ಭಾರತದ ಅನೇಕ ಕಡೆ ಕಟ್ಟೆಚ್ಚರ ವಹಿಸಲಾಗಿದೆ. ಅದರೊಂದಿಗೆ ಇತ್ತೀಚೆಗೆ ದಕ್ಷಿಣ ಭಾರತದ ಕೇರಳಾ ಮತ್ತು ರಾಜ್ಯದ ಉಡುಪಿ ಜಿಲ್ಲೆಗಳಲ್ಲಿ ರೋಗದ ಸೋಂಕಿನ ಬಗ್ಗೆ ಅನುಮಾನಗಳು ಮೂಡಿದ್ದರೂ, ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂಬುದೇ ಸಮಾಧಾನಕರ ಸಂಗತಿ.

ಗದಗ ಜಿಲ್ಲೆಯಿಂದ ಉಡುಪಿ, ಮಂಗಳೂರು ಹಾಗೂ ಗೋವಾ ಭಾಗಕ್ಕೆ ಗುಳೆ ಹೋಗುವವರ ಸಂಖ್ಯೆ ಹೆಚ್ಚು. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಕೊರೊನಾ ಭೀತಿ ಶುರುವಾಗಿದೆ. ಹೀಗಾಗಿ ಯಾವ ಸಮಯದಲ್ಲಿ ಯಾರಿಗೆ ಸೋಂಕು ತಗಲುತ್ತದೋ ಎಂಬ ಆತಂಕ ಆವರಿಸಿದೆ. ಆದರೆ, ಜನರಲ್ಲಿರುವ ಭಯವನ್ನು ಹೋಗಲಾಡಿಸಲು ಜಿಮ್ಸ್‌ ದಿಟ್ಟ ಹೆಜ್ಜೆಯಿಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಜಿಮ್ಸ್ ಗೆ ಹೊಂದಿಕೊಂಡಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಹಾಗೂ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಇನ್ಸುಲೇಟೆಡ್‌ ವಾರ್ಡ್‌ ವ್ಯವಸ್ಥೆಗೊಳಿಸಿದೆ.

ವಾರ್ಡ್ನಲ್ಲಿ ಏನೇನಿವೆ?: ಕೊರೊನಾ ಸೋಂಕು ರೋಗವಾಗಿದ್ದರಿಂದ ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚು. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕ್ಷಯ ರೋಗ ವಾರ್ಡ್‌ನ ಒಂದು ಕೋಣೆಯನ್ನು ಕೊರೊನಾ ಸೋಂಕಿತರ ಚಿಕತ್ಸೆಗಾಗಿ ವ್ಯವಸ್ಥೆಗೊಳಿಸಿದೆ. ಅದರಲ್ಲಿ ಐದು ಹಾಸಿಗೆಗಳ ಪೈಕಿ ಮೂರು ಬೆಡ್‌ಗಳಿಗೆ ಕೃತಕ ಉಸಿರಾಟ, ಪಲ್ಸ್‌ ಆಕ್ಸಿಮೇಟರ್‌, ವೆಂಟಿಲೇಟರ್‌ ಸೇರಿದಂತೆ ಐಸಿಯುನಲ್ಲಿರುವ ಎಲ್ಲ ಸೌಕರ್ಯವನ್ನು ಕಲ್ಪಿಸಿದೆ. ಒಂದೊಮ್ಮೆ ಸೋಂಕಿತ ರೋಗಿ ದಾಖಲಾದರೂ, ದಿನದ 24 ಗಂಟೆಗಳ ಕಾರ್ಯ ನಿರ್ವಹಿಸುವಂತೆ ಪ್ರತೀ 8 ಗಂಟೆಗೊಮ್ಮೆ ತಲಾವೊಬ್ಬರು ತಜ್ಞ ವೈದ್ಯ, ನರ್ಸ್‌ ಹಾಗೂ ಡಿಗ್ರುಪ್‌ ಸಿಬ್ಬಂದಿ ಕಾರ್ಯನಿರ್ವಹಿಸುವರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಬಿ.ಸಿ.ಕರೀಗೌಡ್ರ ನೇತೃತ್ವದಲ್ಲಿ 8 ರಿಂದ 10 ಜನರ ನುರಿತ ವೈದ್ಯರ ತಂಡ ಈ ಘಟಕದಲ್ಲಿ ಚಿಕಿತ್ಸೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಆಶಾ ಕಾರ್ಯಕತೆರ್ಯರಿಗೆ ತರಬೇತಿ: ಕೊರೊನಾ ವೈರಾಣುಗಳು ಯಾವುದೇ ರೀತಿಯ ನಿಖರ ಚಿಕಿತ್ಸೆಯಿಲ್ಲ. ಮುಂಜಾಗ್ರತೆ ವಹಿಸುವುದೊಂದೇ ಪರಿಹಾರ. ತೀವ್ರ ಜ್ವರ, ಎದೆ ನೋವಿನಿಂದ ಕೂಡಿದ ಉಸಿರಾಟದ ತೊಂದರೆ ಶೀತ, ಕೆಮ್ಮು, ಗಂಟಲು ಕೆರೆತ, ನ್ಯೂಮೊನಿಯಾ, ಭೇದಿ ಇವು ಕೊರೋನಾ ವೈರಸ್‌ನ ರೋಗ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದರೆ, ತಕ್ಷಣ ಜಿಲ್ಲಾ ಆಸ್ಪತ್ರೆ ಅಥವಾ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯರ್ತೆರಿಗೆ ಇಲಾಖಾ ಸಭೆಗಳಲ್ಲಿ ಮಾಹಿತಿ ನೀಡಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಡಂಗೂರ ಸಾರುವುದರಿಂದ ಜನಸಾಮಾನ್ಯರಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಬಿ.ಸಿ.ಕರೀಗೌಡ್ರ.

Advertisement

ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಇನ್ಸುಲೇಟೆಡ್‌ ವಾರ್ಡ್‌ ವ್ಯವಸ್ಥೆ ಮಾಡಿದ್ದು, ಬುಧವಾರ ಸಂಜೆಯಿಂದ ಪರಿಪೂರ್ಣವಾಗಿ ಸಿದ್ಧಗೊಂಡಿದೆ. ಮೂರು ಬೆಡ್‌ ಗಳಿಗೆ ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ. ಯಾವುದೇ ಕ್ಷಣದಲ್ಲಿ ಸೋಂಕು ಪತ್ತೆಯಾದರೂ, ನುರಿತ ವೈದ್ಯರ ತಂಡ ಚಿಕಿತ್ಸೆಗೆ ಸಿದ್ಧವಾಗಿದೆ. ಡಾ|ಪಿ.ಎಸ್‌.ಭೂಸರಡ್ಡಿ ಜಿಮ್ಸ್ನಿರ್ದೇಶಕ.

 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next