Advertisement

ವ್ಯಕ್ತಿಯ ಕೊಂದು ರುಂಡ ಕೊಂಡೊಯ್ದವರ ಸುಳಿವು ನೀಡಿದ ಜಿಮ್ಮಿ

12:50 PM Sep 16, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಬೇಧಿಸುವಲ್ಲಿ ಜಿಮ್ಮಿ ಯಶಸ್ವಿಯಾಗಿದ್ದಾನೆ! ಸಹೋದರಿಯ ಜತೆ ಅನೈತಿಕ ಸಂಬಂಧ ಬೆಳೆಸಿ, ಆಕೆ ಗರ್ಭ ಧರಿಸಲು ಕಾರಣನಾಗಿದ್ದ ಸ್ನೇಹಿತನನ್ನು ಇಬ್ಬರು ಸಹೋದರರು ಸೇರಿ ಮೂವರು ಕೊಂದು ರುಂಡವನ್ನು ಕೊಂಡೊಯ್ದಿದ್ದರು. ಘಟನಾ ಸ್ಥಳದಲ್ಲಿ ಒಂದು ಸಣ್ಣ ಸುಳಿವು ಸಹ ಪತ್ತೆಯಾಗದಂತೆ ತಮ್ಮ ಕೃತ್ಯ ಮಾಡಿಮುಗಿಸಿದ್ದರು.

Advertisement

ಆದರೆ, ಸ್ಥಳಕ್ಕೆ ಬಂದ ಶ್ವಾನದಳದ ನಾಯಿ ಜಿಮ್ಮಿ ಆರೋಪಿಗಳ ಸುಳಿವನ್ನು ಕೊಟ್ಟಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ. ಜಿಮ್ಮಿ ಈ ಚಾಕಚಕ್ಯತೆಗೆ ಸ್ವತಃ ಪೊಲೀಸ್‌ ಆಯುಕ್ತರೇ ಮೆಚ್ಚಿದ್ದಾರೆ. ಇದೇ ವೇಳೆ ಪೊಲೀಸ್‌ ಆಯುಕ್ತರ ಮುಂದೆ ಜಿಮ್ಮಿ ಸೆಲ್ಯೂಟ್ ಹೊಡೆದು ತನ್ನ ಶಿಸ್ತನ್ನು ಪ್ರದರ್ಶಿಸಿ ಎಲ್ಲರನ್ನು ಅಚ್ಚರಿಗೊಳಿಸಿತು.

ಪ್ರಕರಣ ಸಂಬಂಧ ಒಡಿಶಾದ ಗಾಂಧಿ ಜೆರಾಯ್‌ ಮತ್ತು ಮಧು ಜೆರಾಯ್‌ ಎಂಬ ಸಹೋದರರನ್ನು ಬಂಧಿಸಿದ್ದು, ಇವರ ಭಾವ ಕಾಶೀರಾಮ್‌ ತಲೆಮರೆಸಿಕೊಂಡಿದ್ದಾನೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.11ರಂದು ಎಲೆಕ್ಟ್ರಾನಿಕ್‌ ಸಿಟಿ ಠಾಣಾ ವ್ಯಾಪ್ತಿಯಲ್ಲಿ ದೊಡ್ಡತೋಗೂರಿನ ನಿರ್ಜನ ಪ್ರದೇಶದಲ್ಲಿ ರುಂಡವಿಲ್ಲದ ಅಪರಿಚಿತ ದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಲೆಗೈದ ದುಷ್ಕರ್ಮಿಗಳು, ಮೃತ ದೇಹವನ್ನು ಹುಲ್ಲಿನ ಪೊದೆಯ ಕಡೆ ಎಳೆದೊಯ್ದು ತಲೆ ಮತ್ತು ಮರ್ಮಾಂಗ ಕತ್ತರಿಸಿ ನಗ್ನ ಸ್ಥಿತಿಯಲ್ಲಿ ಬಿಸಾಡಿ ಹೋಗಿದ್ದರು. ಸ್ಥಳದಲ್ಲಿ ಮದ್ಯ ಬಾಟಲಿಗಳು, ಹುಲ್ಲು ರಕ್ತಸಿಕ್ತವಾಗಿತ್ತು, ಮಾಂಸದ ಚೂರುಗಳು ಸಿಕ್ಕಿದ್ದು ಬಿಟ್ಟರೆ ಬೇರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಕಡೆಗೆ ಜಿಮ್ಮಿ ನೀಡಿದ ಸುಳಿವಿನ ಆಧಾರದ ಮೇಲೆ ಕೊಲೆಯಾದ ವ್ಯಕ್ತಿ ಒಡಿಶಾದ ಬಿರಾಂಚಿ ಮಾಂಝಿ ಎನ್ನುವುದು ತಿಳಿಯಿತು. ಈ ಹಿನ್ನೆಲೆಯಲ್ಲಿ ಈತನ ಪೂರ್ವಾಪರ ಪರಿಶೀಲಿಸಿದಾಗ ದೊಡ್ಡ ತೊಗೂರಿನ ಗೋವಿಂದಪ್ಪ ಎಂಬುವರ ಬಾಡಿಗೆ ಮನೆಯಲ್ಲಿ ತನ್ನ ಊರಿನ ಇಬ್ಬರ ಜೊತೆ ವಾಸವಿದ್ದ ಎಂಬುದು ಗೊತ್ತಾಯಿತು. ಇದೇ ಮನೆಯಲ್ಲಿ ವಾಸವಿದ್ದ ಗಾಂಧಿ ಜೆರಾಯ್ ಹಾಗೂ ಮಧು ಜೆರಾಯ್ ಸಹೋದರರನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಹೊರಬಂತು ಎಂದು ಎಂದು ತಿಳಿಸಿದರು.

Advertisement

ಈ ಸಹೋದರರು ತಮ್ಮ ಇಬ್ಬರು ಅಕ್ಕಂದಿರಾದ ಸಾಂಬರಿ ಜೆರಾಯ್ ಮತ್ತು ಸಾಬಿತ್ರಿ ಜೆರಾಯ್ ಜತೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಸಾಂಬರಿ ಜೆರಾಯ್ಗೆ ವಿವಾಹವಾಗಿದ್ದು, ಇವರ ಪತಿ ಕಾಶೀರಾಮ್ ಒಡಿಶಾದಲ್ಲಿ ಇದ್ದಾರೆ. ಬಳಿಕ ತಮ್ಮ ಸ್ನೇಹಿತ ಮೃತ ಬಿರಾಂಜಿ ಮಾಂಝಿಯನ್ನು ಕರೆಸಿಕೊಂಡು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು.

ಈ ಮಧ್ಯೆ ಜುಲೈನಲ್ಲಿ ಸಾಬಿತ್ರಿ ಹೊಟ್ಟೆ ನೋವಿನಿಂದ ತನ್ನ ಸ್ವಂತ ಊರಿಗೆ ಹೋಗಿ ಚಿಕಿತ್ಸೆ ಪಡೆದಾಗ ಈಕೆ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂದಿದೆ. ಈ ಘಟನೆಯಿಂದ ಆತಂಕಕ್ಕೊಳಗಾದ ಸಹೋದರರು ತಮ್ಮ ಅಕ್ಕನ ಸ್ಥಿತಿಗೆ ಬಿರಾಂಚಿ ಮಾಂಝಿಯೇ ಕಾರಣ ಎಂದು ಪತ್ತೆ ಮಾಡಿದರು. ಬಳಿಕ ತಮ್ಮ ಭಾವ ಕಾಶೀರಾಮ್‌ ಕೂಡ ಬಿರಾಂಜಿಯನ್ನು ಕೊಲೆಗೈಯಲು ಸಹಕಾರ ನೀಡಿ ಮೂವರು ಸಂಚು ರೂಪಿಸಿದರು.

ಅದರಂತೆ ಒಡಿಶಾದಿಂದ ಸೆ.10 ರಂದು ಬಂದ ಭಾವ ಕಾಶೀರಾಮ್ ತನ್ನ ಭಾಮೈದುರರ ಮನೆಯಲ್ಲೇ ಕುಳಿತು ಬಿರಾಂಜಿ ಮಾಂಝಿಯ ಕೊಲೆ ಸಂಚು ರೂಪಿಸಿ ಅಂದು ರಾತ್ರಿ 10 ಗಂಟೆಗೆ ಬಿರಾಂಚಿ ಮಾಂಝಿಯನ್ನು ಮದ್ಯ ಸೇವಿಸಲು ಬಾರ್‌ವೊಂದರಲ್ಲಿ ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ. ಬಳಿಕ ನೈಸ್‌ ರಸ್ತೆ ಕಡೆ ಹೋಗುವ ಮೈದಾನಕ್ಕೆ ಕರೆದೊಯ್ದಿದ್ದಾರೆ.

ಮದ್ಯ ಸೇವಿಸುತ್ತ ಸಹೋದರರು ತಾವು ತಂದಿದ್ದ ಕಬ್ಬಿಣದ ರಾಡ್‌ನಿಂದ ಬಿರಾಂಚಿ ಮಾಂಝಿ ತಲೆಗೆ ಬಲವಾಗಿ ಹೊಡೆದು, ನಮ್ಮ ಸಹೋದರಿಯನ್ನು ಗರ್ಭಿಣಿ ಮಾಡಿದ್ದಿಯಾ ಎಂದು ಮೂರ್ನಾಕ್ಕು ಬಾರಿ ಹಲ್ಲೆ ನಡೆಸಿ ಕೊಲೆಗೈದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಆರೋಪಿಗಳು ಬಿರಾಂಜಿಯ ಮರ್ಮಾಂಗ ಮತ್ತು ರುಂಡವನ್ನು ಕತ್ತರಿಸಿಕೊಂಡೊಯ್ದು, 300 ಮೀಟರ್‌ ದೂರದಲ್ಲಿ ಬಿಸಾಡಿ ಹೋಗಿದ್ದರು.ಇತ್ತ ಭಾವ ಕಾಶೀರಾಮ್ ಒಡಿಶಾಗೆ ತೆರಳಿದ್ದಾನೆ. ಈತನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಡಿಸಿಪಿ ಬೋರಲಿಂಗಪ್ಪ ತಿಳಿಸಿದ್ದಾರೆ.

ಜಿಮ್ಮಿ ಕೊಟ್ಟ ಸುಳಿವು
ಬಳಿಕ ಶ್ವಾನದಳದ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಂಡು ಪರಿಶೀಲಿಸಿದಾಗ ಪೊಲೀಸ್‌ ಶ್ವಾನವಾದ ಜಿಮ್ಮಿಯು ಮೃತದೇಹ ಬಿದ್ದಿದ್ದ ಸ್ಥಳ ಸುತ್ತಮುತ್ತ ಓಡಾಡಿದ್ದು, ಸುಮಾರು 1 ಕಿ.ಮೀಟರ್‌ ದೂರದವರೆಗೆ ಕ್ರಮಿಸಿತ್ತು. ಈ ಸ್ಥಳದಲ್ಲಿ ಮೊಬೈಲ್‌ ಮತ್ತು ರುಂಡ ಮತ್ತು ಮರ್ಮಾಂಗ ಪತ್ತೆಯಾಗಿತ್ತು. ಈ ಮೊಬೈಲ್‌ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ಅದರಲ್ಲಿ ಗೋವಿಂದಪ್ಪ ಎಂಬಾತನ ನಂಬರ್‌ ಪತ್ತೆಯಾಗಿದ್ದು, ಈತನನ್ನು ಕರೆದು ವಿಚಾರಣೆ ನಡೆಸಿದಾಗ ಸಹೋದರರು ತಮ್ಮ ಮನೆಯಲ್ಲಿ ನೆಲೆಸಿರುವುದು ತಿಳಿಯಿತು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next