Advertisement

ಮೋದಿ ಓಡಾಡಿದ ಕಾಡಿನಲ್ಲಿ…

09:20 AM Aug 04, 2019 | mahesh |

ಒಂದು ಕಾಲದಲ್ಲಿ ನರಭಕ್ಷಕ ಹುಲಿಯಿಂದಲೇ ಸುದ್ದಿಯಾದ ದಟ್ಟಾರಣ್ಯ, ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌. ಉತ್ತರಾಖಂಡದ ಈ ಕಾಡಿನ ಪ್ರವೇಶ ಅಷ್ಟು ಸುಲಭದ್ದೇನೂ ಅಲ್ಲ. ಭಯಾನಕ ಪರಿಸರ ಆಗಿರುವುದರಿಂದ ಇಲ್ಲಿನ ಪ್ರವೇಶಕ್ಕೆ ಕಟ್ಟುಪಾಡುಗಳು ಹೆಚ್ಚು. “ಮ್ಯಾನ್‌ v/s ವೈಲ್ಡ್‌’ ಎನ್ನುವ ಜನಪ್ರಿಯ ಶೋನ ಟ್ರೈಲರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಕಾಣಿಸಿಕೊಂಡು, ಎಲ್ಲರಿಗೂ ವಿಸ್ಮಯ ಹುಟ್ಟಿಸಿದರು. ಅದೇ ಕಾಡಿನಲ್ಲಿ ಕೆಲ ದಿನಗಳಿದ್ದು, ಪ್ರಾಣಿಗಳ ಚಿತ್ರ ಸೆರೆಹಿಡಿದ ಕನ್ನಡಿಗ, ವನ್ಯಜೀವಿ ಛಾಯಾಚಿತ್ರಕಾರ ಸುಧೀಂದ್ರ ಕೆ.ಪಿ. ಆ ಕಾಡಿನ ಚಿತ್ರವನ್ನು ತಮ್ಮದೇ ಮಾತುಗಳಲ್ಲಿ ಮುಂದಿಟ್ಟಿದ್ದಾರೆ…


Advertisement

– ಆ ಮಹಾಕಾಡಿಗೆ ಕಾಲಿಡುವ ಮುನ್ನ, ಸಣ್ಣಗೆ ಕಂಪಿಸಿದ್ದೆ. ಕೇವಲ ನಾನಲ್ಲ, ನರಭಕ್ಷಕ ಹುಲಿಯ ಕತೆ ಯಾರಿಗೆ ಗೊತ್ತೋ, ಅವರೆಲ್ಲರ ಎದೆಯಲ್ಲೂ ಝಲ್ಲೆನ್ನುವ ಒಂದು ಸದ್ದಾಗುತ್ತೆ. 19ನೇ ಶತಮಾನದಲ್ಲಿ ಇಲ್ಲಿನ ಚಿತ್ರವೇ ಹಾಗಿತ್ತಂತೆ. ಬದರಿ, ಕೇದಾರನಾಥ್‌ ಯಾತ್ರೆಗೆ ಬಂದವರು, ಜೀವ ಕೈಯಲ್ಲಿ ಹಿಡಿದು ಇದೇ ಮಾರ್ಗದಲ್ಲಿಯೇ ಸಾಗಬೇಕಿತ್ತು. ಹಾಗೆ ಭಕ್ತಿಯಲ್ಲಿ ಹೋಗುತ್ತಿದ್ದವರಿಗೆ ಇಲ್ಲಿನ ನರಭಕ್ಷಕ ಹುಲಿಗಳು, ಗಬಕ್ಕನೆ ಬಾಯಿ ಹಾಕಿ, ಶಿವನ ಪಾದ ಸೇರಿಸಿಬಿಡುತ್ತಿದ್ದವು. ಇಲ್ಲಿ ಹುಲಿಗಳಿಂದ ಪ್ರಾಣ ಬಿಟ್ಟ ಮನುಷ್ಯರ, ಅರಣ್ಯಾಧಿಕಾರಿಗಳ ಒಟ್ಟು ಲೆಕ್ಕ ಇವತ್ತಿಗೂ ಸಿಕ್ಕಿಲ್ಲ. ಮಾನವ ರೋಧನೆ ಕಂಡುಂಡ ಕಾಡು. ತೇಜಸ್ವಿಯ “ರುದ್ರಪ್ರಯಾಗದ ನರಭಕ್ಷಕ’ನೂ ಇದೇ ಕಾಡಿನ ಒಬ್ಬ ಪ್ರತಿನಿಧಿ. ಅಂಥ ಸಂದಿಗ್ಧತೆಯಲ್ಲಿ ಆಪತಾºಂಧವನಾಗಿ ಬಂದಿದ್ದೇ, ಜಿಮ್‌ ಕಾರ್ಬೆಟ್‌ ಎಂಬ ಬಿಳಿ ತೊಗಲಿನ ಬೇಟೆಗಾರ. ಮನುಷ್ಯರನ್ನು ಹಿಡಿದಿಡಿದು ತಿನ್ನುತ್ತಿದ್ದ, 19 ಹುಲಿಗಳು, 14 ಚಿರತೆಗಳನ್ನು, ತಿಂಗಳುಗಟ್ಟಲೆ ಕಾದು ಕುಳಿತು, ಹುಡುಕಿ ಹುಡುಕಿ ಕೊಂದುಬಿಟ್ಟ.

ಭಾರತದ ಮೊಟ್ಟ ಮೊದಲ ರಾಷ್ಟ್ರೀಯ ಉದ್ಯಾನವನದ ಹುಟ್ಟಿಗೆ ಈ ಮಹಾಬೇಟೆಯೇ ಮುನ್ನುಡಿ. ತದನಂತರ ಕಾರ್ಬೆಟ್‌ನ ಹೆಸರನ್ನೇ ಈ ಮಹಾರಣ್ಯಕ್ಕೂ ಇಡಲಾಯಿತು. 1318 ಚ.ಕಿ.ಮೀ. ವ್ಯಾಪ್ತಿಯಲ್ಲಿ ಈ ಕಾಡು ಹಬ್ಬಿದೆ. ಒಬ್ಬ ಪ್ರವಾಸಿಗ ಏಕಕಾಲದಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು ಬೃಹತ್‌ ವಿಸ್ತಾರ. ನಿಗೂಢ, ದುರ್ಗಮ, ರೌದ್ರ, ರಮಣೀಯ ಇದರ ಒಡಲಲ್ಲೇ ಇದೆ. ದೇಶದ ಮೊದಲ ಟೈಗರ್‌ ರಿಸರ್ವ್‌ ಫಾರೆಸ್ಟ್‌ ಇದೇ ಆದರೂ, ಇಲ್ಲಿ ಆನೆಗಳ ವೈಯ್ನಾರವೇ ಒಂದು ಚೆಂದ. ಅದನ್ನು ನೋಡಲೆಂದೇ ಇಲ್ಲಿಗೆ ಸಫಾರಿಗರು ಬರುತ್ತಾರೆ. ಢಿಕಾಲ, ಗೆರ್ವಾಲ್‌, ಬಿಜ್ರಾಣಿ, ಸುಲ್ತಾನ್‌ ಎಂಬ ನಾಲ್ಕು ವಿಭಾಗಗಳಲ್ಲಿ ಈ ಕಾಡನ್ನು ವಿಂಗಡಿಸಲಾಗಿದೆ. ನಾನು ಓಡಾಡಿದ್ದು ಢಿಕಾಲದಲ್ಲಿ. ಮೊನ್ನೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರೂ, ಡಿಸ್ಕವರಿ ಚಾನೆಲ್ಲಿನ ಶೋಗೆ ಇದೇ ಢಿಕಾಲದಲ್ಲಿಯೇ ವಿಹರಿಸಿದ್ದನ್ನು ಕಂಡಾಗ, ನೆನಪುಗಳೇಕೋ ಅಲ್ಲಿಗೆ ಓಡಿಬಿಟ್ಟವು.

ನಾನು ಕಂಡಂತೆ, ಢಿಕಾಲ ಅತಿ ಸುಂದರ. ಸಮತಟ್ಟಾದ ಹುಲ್ಲುಗಾವಲು. ನೂರಡಿಗೂ ಮೀರಿದ ಮರಗಳು. ರಾಮಗಂಗಾ ನದಿ ಹರಿಯುವುದೂ ಇಲ್ಲಿಯೇ. ಆನೆಗಳು, ತೀರದಲ್ಲಿ ವಿರಾಜಮಾನವಾಗಿ ಮಡ್‌ಬಾತ್‌ ಮಾಡುತ್ತಿರುತ್ತವೆ. ಹುಲಿಗಳು ನದಿಯ ಬಂಡೆಯ ಮೇಲೆ ಕುಳಿತು, ತಮ್ಮದೇ ತಾಳದಲ್ಲಿ ಬಾಲ ಬಡಿಯುತ್ತಿರುತ್ತವೆ. ಮೂಗಿನಿಂದ ಸಾಂಬಾರ್‌, ಜಿಂಕೆಗಳ ವಾಸನೆಯನ್ನೂ; ಕಂಗಳಿಂದ ಆನೆಗಳ ಮರಿಗಳನ್ನೂ ಕೆಕ್ಕರಿಸಿಕೊಂಡು ನೋಡುವ ದೃಶ್ಯವೇ ಇಲ್ಲಿ ಕ್ಯಾಮೆರಾಗೆ ವಸ್ತು.

ಆ ಪ್ರಾಣಿಗಳ ಜಗತ್ತಿನಲ್ಲಿ ನನಗೆ ಕಾಡಿದಂಥ ಮನುಷ್ಯ, ನಮ್ಮ ಜಿಪ್ಸಿಯ ಡ್ರೈವರ್‌. ಹೆಸರು ಸಲೀಂ, ಐದನೇ ಕ್ಲಾಸ್‌ ಓದಿದ್ದನಷ್ಟೇ. ಪ್ರಾಣಿಗಳ ಭಾಷೆಯನ್ನು ಚೆನ್ನಾಗಿ ಬಲ್ಲವ. ಅದರಲ್ಲೂ ಅವನು “ಎಲಿಫೆಂಟ್‌ ರೀಡರ್‌’. ಆನೆಯ ಹಾವಭಾವ ನೋಡಿ, ಅದರ ಭಾಷೆಯನ್ನು ನಮಗೆ ಹೇಳುತ್ತಿದ್ದ. ಆನೆಯನ್ನು ನೋಡಿ, ಅದು ಚಾರ್ಜ್‌ ಮಾಡುತ್ತೋ, ಇಲ್ಲವೋ? ಅದು ಇನ್ನೊಂದು ಆನೆಗೆ ಏಕೆ ತಿವಿಯುತ್ತಿದೆ? ಕಾಲು ಕೆರೆದು, ಏನು ಹೇಳುತಿದೆ? ಮರಿಯೊಂದಿಗೆ ಅದು ಏನು ಮಾತಾಡುತ್ತಿದೆ? ಅದಕ್ಕೆ ಮರಿ ಹೇಗೆ ರಿಯಾಕ್ಷನ್‌ ಮಾಡುತ್ತೆ?- ಇದನ್ನೆಲ್ಲ ಅಂವ ಮೊದಲೇ ಹೇಳುವುದನ್ನು ಕಂಡಾಗ, ಪ್ರಾಣಿಲೋಕದ ಅವಧೂತನೇ ಅಂತನ್ನಿಸಿಬಿಟ್ಟ.

Advertisement

ಅಲ್ಲೊಂದು ಆನೆ ಗುಂಪು ಇತ್ತು. ನಮ್ಮ ಜೀಪು, ಅದರಿಂದ ತುಂಬಾ ದೂರವಿತ್ತು. ನಮ್ಮನ್ನು ನೋಡಿದ್ದೇ, ಅದು ತನ್ನ ಮರಿಯನ್ನು, ಹಿಂಡಿನ ಮಧ್ಯದೊಳಗೆ ಸೆಳೆದುಕೊಂಡಿತು. “ನೋಡಿ ಸರ್‌, ಅದು ಈವಾಗ, ನಮಗೊಂದು ವಾರ್ನಿಂಗ್‌ ಕೊಡುತ್ತೆ’ ಅಂದ ಸಲೀಂ. ಅದು ಒಂದು ಸಲ ಬಾಲ ಮೇಲಕ್ಕೆತ್ತಿ, ನಮ್ಮ ವೆಹಿಕಲ್‌ನ ದಿಕ್ಕಿಗೆ, ಅರ್ಧಕ್ಕೆ ಓಡಿ ಬಂದಿತ್ತು! ಇಷ್ಟಾದರೂ ಸಲೀಂ, ವೆಹಿಕಲ್‌ ಸ್ಟಾರ್ಟ್‌ ಮಾಡದಿರುವುದನ್ನು ಕಂಡು, “ಯಾಕೆ?’  ಎಂದು ಕೇಳಿದೆ. “ಇಲ್ಲ, ಅದು ಬರೋದಿಲ್ಲ ಸರ್‌’ ಅಂದ. ಕೆಲ ಹೊತ್ತು ಅಲ್ಲೇ ಇದ್ದೆವು. “ನೋಡಿ ಸರ್‌, ಈಗ ಬಂದೇ ಬರುತ್ತೆ ಅದು’ ಅಂದ. ನಿಮಿಷದ ಮುಳ್ಳು ಒಂದು ರೌಂಡ್‌ ಹೊಡೆದಿತ್ತಷ್ಟೇ… ಆನೆ ಅಟ್ಟಿಸಿಕೊಂಡು ಬಂತು. ಈತ ಜೀಪ್‌ ತಿರುಗಿಸಿ, ಹೊರಟೇ ಬಿಟ್ಟ! ಸ್ಟೀರಿಂಗ್‌ ತಿರುಗಿಸುತ್ತಲೇ ಸಲೀಂ ಫಿಲಾಸಫಿ ನುಡಿದ, “ಸರ್‌, ಕಾರಣ ಕೊಡದೇ ಅಟ್ಯಾಕ್‌ ಮಾಡೋದು, ಮನುಷ್ಯ ಮಾತ್ರ. ಪ್ರಾಣಿಗಳೆಲ್ಲ ಮೊದಲು, ಒಂದಲ್ಲಾ ಒಂದು ರೀತಿಯಲ್ಲಿ ವಾರ್ನಿಂಗ್‌ ಕೊಡುತ್ತವೆ’ ಅಂದ. ನನಗೂ ನಿಜ ಅಂತನ್ನಿಸಿತು.

ಅಲ್ಲಿಯೇ ಜಿಂಕೆಗಳು ಕೂಗುತ್ತಿದ್ದವು. ಜಿಪ್ಸಿಯ ಬ್ರೇಕ್‌ ಒತ್ತಿದ, ಸಲೀಂ. “ಸರ್‌ ಇಲ್ಲೇ ಸುತ್ತಮುತ್ತ ಒಂದು ಟೈಗರ್‌ ಇದೆ. ಬಂದೇ ಬರುತ್ತೆ, ನೋಡಿ’ ಅಂತೆಳಿ 3 ಗಂಟೆ ಕಾಲ, ಒಂದೇ ಕಡೆಯಲ್ಲಿ ನಮ್ಮನ್ನು ನಿಲ್ಲಿಸಿದ್ದ ಪುಣ್ಯಾತ್ಮ. ಅವನ ನಿರೀಕ್ಷೆ ಸುಳ್ಳಾಗಲಿಲ್ಲ. ಹುಲಿ ಬಂತು. ಆನೆಗಳ ಮಡ್‌ಬಾತ್‌ಗೂ ಮುನ್ನ ಹೇಳಿದ, “ಸರ್‌ ಇನ್ನೈದು ನಿಮಿಷದೊಳಗೆ ಅದು ಮಣ್ಣೆರಚಿಕೊಳ್ಳುತ್ತೆ. ನೀವು ರೆಡಿಯಾಗಿರಿ, ಶಾಟ್‌ ಸಿಗುತ್ತೆ’ ಅಂದಿದ್ದು ಕೂಡ ಸುಳ್ಳಾಗಲಿಲ್ಲ.

ಕಾರ್ಬೆಟ್‌ ಕಾಡು, ನಿಜಕ್ಕೂ ಆನೆ- ಹುಲಿಗಳ ಸಂಘರ್ಷ ಭೂಮಿ. ಆನೆಗಳದ್ದು ಇಲ್ಲಿ ಎಲ್ಲೆಂದರಲ್ಲಿ ದೊಡ್ಡ ಸಂಸಾರ. ಒಂದೊಂದು ಗುಂಪಿನಲ್ಲಿ 200- 250 ಆನೆಗಳನ್ನು ಕಾಣಬಹುದು. ಅದರಲ್ಲಿರುವ ಮರಿಗಳನ್ನು ಹುಲಿಗಳು ಹೊಂಚು ಹಾಕಿ, ಹೊಸೆಯಲು ಕಾದಿರುತ್ತವೆ. ಆದರೆ, ದೊಡ್ಡಾನೆಗಳು ಇರೋದ್ರಿಂದ ಅದು ಸಾಧ್ಯ ಆಗುವುದಿಲ್ಲ. ಕೇವಲ 20 ಸೆಕೆಂಡುಗಳಲ್ಲಿ ನಡೆಯುವ ಈ ದಾಳಿಯ ಪ್ರಯತ್ನ, ನನ್ನ ಕಣ್ಣೆದುರೂ ಆಯಿತು. ಕೈಯಲ್ಲಿ ಕ್ಯಾಮೆರಾ ಹಿಡಿದೂ, ಆ ದೃಶ್ಯವನ್ನು ಸೆರೆಹಿಡಿಯುವಲ್ಲಿ ಸೋತಿದ್ದೆ.

ಕೆಲ ವರ್ಷಗಳ ಹಿಂದೆ, ಒಬ್ಬ ಫೋಟೋಗ್ರಾಫ‌ರ್‌ ಇಲ್ಲಿ ತೆಗೆದ ಚಿತ್ರದ ಬಗ್ಗೆ ಸಲೀಂ ಹೇಳಿದ. ರಾಮಗಂಗಾ ನದಿಯ ನೀರೊಳಗೆ ಒಂದು ಹುಲಿ ಅರ್ಧ ದೇಹ ಮುಳುಗಿಸಿ, ಕುಳಿತಿತ್ತಂತೆ. ಒಂದು ದೊಡ್ಡ ಆನೆಹಿಂಡು, ಅದೇ ಜಾಗಕ್ಕೆ ಬಂತು. ಅಲ್ಲಿ ಹುಲಿ ಇದೆಯೆಂದು ಆನೆಗೂ ಗೊತ್ತಿಲ್ಲ. ಹುಲಿ ತನ್ನ ಪಾಡಿದೆ ತಾನಿದೆ. ಆನೆ ಅದರ ಪಾಡಿಗೆ ನೀರು ಕುಡಿಯುತ್ತಾ, ಸ್ನಾನ ಮಾಡುತ್ತಾ ಇದೆ. ಕೊನೆಗೂ ಆ ಹುಲಿ ಅಟ್ಯಾಕ್‌ ಮಾಡಲಿಲ್ಲ. ದಿಲ್ಲಿ ಮೂಲದ ಫೋಟೋಗ್ರಾಫ‌ರ್‌ ಅದನ್ನು ತೆಗೆಯುವಾಗ, ಸಲೀಂ ಮೂಗಿನ ಮೇಲೆ ಬೆರಳಿಟ್ಟಿದ್ದನಂತೆ. ಅವನ ಸಫಾರಿ ಅನುಭವದಲ್ಲಿ ಇಂಥದ್ದು ದಾಖಲಾಗಿಯೇ ಇರಲಿಲ್ವಂತೆ.

ಭಾರತದಲ್ಲಿ ತೀರಾ ಅಪರೂಪವೆನಿಸಿದ, ಬೆಕ್ಕಿಗಿಂತ ತುಸು ದೊಡ್ಡದ ಮಾರ್ಟಿನ್‌; ರಾತ್ರಿಯಿಡೀ ರಾಮಗಂಗಾದ ನೀರಿನೊಳಗೆ ಮೀನು ಶಿಕಾರಿ ನಡೆಸುವ, ಫಿಶಿಂಗ್‌ ಓಲ್‌ ಇಲ್ಲಿನ ಮತ್ತೂಂದು ಆಕರ್ಷಣೆ. ಈ ಕಾಡಿನೊಳಗೇ ಗರ್ಜಿಯಾ ಎನ್ನುವ ದೇವಿಗೆ ಗುಡಿ ಕಟ್ಟಲಾಗಿದೆ. ವರ್ಷಕ್ಕೊಮ್ಮೆ ಜಾತ್ರೆಯೂ ನಡೆಯುತ್ತೆ. ಆಗ ಮಾತ್ರವೇ ಜನರಿಗೆ ಇಲ್ಲಿ ಪ್ರವೇಶ. ಅತಿ ಭದ್ರತೆಯಲ್ಲಿ, ಇಲ್ಲಿ ಭಕ್ತಿ ಅರಳುವ ಹೊತ್ತು ಅದು.

ಆ ಕಾಡಿನಿಂದ ಮರಳುವಾಗ, ಆಕಾಶದೆತ್ತರದ ಮರಗಳನ್ನು ನೋಡುತ್ತಲೇ ಇದ್ದೆ. ಇಲ್ಲಿ ಯಾವ ಮರದಲ್ಲಿ ಜಿಮ್‌ ಕಾರ್ಬೆಟ್‌ ಕೂತಿದ್ದ ಅಂತ. ಕಾಡಿನ ಗುಂಗೇ ಹಾಗೆ ನೋಡುವಂತೆ ಪ್ರೇರೇಪಿಸಿತೋ, ಇಲ್ಲಿಯೇ ಶೂಟ್‌ ಆದ ಅಜಯ್‌ ದೇವಗನ್‌ನ “ಕಾಲ್‌’ ಸಿನಿಮಾ ನೋಡಿ ನೋಡಿ, ಹಾಗಾಗಿದ್ದೆನೋ… ಇಲ್ಲ ಇಲ್ಲ, ಅದು ತೇಜಸ್ವಿಯ “ರುದ್ರಪ್ರಯಾಗದ ನರಭಕ್ಷಕ’ನ ಕಿತಾಪತಿಯೇ ಇದ್ದಿರಬೇಕೆಂದು, ಕಾರ್ಬೆಟ್‌ನ ಪ್ರತಿಮೆ ನೋಡುತ್ತಲೇ, ಆ ಕಾಡಿಗೆ ಬೆನ್ನು ಹಾಕಿದೆ.

ಮೋದಿ ಓಡಾಡಿದ ಜಾಗ ಹೇಗಿದೆ?
ನಾನು ಕಂಡಂತೆ, ಮೋದಿ ನಡೆದಾಡಿದ “ಢಿಕಾಲ’ ಜಾಗ ಭಯಾನಕ. ಅವರು ತೆಪ್ಪದಲ್ಲಿ ಹೋಗಿದ್ದೂ, ರಾಮಗಂಗಾ ನದಿಯಲ್ಲೇ. ಅಲ್ಲಿ ಒಳಗೆ ಯಾವುದೇ ತೆಪ್ಪಗಳಿಲ್ಲ, ಶೂಟಿಂಗ್‌ಗೋಸ್ಕರ ಮಾಡಿಕೊಂಡಿದ್ದಾರಷ್ಟೇ. ಹಾಗೆ ತೆಪ್ಪದಲ್ಲಿ ಹೋಗುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಆ ನದಿಯಲ್ಲಿ ಇರೋದೇ ಮೊಸಳೆಗಳು. ಯಾರನ್ನೂ ಅಲ್ಲಿ ಇಳಿಯಲು ಬಿಡೋದಿಲ್ಲ. ನೀರಿನಲ್ಲಿ ಬಂಡೆಗಳೂ ಇರುವುದರಿಂದ, ಅದ್ಹೇಗೆ ಸೇಫ್ಟಿ ಮಾಡಿಕೊಂಡರೋ ಕಾಣೆ. ದೇಶದ ಪ್ರಧಾನಿಯೊಬ್ಬ ವನ್ಯಜೀವಿಯ ಕುರಿತು ಕಾಳಜಿ ಮೂಡಿಸಲು ಈ ರೀತಿಯ ಶೋಗಳಲ್ಲಿ ಬಂದಿದ್ದು ನಿಜಕ್ಕೂ ಹೆಮ್ಮೆ.

ಪ್ರಧಾನಿ ಬಂದ್ದಿದೇ ಗೊತ್ತಾಗಲಿಲ್ಲ!
ನಿಜಕ್ಕೂ ಮೋದಿ, ಕಾರ್ಬೆಟ್‌ ಕಾಡಿಗೆ ಬರುತ್ತಾರೆನ್ನುವ ಸುದ್ದಿ ಯಾರಿಗೂ ತಿಳಿದೇ ಇರಲಿಲ್ಲ ಎನ್ನುತ್ತಾರೆ, ಇಲ್ಲಿನ ಜಿಪ್ಸಿ ಡ್ರೈವರ್‌ ಬಾಬ್ಬಿಸಿಂಗ್‌. ಮೊನ್ನೆ ಯಾವಾಗ ಡಿಸ್ಕವರಿ ಶೋನ ಟ್ರೈಲರ್‌ ಓಡಾಡಿತೋ ಆಗಲೇ ವಿಚಾರ ತಿಳಿದಿದ್ದು! ಅಲ್ಲಿಯವರೆಗೆ ಇಲ್ಲಿನ ಮುಖ್ಯ ಅರಣ್ಯಾಧಿಕಾರಿಗಳಿಗೆ ಮಾತ್ರವೇ ಗೊತ್ತಿತ್ತು. ಆ 3 ದಿನ, ಹೊರಗಿನವರಿಗೆ ಸಫಾರಿ ನಿಲ್ಲಿಸಲಾಗಿತ್ತು. ಸಾಹಸಿಗ ಬೇರ್‌ ಗ್ರಿಲ್ಸ್‌ ಅಷ್ಟೂ ದಿನ ಇಲ್ಲಿದ್ದರು. ಆದರೆ, ಪ್ರಧಾನಿಯವರು ಒಂದು ದಿನ ಮಾತ್ರವೇ ಶೂಟಿಂಗ್‌ನಲ್ಲಿದ್ದರು ಎಂದು “ಬಹುಮುಖಿ’ಗೆ ಬಾಬ್ಬಿ ಸಿಂಗ್‌ ಮಾಹಿತಿ ಕೊಟ್ಟರು.

ಅಲ್ಲಿಗೆ ಹೋಗೋದು ಕಷ್ಟ?
– ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ ತುಂಬಾ ಕಟ್ಟುಪಾಡುಗಳು.
– ಒಬ್ಬ ಮನುಷ್ಯನಿಗೆ 3 ದಿನದ ಮೇಲೆ ಇಲ್ಲಿರಲು ಅನುಮತಿ ಇಲ್ಲ.
– ವರ್ಷಕ್ಕೆ ಒಂದೇ ಸಲ ಭೇಟಿಗೆ ಅವಕಾಶ.
– ಪ್ರತಿ ಸಫಾರಿಗನ ಆಧಾರ್‌ ಕಾರ್ಡ್‌ ಅನ್ನೂ ಇಲ್ಲಿ ಲಿಂಕ್‌ ಮಾಡ್ತಾರೆ.

ನಿರೂಪಣೆ: ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next