Advertisement

ಸಮಸ್ಯೆ ಇತ್ಯರ್ಥಗೊಳಿಸಲು ಕಾರ್ಯಕ್ರಮ ಸಹಕಾರಿ

02:57 PM Oct 16, 2022 | Team Udayavani |

ರಾಮನಗರ: ಜನರ ಬಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೆರಳಿ ಹಲವು ವರ್ಷಗಳ ಸಮಸ್ಯೆ ಇತ್ಯರ್ಥಗೊಳಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ನೆರವಾಗುತ್ತಿದೆ ಎಂದು ಶಾಸಕ ಎ. ಮಂಜುನಾಥ್‌ ಹೇಳಿದರು.

Advertisement

ತಾಲೂಕುನ ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ಗ್ರಾಪಂ ವ್ಯಾಪ್ತಿಯ ಮುತ್ತರಾಯನಗುಡಿ ಪಾಳ್ಯದಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸರ್ಕಾರದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಸಾರ್ವಜನಿಕರ ಸ್ವತ್ತುಗಳಿಗೆ ಎಲ್ಲಿ ಹಕ್ಕಿರುವುದಿಲ್ಲವೋ ಅವರಿಗೆ ಹಕ್ಕನ್ನು ಕೊಡಿಸುವುದು ನಿಜವಾದ ಅಭಿವೃದ್ಧಿ ಕಾರ್ಯ ಎಂದು ಭಾವಿಸಿದ್ದೇನೆ. ರಸ್ತೆ, ಚರಂಡಿ, ಡಾಂಬರು ಕೆಲಸ ಮಾಡುವುದು ಅಷ್ಟೆ ಅಭಿವೃದ್ಧಿ ಕೆಲಸವಲ್ಲ. ಈಗಾಗಲೇ ಗೋಪಳ್ಳಿ, ಕೆಂಪಯ್ಯ ನ ಪಾಳ್ಯ ಗ್ರಾಮದ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ಸಾಗುವಳಿ ಹಕ್ಕುಪತ್ರ ವಿತರಣೆ: ಬಿಡದಿ ಹೋಬಳಿಯ ರಾಮನಹಳ್ಳಿ, ಗೋಪಳ್ಳಿ ಗ್ರಾಮ ಹೊರತು ಪಡಿಸಿದರೆ ಇನ್ನುಳಿದ ಗ್ರಾಮಗಳ ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಲಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಸಾಗುವಳಿ ಪತ್ರ ಮತ್ತು ನೈಸ್‌ ಸಂಸ್ಥೆ ಪಹಣಿ ಬರುತ್ತಿರುವ ಮನೆಗಳಿಗೆ ಹಕ್ಕುಪತ್ರ ನೀಡಲಾಗುವುದು. ಮುತ್ತರಾಯನಗುಡಿಪಾಳ್ಯದ ಜನರಿಗೆ ಮನೆ ಇಲ್ಲದವರಿಗೆ ಜಾಗ ಗುರುತಿಸಿದ್ದು, ಅರ್ಹ ಪಲಾನುಭವಿಗಳಿಗೆ ನಿವೇಶನ ಕೊಡಲಾಗುವುದು. 1,250 ಹಳ್ಳಿಗಳಿಗೆ 850 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಮನೆಗಳಿಗೆ ನೀರು ಕುಡಿಯುವ ನೀರು ಪೂರೈಸುವ ಯೋಜನೆಗೆ ಹದಿನೈದು ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ತಹಶೀಲ್ದಾರ್‌ ಎಂ.ವಿಜಯ್‌ಕುಮಾರ್‌ ಮಾತನಾಡಿ, ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಸಾಮರಸ್ಯವಿದ್ದರೆ ಸಮಸ್ಯೆ ರಹಿತ ಗ್ರಾಮವಾಗಿ ಮಾಡಬಹುದು. ಶಾಸಕರ ಮಾರ್ಗದರ್ಶನ ಮತ್ತು ಸರ್ಕಾರದ ಆಶಯದಂತೆ ತಿಂಗಳ ಮೂರನೇ ಶನಿವಾರ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆ ಬಗೆಹರಿಯುತ್ತಿವೆ ಎಂದರು.

ಹಕ್ಕುಪತ್ರ ವಿತರಣೆ: ಇದುವರೆಗೆ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ಕೊಂಡಿರುವ ಸುಮಾರು 800 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಬಹಳ ಹಿಂದುಳಿದ ಜನ ವಾಸಿಸುತ್ತಿರುವ ಈ ಕಂದಾಯ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಲ್ಲ ಇಲಾಖಾ ಅಧಿಕಾರಿಗಳು ಹಾಜರಿದ್ದು, ನಿಮ್ಮಗಳ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಿರಿ, ಪಹಣಿ ತಿದ್ದುಪಡಿ, ಪೌತಿ ಖಾತೆ, ಸ್ಮಶಾನ, ಹಕ್ಕುಪತ್ರ, ನಕಾಶೆ ರಸ್ತೆ ಗಳಂತಹ ಹಲವು ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಕೆಲಸ ಮಾಡಲಾಗುವುದು. ಈ ಗ್ರಾಮದ ಸುಮಾರು 103 ಕುಟುಂಬದ ಸ್ವತ್ತುಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.

Advertisement

ಸವಲತ್ತು ಪಡೆಯಿರಿ: ತಾಪಂ ಇಒ ಪ್ರದೀಪ್‌ ಮಾತನಾಡಿ, ಕೇವಲ ಕಂದಾಯ ಇಲಾಖೆ ಸಮಸ್ಯೆಗಳಿಗೆ ಮಾತ್ರ ಈ ಕಾರ್ಯಕ್ರಮ ಎಂಬುದನ್ನು ಅರ್ಥೈಸದೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಲು ನೆರವಾಗಲಿದೆ. ಮನರೇಗಾ ಯೋಜನೆಯಡಿ ಸಮುದಾಯ, ವೈಯುಕ್ತಿಕ ಸವಲತ್ತುಗಳನ್ನು ಪಡೆಯಿರಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸ್ವತ್ತು ಸಂಪೂರ್ಣ ವಾಗಿದ್ದು, ಅದೇ ರೀತಿ ಅಂಗನವಾಡಿಗಳಿಗೆ ಇ-ಸ್ವತ್ತು ಮಾಡಲು ಕ್ರಮ ವಹಿಸಲಾಗುವುದು ಎಂದರು.

ಉಚಿತ ಆರೋಗ್ಯ ತಪಾಸಣೆ: ತಾಲೂಕು ಪ್ರಾಥಮಿಕ ಆರೋಗ್ಯ ಅಧಿಕಾರಿ ಶಶಿಕಲಾ ಮಾತನಾಡಿ, ಆರೋಗ್ಯ ಇಲಾಖಾ ಸಿಬ್ಬಂದಿಗಳು ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪಡೆಯುವುದು, ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಪಡೆಯಬಹುದು, ಗ್ರಾಮದ ಸುಚಿತ್ವದಂತಹ ವಿಷಯಗಳನ್ನು ಅನುಸರಿಸುವ ಮೂಲಕ ಆರೋಗ್ಯ ಕಾಳಜಿಗೆ ಆದ್ಯತೆ ನೀಡಿದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದರು.

ನೋಡಲ್‌ ಅಧಿಕಾರಿ ಉಪ ವಿಭಾಗಾಧಿಕಾರಿ ಮಂಜುನಾಥ್‌, ಉಪ ತಹಸೀಲ್ದಾರ್‌ ಮಂಜುನಾಥ್‌, ಶಂಕರ್‌, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ರೇವಣಸಿದ್ದಯ್ಯ, ಸದಸ್ಯ ಲಕ್ಷ್ಮಣ್‌, ಕೃಷ್ಣ, ಉದಯ್‌ ಕುಮಾರ್‌, ಹೊಂಬೇಗೌಡ, ಸಿಆರ್‌ಪಿ ಚಿಕ್ಕವೀರಯ್ಯ, ಮುಖಂಡ ರಂಗಸ್ವಾಮಿ, ಪಿಡಿಒ ಕೃಷ್ಣಪ್ಪ, ಕಾರ್ಯದರ್ಶಿ ಯೋಗೇಶ್‌ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

ನಾಗರಿಕ ಸಮಸ್ಯೆಗಳಿಗೆ ಮೀನಮೇಷ ಎಣಿಸದೆ ಕಾರ್ಯ ನಿರ್ವಹಿಸಬೇಕು. ಪ್ರತಿಯೊಬ್ಬರ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವುದೇ ಜನಪ್ರತಿನಿಧಿ ಮತ್ತು ಅಧಿಕಾರಿಳ ಕೆಲಸ. ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಯೋಜನೆ ಸಹಕಾರಿಯಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಮತ್ತಷ್ಟು ಚುರುಕಾಗಿರುವಂತೆ ಮಾಡುತ್ತದೆ. – ಮಂಜುನಾಥ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next