ಹನುಮಸಾಗರ: ಇಲ್ಲಿನ ವಿವೇಕಾನಂದ ವೃತ್ತದ ಹತ್ತಿರವಿರುವ ಗಾಂವಠಾಣ ಜಾಗವು ಗ್ರಾಪಂಗೆ ಸೇರಿದ್ದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶ ಮಾಡಿ ಒಂದೂವರೆ ವರ್ಷ ಕಳೆದರೂ ಜಾರಿಯಾಗಿಲ್ಲ.
ಗ್ರಾಪಂಗೆ ಸೇರಿದ ಗಾಂವಠಾಣ ಜಾಗೆಯಲ್ಲಿ 2015ರಲ್ಲಿ ಹನುಮಂತಪ್ಪ ಸಾಲಿ ಎಂಬುವವರು ಗ್ರಾಪಂ ಗಮನಕ್ಕೂ ತರದೇ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿದ್ದರು. ಬಳಿಕ ಗ್ರಾಪಂನಿಂದ ನೋಟಿಸ್ ಜಾರಿ ಮಾಡಿ ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತರಬೇಕು ಸೂಚನೆ ನೀಡಿದಾಗ, ಸಮರ್ಪಕವಾದ ದಾಖಲೆಗಳನ್ನು ಒದಗಿಸದಿರುವ ಹಿನ್ನಲೆಯಲ್ಲಿ ಮೊದಲ ಬಾರಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ತೆರವುಗೊಳಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂನಲ್ಲಿ ಮೊಕದ್ದಮೆ ದಾಖಲಾಗಿ ವಿಚಾರಣೆ ಹಂತದಲ್ಲಿರುವಾಗ 2ನೇ ಬಾರಿ ಗ್ರಾಪಂ ಗಮನಕ್ಕೆ ತರದೇ ರಜೆ ದಿನದಂದು ಅದೇ ಸ್ಥಳದಲ್ಲಿ ಶೆಡ್ ನಿರ್ಮಾಣ ಮಾಡಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಗ್ರಾಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹನುಮಸಾಗರ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಗಾಂವಠಾಣ ಜಾಗದಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡ ತೆರವುಗೊಳಿಸುವವರೆಗೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಅಂದಿನ ತಹಶೀಲ್ದಾರ್ ಎಂ. ಗಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಗಾಂವಠಾಣಾ ಜಾಗದಲ್ಲಿ ನಿರ್ಮಿಸಿರುವ ಶೆಡ್ ಪರಿಶೀಲನೆ ನಡೆಸಿ ತಾಪಂಗೆ ವರದಿ ಸಲ್ಲಿಕೆ ಮಾಡಲಾಗಿತ್ತು. ಬಳಿಕ ಮತ್ತೆ ಪೊಲೀಸ್ ಭದ್ರತೆಯಲ್ಲಿ ಶೆಡ್ ತೆರವು ಮಾಡಲಾಗಿತ್ತು.
ಒಂದೂವರೆ ವರ್ಷ: ಗಾವಠಾಣ ಜಾಗಕ್ಕೆ ಸಂಬಂಧಿಸಿದಂತೆ ಜಿಪಂನಲ್ಲಿ ಸತತ 2 ವರ್ಷ ವಿಚಾರಣೆ ನಡೆಸಿ ಹನುಮಂತಪ್ಪ ಸಾಲಿ ಅವರ ಬಳಿ ಸೂಕ್ತ ದಾಖಲೆಗಳು ಇಲ್ಲದಿರುವುದನ್ನು ಪರಿಗಣಿಸಿ, ಗ್ರಾಪಂ ಅನಧಿಕೃತ ಕಟ್ಟಡ ತೆರವು ಮಾಡಿದ್ದು ಸೂಕ್ತವಾಗಿದೆ ಎಂದು ಜಿಪಂ ಸಿಇಒ ಒಂದೂವರೆ ವರ್ಷದ ಹಿಂದೆಯೇ ಗ್ರಾಪಂ ಪಿಡಿಒಗೆ ಆದೇಶ ಮಾಡಿದ್ದಾರೆ. ಜಿಪಂ ಸಿಇಒ ಅವರ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಗ್ರಾಪಂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಜವಾಬ್ದಾರಿ ತೋರಿ ಗಾಂವಠಾಣ ಜಾಗ ವಶಕ್ಕೆ ಪಡೆದಿಲ್ಲ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಗಾಂವಠಾಣ ಜಾಗವು ಗ್ರಾಪಂಗೆ ಸೇರಿದ್ದು ಎಂದು ಆದೇಶವಾದರೂ ಕೆಲವು ಕಾಣದ ಕೈಗಳು ತೆರೆಮರೆಯಲ್ಲಿ ಆ ಜಾಗ ಕಬಳಿಸಲು ಯತ್ನಿಸುತ್ತಿವೆ. ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಸರ್ಕಾರಿ ಜಾಗ ಅನ್ಯರ ಪಾಲಾಗಲಿದೆ ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
ಗಾಂವಠಾಣಾ ಜಾಗೆ ವಶಕ್ಕೆ ಪಡೆಯುವಲ್ಲಿ ವಿಳಂಬವಾಗಿದೆ. ಒಂದೆರಡು ದಿನಗಳಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಗಾಂವಠಾಣ ಜಾಗೆಯ ಆದೇಶದ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು.
• ದೇವೇಂದ್ರಪ್ಪ ಕಮತರ,
ಹನುಮಸಾಗರ ಗ್ರಾಪಂ ಪಿಡಿಒ
ಗ್ರಾಂವಠಾಣ ಜಾಗೆ ಗ್ರಾಪಂಗೆ ಸೇರಿದ್ದು ಎಂದು ಜಿಲ್ಲಾ ಪಂಚಾಯತ್ ಆದೇಶಿಸಿ 18 ತಿಂಗಳಾದರು ಗ್ರಾಪಂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಗಮನಿಸಿದರೆ ಗಾಂವಠಾಣ ಜಾಗೆಯನ್ನು ಕಬಳಿಸುವ ಹುನ್ನಾರ ಅಡಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
• ಚಂದಪ್ಪ, ವೆಂಕಟೇಶ, ಸ್ಥಳೀಯರು
ವಸಂತಕುಮಾರ ಸಿನ್ನೂರ