ದೇವನಹಳ್ಳಿ: ರೈತರ ಜೀವನಾಡಿಯಾಗಿರುವ ಮಾವಿನ ಮರಗಳಿಗೆ ಜಿಗಿಹುಳು ಕಾಟ ಹೆಚ್ಚಾಗುತ್ತಿದ್ದು, ತೋಟ ಗಾರಿಕೆ ಇಲಾಖೆಯಿಂದ ಜಿಗಿಹುಳು ಹತೋಟಿಗೆ ರಿಯಾ ಯಿತಿ ದರದಲ್ಲಿ ಔಷಧ ವಿತರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮಾವಿನ ಮರಗಳಲ್ಲಿ ಸಂಪೂರ್ಣವಾಗಿ ಹೂವು ಬಿಟ್ಟು ಪಿಂದೆ ಕಟ್ಟುವ ತನಕಕ್ಕೆ ಮಾವು ಬಂದಿದೆ. ಈಗಾಗಲೇ ಮಾವಿನ ಮರಗಳಿಗೆ ಜಿಗಿಹುಳು ಕಾಟದಿಂದ ರೈತರು ಆತಂಕ ಪಡುವಂತೆ ಆಗಿದೆ. ಬಯಲು ಸೀಮೆಯ ಜಿಲ್ಲೆಯಾಗಿರುವುದರಿಂದ ಇರುವ ಭೂಮಿಗಳಲ್ಲಿ ಮಾವು ಬೆಳೆ ಬೆಳೆಯುತ್ತಾ ಬಂದಿದ್ದು, ನವೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಬಿದ್ದ ಮಳೆಯಿಂದ ತೇವಾಂಶ ಹೆಚ್ಚಿ ಹೂವು ತಡವಾಗಿ ಕಾಣಿಸಿಕೊಂಡಿವೆ.
ತೋಟಗಾರಿಕಾ ಬೆಳೆ ಮೇಲೆ ಅವಲಂಬಿತ: ರೈತರು ತೋಟಗಾರಿಕಾ ಬೆಳೆಗಳ ಮೇಲೆ ಅವಲಂಬಿತರಾಗಿದ್ದು, ಇತ್ತೀಚಿನ ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಫಲವತ್ತಾದ ಭೂಮಿ ಭೂಸ್ವಾಧೀನಕ್ಕೆ ಒಳಪಡುತ್ತಿವೆ. ಹೂವಿನ ಜೊತೆಯಲ್ಲಿ ಚಿಗುರು ಬಂದಿರುವುದರಿಂದ ಮರದ ಸಾರವನ್ನು ಚಿಗುರೇ ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಹೂವಿಗೆ ಪಿಂದೆ ಹಿಡಿಯುವಷ್ಟು ಶಕ್ತಿ ಕಡಿಮೆಯಾಗಿ ಹೂವು ಉದುರುತ್ತದೆ. ಜೊತೆಗೆ ಚಿಗುರಿನಲ್ಲಿ ಜಿಗಿಹುಳ ಕಾಟವು ಹೆಚ್ಚಾಗಿ ಫಸಲು ಕಡಿಮೆಯಾಗಲಿದೆ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಉತ್ತಮ ಫಸಲಿನ ನಿರೀಕ್ಷೆ: ಕಳೆದ ವರ್ಷ ಮಾವಿನ ಫಸಲು ಇಲ್ಲದೆ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಆರಂಭ ದಲ್ಲಿ ಎಲ್ಲಾ ಮರಗಳಲ್ಲಿ ಹೂವು ಬರಲು ಆರಂಭಗೊಂಡಾಗ ಉತ್ತಮ ಫಸಲು ಬರುತ್ತದೆ ಎಂದು ರೈತರ ಯೋಚನೆಯಾಗಿತ್ತು. ಆದರೆ, ಹೂವಿನ ಜೊತೆಗೆ ಚಿಗುರು ಬರುತ್ತಿರುವುದರಿಂದ ಬಂದ ಹೂವಿನಲ್ಲಿ ಪಿಂದೆ ಕಚ್ಚುತ್ತಿದೆಯೇ ಎಂಬುದು ರೈತರ ಆತಂಕವಾಗಿದ್ದು, ಜಿಗಿ ಹುಳುಗಳ ಹತೋಟಿಗೆ ರಿಯಾಯಿತಿ ದರದಲ್ಲಿ ತೋಟಗಾರಿಕೆ ಇಲಾಖೆಯಿಂದ ಔಷಧ ವಿತರಿಸಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಾವಿಗೆ ವಿವಿಧ ಜಾತಿಯ ಕೀಟಬಾಧೆ : ಮಾವಿನ ತಳಿಗಳಾದ ಬಾದಾಮಿ ಮತ್ತು ಬೆನೀಷಾ ಮಾವಿನ ಮರಗಳಲ್ಲಿ ಹೆಚ್ಚಾಗಿ ಹೂವಿನ ಜೊತೆಯಲ್ಲಿ ಚಿಗುರು ಕಾಣಿಸಿ ಕೊಳ್ಳತೊಡಗಿದೆ. ಮಾವಿನ ಚಿಗುರು ಒಡೆ ಯುತ್ತಿರುವುದರಿಂದ ಜಿಗಿಹುಳ ಸೇರಿದಂತೆ ವಿವಿಧ ಜಾತಿಯ ಕೀಟಗಳು ಮರಗಳಲ್ಲಿ ಸೇರಿಕೊಂಡು ಚಿಗುರು ತಿನ್ನಲು ಆರಂಭಿ ಸುತ್ತವೆ. ಇದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಅಂಟು ರೋಗವು ಸಹಾ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಶೇ. 50ರಷ್ಟು ಹೂವು ಕಾಣಸಿ ಕೊಂಡಿದ್ದು, ಹಂತ- ಹಂತವಾಗಿ ಮರಗಳಲ್ಲಿ ಹೂವು ಬಿಡುತ್ತಿದೆ ಎಂದು ರೈತರು ಹೇಳಿದ್ದಾರೆ.
ಔಷಧ ಸಿಂಪಡಣೆ ಮಾಡುವ ವಿಧಾನ : ಜಿಗಿಹುಳು ಕಾಟವನ್ನು ನಿಯಂತ್ರಿಸಲು ಔಷಧ ಸಿಂಪಡಿಸಬೇಕು. ಬೇವಿನ ಎಣ್ಣೆ 10 ಸಾವಿರ ಪಿಪಿಎಂ. 2 ಎಂ.ಎಲ್. 1 ಲೀಟರ್‌ಗೆ ವೆಟೆಬಲ್ ಸಲರ್ 2 ಗ್ರಾಂ 1 ಲೀಟರ್ ಇವರೆಡೂ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. 15 ದಿನ ಬಿಟ್ಟು, ಅರ್ಧ ಎಂ.ಎಲ್. ಇಮಿ ಡಾಕ್ಲೋಫ್ರೀಡ್, ಕಾಂಟಪ್ 1 ಎಂ.ಎಲ್. ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು. ಹೆಸರಘಟ್ಟದ ಮ್ಯಾಂಗೋ ಸ್ಪೆಷಲ್ 1ಲೀಟರ್‌ಗೆ 5 ಗ್ರಾಂ ಮಿಶ್ರಣ ಮಾಡಿ, 25 ಲೀಟರ್ ಗೆ ಒಂದು ಪಾಕೇಟ್ ಶಾಂಪೂ, 1 ನಿಂಬೆಹಣ್ಣು ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು. ತಾಲೂಕಿನಲ್ಲಿ 650 ಹೆಕ್ಟೇರ್‌ನಲ್ಲಿ ರೈತರು ಮಾವು ಬೆಳೆಯುತ್ತಿದ್ದು, ಸಹಜವಾಗಿ ಈ ವಾತಾವರಣದಲ್ಲಿ ಜಿಗಿಹುಳು ಕಾಣಿಸಿಕೊಳ್ಳುತ್ತದೆ ಎಂದು ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ತಿಳಿಸಿದ್ದಾರೆ.
ಮಾವಿನ ಮರಗಳಿಗೆ ಜಿಗಿಹುಳು ಕಾಟದಿಂದ ಆತಂಕ ಮನೆ ಮಾಡಿದೆ. ಮಾವಿನ ಮರಗಳಲ್ಲಿ ಹೆಚ್ಚಾಗಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೈತರ ಬದುಕನ್ನು ಹಾಳು ಮಾಡುತ್ತಿದೆ. ತೋಟಗಾರಿಕೆ ಇಲಾಖೆ ರೈತರಿಗೆ ರಿಯಾಯಿತಿ ದರದಲ್ಲಿ ಔಷಧ ಒದಗಿಸುವುದು ಉತ್ತಮ. ತೋಟಗಾರಿಕೆ ಬೆಳೆ ನಂಬಿ ಜೀವನ ಸಾಗಿಸುತ್ತಿದ್ದೇವೆ.
– ಹರೀಶ್, ಮಾವು ಬೆಳೆಗಾರ