Advertisement
ಅದೇ ವೇಳೆ “ಜಿಗರಿ ದೋಸ್ತ್’ ಚಿತ್ರದಲ್ಲಿ ಬರುವ “ಅಚ್ಚು ಅಚ್ಚು ಅಚ್ಚು… ನೀ ನಂಗೆ ಅಚ್ಚು ಮೆಚ್ಚು…’ ಎನ್ನುವ ಸಾಲುಗಳಿಂದ ಶುರುವಾಗುವ ಹಾಡಿನ ಚಿತ್ರೀಕರಣ ಜೋರಾಗಿ ನಡೆಯುತ್ತಿತ್ತು. ನೃತ್ಯ ನಿರ್ದೇಶಕರಾದ ಮದನ್-ಹರಿಣಿ ನೃತ್ಯ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಈ ಹಾಡಿಗೆ ನಾಯಕ ನಟರಾದ ಸ್ಕಂದ ಅಶೋಕ್, ಚೇತನ್ ಮತ್ತು ನಾಯಕಿಯರಾದ ಸುಷ್ಮಾ ರಾಜ್, ಅಕ್ಷತಾ ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದ್ದರು. ಡಿ. ಪ್ರಸಾದ್ ಬಾಬು ತಮ್ಮ ಕ್ಯಾಮರಾದಲ್ಲಿ ಹಾಡಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ಬಳಿಕ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಕೊಟ್ಟ ಚಿತ್ರತಂಡ ಚಿತ್ರದ ಬಗ್ಗೆ ಮಾತಿಗಿಳಿಯಿತು.
ಮೊದಲು ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮೋಹನ್, “ನಾವು ಬಯಸಿದ್ದು ನಮಗೆ ಸಿಗುತ್ತೆ ಅಂದ್ರೆ ಅದು ದೋಸ್ತಿ ಮಾತ್ರ. ಸರಿಯಾದ ಫ್ರೆಂಡ್ಸ್ ಸೆಲೆಕ್ಟ್ ಮಾಡಿಕೊಂಡ್ರೆ ಜೀವನ ಖುಷಿಯಾಗಿರುತ್ತೆ. ಪ್ರೀತಿಗಿಂತ ಸ್ನೇಹ ದೊಡ್ಡದು ಅನ್ನೋದು ಈ ಚಿತ್ರದ ತಿರುಳು. ಹೆಸರೇ ಹೇಳುವಂತೆ ಇದೊಂದು ಫ್ರೆಂಡ್ ಶಿಪ್ ಕುರಿತಾದ ಚಿತ್ರ. ಇಬ್ಬರು ಪ್ರಾಣ ಸ್ನೇಹಿತರು, ಅವರ ನಡುವಿನ ಪ್ರೀತಿ – ಸ್ನೇಹ, ಸಂಬಂಧವನ್ನು ಚಿತ್ರದಲ್ಲಿ ನೋಡಬಹುದು. ಒಬ್ಬ ಪೊಲೀಸ್, ಮತ್ತೂಬ್ಬ ಲಾಯರ್ ಆಗಿರುವ ಈ ಇಬ್ಬರು ಸ್ನೇಹಿತರು ಹೇಗೆ ತಮ್ಮ ಚಾಣಾಕ್ಷತೆಯಿಂದ ಅಪರಾಧಿಗಳನ್ನು ಶಿಕ್ಷಿಸುತ್ತಾರೆ ಅನ್ನೋದೆ ಚಿತ್ರದ ಕಥೆ. ಇಂಟಲಿಜೆಂಟ್ ಕೋರ್ಟ್ ಕೇಸ್‌ಗಳು ಚಿತ್ರದಲ್ಲಿವೆ. ಚಿತ್ರದ ಬಹುಭಾಗ ಕೋರ್ಟ್ ನಲ್ಲಿ ನಡೆಯುತ್ತದೆ. ಒಟ್ಟಾರೆ ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಚಿತ್ರ. ಇಂದಿನ ಆಡಿಯನ್ಸ್ ಬಯಸುವ ಲವ್, ಸೆಂಟಿಮೆಂಟ್, ಕಾಮಿಡಿ, ಆ್ಯಕ್ಷನ್ ಎಲ್ಲವೂ ಈ ಚಿತ್ರದಲ್ಲಿದೆ. ಈಗಾಗಲೇ 32 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಮಾತನಾಡಿದ ನಿರ್ಮಾಪಕ ಗಂಗಾಧರ್, “ಇದು ನನ್ನ ನಿರ್ಮಾಣದ 27ನೇ ಚಿತ್ರ. ಚಿತ್ರದ ಕಥೆ ಮತ್ತು ಅದರ ಅಂಶಗಳು ಇಷ್ಟವಾಗಿದ್ದರಿಂದ ಈ ಚಿತ್ರವನ್ನು ನಿರ್ಮಿಸಲು ಮುಂದಾದೆ. ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ. ಈಗಾಗಲೇ ನಾವು ಅಂದುಕೊಂಡಂತೆ “ಜಿಗರಿ ದೋಸ್ತ್’ ಚಿತ್ರದ ಮಾತಿನ ಭಾಗ ಪೂರ್ಣಗೊಂಡಿದೆ. ಸದ್ಯ ಬಾಕಿಯಿರುವ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಕೆಲ ದಿನಗಳಲ್ಲೆ ಚಿತ್ರೀಕರಣ ಮುಕ್ತಾಯವಾಗಲಿದೆ. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತೇವೆ. ಇಂದು ಚಿತ್ರ ಮಾಡುವುದು ಸುಲಭ ಆದ್ರೆ ಅದನ್ನು ತೆರೆಗೆ ತರುವುದೇ ಸವಾಲಿನ ಕೆಲಸವಾಗಿದೆ. ಸಿನಿಮಾವನ್ನು ವೃತ್ತಿಪರವಾಗಿ ಮಾಡುವವರು ಕಡಿಮೆಯಾಗಿದ್ದಾರೆ’ ಎಂದರು.
Related Articles
Advertisement
ಇನ್ನು “ಜಿಗರಿ ದೋಸ್ತ್’ನಲ್ಲಿ ವಿನೋದ್ ಆಳ್ವಾ, ಮಂಜುನಾಥ್, ಇರ್ಫಾನ್, ಅನಂತ ವೇಲು ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣದಲ್ಲಿ ನಿರತವಾಗಿರುವ “ಜಿಗರಿ ದೋಸ್ತ್’ ಮುಂಬರುವ ಆಗಸ್ಟ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಒಟ್ಟಾರೆ “ಜಿಗರಿ ದೋಸ್ತ್’ಗಳ ಕಮಾಲ್ ಹೇಗಿರಲಿದೆ ಅನ್ನೋದು ಗೊತ್ತಾಗಬೇಕಾದರೆ ಚಿತ್ರ ತೆರೆಗೆ ಬರುವವರೆಗೆ ಕಾಯಬೇಕು.