Advertisement

Jharkhand: ಜೆಎಂಎಂ ತೊರೆದು ಬಿಜೆಪಿ ಸೇರಿದ ಮಾಜಿ ಸಿಎಂ ಚಂಪೈ ಸೊರೇನ್

08:32 PM Aug 30, 2024 | Team Udayavani |

ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜಾರ್ಖಂಡ್‌ (Jharkhand)ನಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸ್ವ ಪಕ್ಷ ಸ್ಥಾಪಿಸಬೇಕೋ ಅಥವಾ ಬಿಜೆಪಿ  ಸೇರಬೇಕೋ ಗೊಂದಲದಲ್ಲಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಜೆಎಂಎಂ ಪಕ್ಷ ತೊರೆದು ಶುಕ್ರವಾರ ರಾಂಚಿಯಲ್ಲಿ ಬಿಜೆಪಿ (BJP)ಗೆ ಸೇರ್ಪಡೆಗೊಂಡರು.

Advertisement

ರಾಂಚಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್‌ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಸೋರೆನ್ ಹಾಗೂ  ಅವರ ಅಪಾರ ಬೆಂಬಲಿಗರು ಬಿಜೆಪಿ ಸೇರಿದ್ದಾರೆ. ಪಕ್ಷ ಸೇರಿದ ಚಂಪೈಗೆ  ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್‌ ಮರಾಂಡಿ ಆದೇಶ ಪತ್ರ ನೀಡಿ ಸ್ವಾಗತಿಸಿದರು. ಒಂದು ಕಾಲದಲ್ಲಿ  ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸ್ಥಾಪಕ ಶಿಬು ಸೊರೆನ್ ಅವರ ನಿಕಟ ಸಹಾಯಕರಾಗಿದ್ದ ಸೋರೆನ್ ಬುಧವಾರ ತಮ್ಮ ಪಕ್ಷವನ್ನು ತೊರೆದಿದ್ದಾರೆ.

67 ವರ್ಷದ ನಾಯಕ ಶಿಬು ಸೊರೆನ್‌ಗೆ ಬರೆದ ಪತ್ರದಲ್ಲಿ, “ನನಗೆ ಕುಟುಂಬದಂತಿರುವ ಜೆಎಂಎಂ(ಜಾರ್ಖಂಡ್‌ ಮುಕ್ತಿ ಮೋರ್ಚಾ)  ಪಕ್ಷವನ್ನು ನಾನು ತೊರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ. ಹಿಂದಿನ ಘಟನೆಗಳು ಬಹಳ ನೋವಿನಿಂದ ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಪಕ್ಷವು ತನ್ನ ತತ್ವದಿಂದ ವಿಮುಖವಾಗಿದೆ ಎಂದು ಹೇಳಲು ನನಗೆ ನೋವಾಗಿದೆ ಎಂದಿದ್ದಾರೆ.

ಬುಡಕಟ್ಟು ಪ್ರದೇಶವಾದ ಜಾರ್ಖಂಡ್‌ನಲ್ಲಿ ಬಿಜೆಪಿ ನೆಲೆ ಸ್ಥಾಪಿಸಲು ನೋಡುತ್ತಿದೆ, ಅಲ್ಲಿ ಪರಿಶಿಷ್ಟ ಪಂಗಡಗಳು ಮತದಾರರಲ್ಲಿ ಸುಮಾರು 26 ಪ್ರತಿಶತ ಹೊಂದಿವೆ. ಜನವರಿ 31 ರಂದು ಜಾರಿ ನಿರ್ದೇಶನಾಲಯದಿಂದ (ಇಡಿ) ಹೇಮಂತ್ ಸೊರೇನ್ ಅವರನ್ನು ಬಂಧಿಸುವ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ, ಚಂಪೈ ಸೊರೇನ್ ರನ್ನು ಸಿಎಂ ಆಗಿ ನೇಮಿಸಲಾಗಿತ್ತು. ಸೊರೇನ್ ಜೈಲಿನಲ್ಲಿರುವವರೆಗೂ ಅವರು ಸಿಎಂ ಆಗಿದ್ದರು. ಜೂ. 28 ರಂದು ಹೇಮಂತ್ ಸೊರೇನ್‌ಗೆ ಜಾಮೀನು ನೀಡಿದ ನಂತರ, ಜೆಎಂಎಂ ಕಾರ್ಯಾಧ್ಯಕ್ಷ ಸ್ಥಾನದಿಂದ  ಹಿರಿಯ ನಾಯಕ ಚಂಪೈ ಕೆಳಗಿಳಿಯಬೇಕಾಯಿತು.

Advertisement

“ಇಷ್ಟು ಅವಮಾನಗಳ ನಂತರ, ನಾನು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆಗೆ ಒಳಗಾಗಿದ್ದೇನೆ. ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಇನ್ನೊಬ್ಬ ವ್ಯಕ್ತಿ ರದ್ದುಗೊಳಿಸುವುದಕ್ಕಿಂತ ಹೆಚ್ಚಿನ ಅವಮಾನ ಪ್ರಜಾಪ್ರಭುತ್ವದಲ್ಲಿ ಬೇರೇನಿದೆ? ಸಭೆಯಲ್ಲಿ (ಜು. 3 ರಂದು ಶಾಸಕಾಂಗ ಪಕ್ಷದ ಸಭೆ) ನನಗೆ ರಾಜೀನಾಮೆ ನೀಡುವಂತೆ ಕೇಳಲಾಯಿತು ಎಂದು ಚಂಪೈ ಸೊರೇನ್ ಹೇಳಿದ್ದಾರೆ. ಆದರೆ ಅವರು ( ಸಿಎಂ ಹೇಮಂತ್ ಸೊರೇನ್) ಕುರ್ಚಿಯಲ್ಲಿ ಆಸಕ್ತಿ ತೋರುತ್ತಿದ್ದರು. ನಾನು ನನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಪಕ್ಷದಲ್ಲಿ ನನಗೆ ಅಸ್ತಿತ್ವವಿಲ್ಲದಾಯಿತು, ”ಎಂದು ಚಂಪೈ ಸೊರೇನ್ ಹೇಳಿದ್ದಾರೆ.


ಜನರ ಸಮಸ್ಯೆಗಳಿಗೆ ಹೋರಾಡುವೆ:
“ನಾನು ಜಾರ್ಖಂಡ್‌ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಿಜೆಪಿ ಯಾವ ಜವಾಬ್ದಾರಿಯ ನೀಡುತ್ತದೋ ಆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಬಾಂಗ್ಲಾದೇಶದಿಂದ ವಲಸಿಗರ ತಡೆಗೂ ಕ್ರಮ ವಹಿಸಲಾಗುವುದು. ಜಾರ್ಖಂಡ್‌ನ ಸಾಮಾನ್ಯ ಜನರು, ಹಿಂದುಳಿದ ವರ್ಗ, ದಲಿತರು, ಬುಡಕಟ್ಟು ಜನರ ಸಮಸ್ಯೆಗಳ ಬಗೆಗಿನ ಹೋರಾಟವನ್ನು ಮುಂದುವರಿಸುತ್ತೇನೆʼ  ಮಾಜಿ ಮುಖ್ಯಮಂತ್ರಿ ಚಂಪೈ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next