Advertisement

ಜುವೆಲರಿ ಅಂಗಡಿಯಲ್ಲಿ ಹತ್ಯೆ ಪ್ರಕರಣ: ಒಬ್ಬರೇ ಇರುವ ಅಂಗಡಿಗಳೇ ಆರೋಪಿಯ ಟಾರ್ಗೆಟ್‌

07:39 PM Mar 04, 2023 | Team Udayavani |

ಮಂಗಳೂರು: ಕಳೆದ ತಿಂಗಳು ಹಾಡುಹಗಲೇ ನಗರದ ಜುವೆಲರಿ ಅಂಗಡಿಗೆ ನುಗ್ಗಿ ಸೇಲ್ಸ್‌ಮ್ಯಾನ್‌ನ್ನು ಹತ್ಯೆಗೈದಿದ್ದ ಆರೋಪಿ ಶಿಫಾಸ್‌(30) ಒಬ್ಬರೇ ಇರುವ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಟ್ಟುಕೊಂಡು ಹೊಂಚು ಹಾಕುತ್ತಿದ್ದ ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರೋಪಿ ಮಂಗಳೂರು ಮಾತ್ರವಲ್ಲದೆ ತಮಿಳುನಾಡು, ಕೇರಳ, ಗೋವಾದಲ್ಲಿಯೂ ಇದೇ ರೀತಿಯ ಕೃತ್ಯ ನಡೆಸುವ ಉದ್ದೇಶದಿಂದ ಓಡಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಇಲ್ಲಿ ನಡೆದಿರುವ ಕೃತ್ಯದ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿ ನಡೆದಿದ್ದರೆ ಅದರ ಮಾಹಿತಿ ನೀಡುವಂತೆ ಅಲ್ಲಿನ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬ್ಯಾಗ್‌ನಿಂದ ಗುರುತು
ಆರೋಪಿಯ ಪತ್ತೆ ಸವಾಲಾಗಿತ್ತು. ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗಿರಲಿಲ್ಲ. ಹಾಗಾಗಿ ಆತನ ಚಹರೆ, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕಾಸರಗೋಡಿನ ಪೊಲೀಸರು ಓರ್ವ ಶಂಕಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಮಾಹಿತಿ ನೀಡಿದ್ದರು. ಆತ ಧರಿಸಿದ್ದ ಬ್ಯಾಗ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದರು. ಬಳಿಕ ಮಂಗಳೂರು ಪೊಲೀಸರು ವಿಚಾರಿಸಿದಾಗ ಆತನೇ ಆರೋಪಿ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.

ರಕ್ತದ ಕಲೆ ಸಿಗದಿರಲು 2-3 ಬಟ್ಟೆ
ತಾನು ಚೂರಿಯಿಂದ ಇರಿದ ಅನಂತರ ತನ್ನ ಬಟ್ಟೆ ಮೇಲೆ ರಕ್ತ ಚೆಲ್ಲುವುದರಿಂದ ಬಟ್ಟೆಯನ್ನು ಎಲ್ಲಿಯಾದರೂ ಬಿಸಾಡಿ ಹೋಗುವುದು ಆರೋಪಿಯ ಯೋಚನೆಯಾಗಿತ್ತು. ಅದಕ್ಕಾಗಿ 3-4 ಬಟ್ಟೆಗಳನ್ನು ಒಂದರ ಮೇಲೆ ಒಂದರಂತೆ ಧರಿಸುತ್ತಿದ್ದ. ಕಾಸರಗೋಡಿನಲ್ಲಿ ವಶಕ್ಕೆ ಪಡೆಯುವಾಗಲೂ ಅದೇ ರೀತಿ ಬಟ್ಟೆ ಧರಿಸಿದ್ದ. ಆತ ಕಾಸರಗೋಡಿನಲ್ಲಿ ಅಂತಹುದೇ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದುದು ಗೊತ್ತಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

Advertisement

ಪೊಲೀಸರಿಗೆ ಅಭಿನಂದನೆ
ಕಾರ್ಯಾಚರಣೆಯಲ್ಲಿ ಮಂಗಳೂರಿನ ಡಿಸಿಪಿ ಅಂಶುಕುಮಾರ್‌ ಅವರ ನೇತೃತ್ವದ 8 ಪೊಲೀಸ್‌ ತಂಡ ಹಾಗೂ ಕಾಸರಗೋಡು ಡಿವೈಎಸ್‌ಪಿ ಸುಧಾಕರನ್‌ ನೇತೃತ್ವದ ಪೊಲೀಸ್‌ ತಂಡ ಪಾಲ್ಗೊಂಡಿವೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು. ಪೊಲೀಸ್‌ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಆಯುಕ್ತರು ಗೌರವಿಸಿದರು.

ಇದನ್ನೂ ಓದಿ: ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸಹಸ್ರನಾರಿಕೇಳ ಯಾಗ

Advertisement

Udayavani is now on Telegram. Click here to join our channel and stay updated with the latest news.

Next