ಜೇವರ್ಗಿ: ಪಟ್ಟಣದ ದತ್ತ ನಗರ ಬಡಾವಣೆಯಲ್ಲಿ ಅಪೂರ್ಣಗೊಂಡಿರುವ ಚರಂಡಿ ಹಾಗೂ ರಸ್ತೆ ಕಾಮಗಾರಿಯಿಂದ ಬಡಾವಣೆ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
2018-19ನೇ ಸಾಲಿನ ನಗರೋತ್ಥಾನ ಯೋಜನೆಯಡಿ ಕಳೆದ ಒಂದು ವರ್ಷದ ಹಿಂದೆ ಪಟ್ಟಣದ ದತ್ತ ನಗರ ಬಡಾವಣೆಯಲ್ಲಿ ಅಂದಾಜು 600 ಮೀಟರ್ ಉದ್ದ ಹಾಗೂ 40 ಅಡಿ ಅಗಲದ ರಸ್ತೆ ಡಾಂಬರೀಕರಣ ಹಾಗೂ ಎರಡು ಬದಿಯಲ್ಲಿ ಚರಂಡಿ ಕಾಮಗಾರಿ ಪ್ರಾರಂಭವಾಗಿದ್ದು, ಗುತ್ತಿಗೆದಾರನ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ವರ್ಷದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಕಾಮಗಾರಿಗಾಗಿ ಹಲವಾರು ಕಡೆ ತೆಗ್ಗು ಅಗೆಯಲಾಗಿದೆ. ಅಲ್ಲದೇ ಜಲ್ಲಿಕಲ್ಲು, ಮರಳು ರಸ್ತೆ ಮೇಲೆ ಹಾಕಲಾಗಿದೆ. ಅರ್ಧಂಬರ್ಧ ಚರಂಡಿ ಕಾಮಗಾರಿಯಿಂದ ಮನೆಯ ನೀರು ರಸ್ತೆ ಮೇಲೆ ಹರಿದು ರಾಡಿಯಾಗಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ನಿತ್ಯ ರಸ್ತೆ ಮೇಲೆ ಸರ್ಕಸ್ ಮಾಡುವಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಹಾಗೂ ಕರೆ ಮಾಡಿದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರ್ಕಾರ ನಗರ ಪ್ರದೇಶದಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಕ್ಕೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಪುರಸಭೆ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾಮಗಾರಿಗಳು ಹಳ್ಳ ಹಿಡಿಯುತ್ತಿವೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪುರಸಭೆ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ. ಕಚೇರಿಯಲ್ಲಿಯೇ ಕುಳಿತು ಕಾಮಗಾರಿ ಪರಿಶೀಲಿಸಿ ಬಿಲ್ ಪಾಸ್ ಮಾಡಲಾಗುತ್ತಿದೆ. ಪಟ್ಟಣದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಶೌಚಾಲಯ, ಭವನ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ಬಹುತೇಕ ಕಡೆ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕರೆ ಮಾಡಿದರೆ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ಸ್ವೀಕರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪುರಸಭೆಯಲ್ಲಿ ಎಂಜಿನಿಯರ್ ಹುದ್ದೆ ಖಾಲಿ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಇರುವ ಒಬ್ಬ ಎಂಜಿನಿಯರ್ 15 ದಿನಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಅನಧಿಕೃತ ಗೈರು ಹಾಜರಾಗುತ್ತಿರುವ ಎಂಜಿನಿಯರ್ ಮೇಲೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತೊಬ್ಬ ಎಂಜಿನಿಯರ್‌ನ್ನು ಕೂಡಲೇ ನಿಯೋಜಿಸಬೇಕು.
ಬಸವರಾಜ ಬಾಗೇವಾಡಿ,
ಅಧ್ಯಕ್ಷ, ಡಾ| ವಿಷ್ಣುಸೇನಾ ತಾಲೂಕು ಸಮಿತಿ
ವಿಜಯಕುಮಾರ ಎಸ್.ಕಲ್ಲಾ