ಜೇವರ್ಗಿ: ಭೀಮಾನದಿ ಪ್ರವಾಹಕ್ಕೆ ತುತ್ತಾಗಿರುವ ಜೇವರ್ಗಿ ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಲ್ಲಿ ವಿಷ ಜಂತುಗಳ ಕಾಟ ಆರಂಭ ಗೊಂಡಿದ್ದು, ಸಂತ್ರಸ್ತರ ನಿದ್ದೆಗೆಡೆಸಿದೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಟ್ಟ ಪರಿಣಾಮ ನದಿ ತೀರದ ಜನರ ಬದುಕು ಬರ್ಬಾದ್ ಆಗಿದ್ದು, ಉತ್ತಮ ಬೆಳೆ, ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆಭೀಮಾ ಪ್ರವಾಹ ತಣ್ಣೀರು ಎರಚಿದೆ. ಇಷ್ಟೇ ಅಲ್ಲದೇ ಇದೀಗ ವಿಷ ಜಂತುಗಳಿಂದ ಜನರು ಇನ್ನಷ್ಟು ಭಯಪಡುವಂತಾಗಿದೆ.
ಕೋನಾಹಿಪ್ಪರಗಿ, ಮಂದರವಾಡ, ಕೋಬಾಳ ಗ್ರಾಮಗಳ ಜನರನ್ನು ಸಂಪೂರ್ಣ ಖಾಲಿ ಮಾಡಿಸಿ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ ಅರ್ಧದಷ್ಟು ಮುಳುಗಡೆಯಾದ ಇನ್ನೂ ಕೆಲ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುವುದರಿಂದ ದುರ್ವಾಸನೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭಯದಲ್ಲಿ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ. ಇದರ ಮಧ್ಯೆ ಪ್ರವಾಹದ ನೀರಲ್ಲಿ ವಿಷ ಜಂತುಗಳು ಬಂದು ಮನೆಗಳಿಗೆ ನುಗ್ಗುತ್ತಿವೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಾದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಕಡಿತಗೊಳಿಸಲಾಗಿದೆ. ಗ್ರಾಮದ ಸುತ್ತಲೂ ನೀರುಬಂದಿರುವುದರಿಂದ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿವೆ. ಇದರಿಂದ ಭೀಮಾ ತೀರದ ಜನರು ರಾತ್ರಿವಿಡೀ ಕತ್ತಲೆಯಲ್ಲಿ ವಿಷ ಜಂತುಗಳ ಹಾವಳಿಯಿಂದ ನಿದ್ರೆ ಇಲ್ಲದೇ ರಾತ್ರಿ ಕಳೆಯುತ್ತಿದ್ದಾರೆ.
ಕೆಲವು ಗ್ರಾಮಗಳು ನಡುಗಡ್ಡೆಯಾಗಿದ್ದರಿಂದ ಕೋವಿಡ್ ದಿಂದ ತೊಂದರೆ ಅನುಭವಿಸುತ್ತಿರುವ ಈ ಸಮಯದಲ್ಲಿ ಯಾರಿಗಾದರೂ ಯಾವುದೇ ರೋಗದಿಂದ ಹೆಚ್ಚು ಕಡಿಮೆಯಾದರೇ ತಾಲೂಕು ಕೇಂದ್ರದ ಆಸ್ಪತ್ರೆಗೆ ಸಾಗಿಸಲು ಸಹ ಪರದಾಡಬೇಕಾಗಿದೆ. ಅದರ ಜೊತೆ ಜಿಲ್ಲಾ ಕೇಂದ್ರ ಕಲಬುರಗಿ ನಗರಕ್ಕೂ ತೆರಳಲು ಈ ಪ್ರವಾಹ ಅಡ್ಡಿಯುಂಟು ಮಾಡಿದೆ. ಗ್ರಾಮಗಳ ಸಂಪರ್ಕ ರಸ್ತೆ ಸ್ಥಗಿತಗೊಂಡಿದ್ದರಿಂದ ಕಳೆದ ಮೂರ್‍ನಾಲ್ಕು ದಿನಗಳಿಂದ ನಡುಗಡ್ಡೆಯಾಗಿರುವ ಗ್ರಾಮದಲ್ಲಿಯೇ ಭಯದಿಂದ ಬದುಕು ಸಾಗಿಸಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ. ಈಗಾಗಲೇ ಭೀಮಾ ತೀರದ ಗ್ರಾಮಗಳ ಒಟ್ಟು 6,300 ಜನರನ್ನು ಕಾಳಜಿಕೇಂದ್ರದಲ್ಲಿ ಊಟೋಪಚಾರ ಹಾಗೂ ಸೌಲಭ್ಯ ಒದಗಿಸಿಕೊಡಲಾಗಿದೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭೀಮಾ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರ ಆತಂಕ ಕೂಡ ಅಧಿಕಗೊಂಡಿದೆ.
-ವಿಜಯಕುಮಾರ ಎಸ್.ಕಲ್ಲಾ