Advertisement

ನಿಷೇಧಾಜ್ಞೆ ಮಧ್ಯೆ ವೇಬ್ರಿಡ್ಜ್ ಟೆಂಡರ್‌: ರೈತರ ಆಕ್ರೋಶ

12:30 PM May 02, 2020 | Naveen |

ಜೇವರ್ಗಿ: ಕೋವಿಡ್ ಸೋಂಕು ಹರಡುವ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ 144ನೇ ಕಲಂ ಕೂಡ ಜಾರಿಯಲ್ಲಿದೆ. ಇದರ ಮಧ್ಯದಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ವೇಬ್ರಿಡ್ಜ್ (ತೂಕ ಯಂತ್ರದ) ಟೆಂಡರ್‌ ಪ್ರಕ್ರಿಯೆ ನಡೆಸಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರೈತರು ಬೆಳೆ ಬೆಳೆದು ಮಾರುಕಟ್ಟೆಗೆ ಮಾರಾಟಕ್ಕೆ ತಂದಾಗ ವೇಬ್ರಿಡ್ಜ್ (ತೂಕದ ಯಂತ್ರ)ಅವಶ್ಯಕತೆ ಇರುತ್ತದೆ. ಆದರೆ ಬಹುತೇಕ ರೈತರು ತಾವು ಬೆಳೆದ ಬೆಳೆಯನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ಅದರಲ್ಲೂ ಇಡೀ ಪ್ರಪಂಚಕ್ಕೆ ಕಾಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಇಂತಹ ಸಮಯದಲ್ಲಿ ವೇಬ್ರಿಡ್ಜ್ ಟೆಂಡರ್‌ ಪ್ರಕ್ರಿಯೆ ನಡೆಸಿದ ಅಧಿಕಾರಿಗಳ ಒಳಮರ್ಮ ಅರ್ಥವಾಗುತ್ತಿಲ್ಲ. ರೈತರಿಗೆ ಅನುಕೂಲ ಕಲ್ಪಿಸಬೇಕಾದ ಸಮಯದಲ್ಲಿ ಮಾಡದ ಟೆಂಡರ್‌ ಪ್ರಕ್ರಿಯೆ ಈ ಸಮಯದಲ್ಲಿ ಮಾಡಿದರೆ ಯಾರಿಗೂ ಪ್ರಯೋಜನವಿಲ್ಲ. ಅಲ್ಲದೇ ಎಪಿಎಂಸಿಗೆ ಸಂಬಂಧಪಟ್ಟ ಬೀದರ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ 16 ಮಳಿಗೆಗಳ ಬಾಡಿಗೆ ಅವಧಿ ಕಳೆದ 2017ರಲ್ಲಿ ಪೂರ್ಣಗೊಂಡಿದ್ದರೂ, ಇಲ್ಲಿಯ ವರೆಗೂ ಅವುಗಳ ಹರಾಜು ಪ್ರಕ್ರಿಯೆ ನಡೆಸದಿರುವ ಎಪಿಎಂಸಿ ಕಾರ್ಯದರ್ಶಿ ನಡೆಗೆ ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ಬಗ್ಗೆ ಎಪಿಎಂಸಿ ಆಡಳಿತಾಧಿಕಾರಿ ಎಂ.ವಿ. ಶೈಲಜಾ, ಕಾರ್ಯದರ್ಶಿ ಸವಿತಾ ನಾಯಕ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಅನೇಕ ರೈತರ ಒತ್ತಾಯದ ಮೇರೆಗೆ ವೇಬ್ರಿಡ್ಜ್ ಟೆಂಡರ್‌
ಪ್ರಕ್ರಿಯೆ ನಡೆಸಲಾಗಿದೆ ಎಂದು ನಾಲ್ವರು ರೈತರ ಯಾವುದೇ ದಾಖಲಾತಿ ಇಲ್ಲದ ಹೆಬ್ಬೆಟ್ಟು ಸಹಿ ಮಾಡಿದ ಮನವಿ ಪತ್ರ ತೋರಿಸಿದರು. ಪ್ರತಿ ಐದು ವರ್ಷಕ್ಕೊಮ್ಮೆ ವೇಬ್ರಿಡ್ಜ್ ಹರಾಜು ನಡೆಸಲಾಗುತ್ತದೆ. ಇದಕ್ಕೂ ಮೊದಲು ಎರಡ್ಮೂರು ಬಾರಿ ಕೊರೊನಾ ಹಾಗೂ ವಿವಿಧ ಕಾರಣಕ್ಕೆ ಹರಾಜು ಮುಂದೂಡಲಾಗಿತ್ತು. ಆದರೆ ಲಾಕ್‌ ಡೌನ್‌ ಪೂರ್ಣಗೊಳ್ಳುವ ಮೊದಲೇ ನಿಷೇಧಾಜ್ಞೆ ಮಧ್ಯೆ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಅಲ್ಲದೇ ಟೆಂಡರ್‌ನಲ್ಲಿ ಅರ್ಜಿ ಹಾಕಿದವರು ಹೊರತುಪಡಿಸಿ ಬೇರೆಯವರು ಭಾಗವಹಿಸಿದ್ದು ಕಂಡು ಬಂತು.

ಒಟ್ಟಾರೆ ರೈತರು ಹಾಗೂ ವರ್ತಕರಿಗೆ‌ ಅನುಕೂಲವಾಗುವಂತಹ ನಿರ್ಧಾರವನ್ನು ಕೈಗೊಳ್ಳಬೇಕಾದ ಎಪಿಎಂಸಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸುಭಾಷ ಹೊಸಮನಿ, ರೈತ ಮುಖಂಡ ವೆಂಕೋಬರಾವ ವಾಗಣಗೇರಿ, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿದ್ಧರಾಮ ಹರವಾಳ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿಶ್ವಾರಾಧ್ಯ ಬಡಿಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆದೇಶದಂತೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವೇಬ್ರಿಡ್ಜ್ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಶೀಘ್ರವೇ ಟೆಂಡರ್‌ ಅವಧಿ ಪೂರ್ಣಗೊಂಡ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು.
ಎಂ.ವಿ. ಶೈಲಜಾ,
ಆಡಳಿತಾಧಿಕಾರಿ, ಎಪಿಎಂಸಿ, ಕಲಬುರಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next