ಜೇವರ್ಗಿ: ನಮ್ಮದು ಶೇ. 100 ಫಲಿತಾಂಶ ಪಡೆಯುವ ಕಾಲೇಜು, ಎಸ್‌ಎಸ್‌ಎಲ್ಸಿಯಲ್ಲಿ ಉತ್ತಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ, ಶುಲ್ಕದಲ್ಲಿ ಡಿಸ್ಕೌಂಟ್ ಕೂಡಾ ಇದೆ. ತಾಲೂಕಿನಲ್ಲಿಯೇ ನಂ.1 ಕಾಲೇಜು ನಮ್ಮದೇ…!
Advertisement
ಪ್ರತಿ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಆರಂಭಗೊಳ್ಳುವಾಗ ಶಾಲಾ-ಕಾಲೇಜುಗಳು ಇಂತಹ ಪ್ರಕಟಣೆ ನೀಡುವುದು ಹೊಸತೇನಲ್ಲ. ಆದರೆ ಯಾವುದೇ ಸೌಲಭ್ಯ ಒದಗಿಸದ ಹತ್ತಾರು ಕಾಲೇಜುಗಳು ಇಂತಹ ನಯನಾಜೂಕಿನ ಪ್ರಚಾರ ಮಾಡುತ್ತಿವೆ. ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಮಾತ್ರ ಮೌನಕ್ಕೆ ಜಾರಿರುವುದು ಪೋಷಕರಲ್ಲಿ ಗೊಂದಲ ಮೂಡಲು ಕಾರಣವಾಗಿದೆ.
Related Articles
Advertisement
ಪ್ರತಿ ವರ್ಷ ಖಾಸಗಿ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಹಲವು ಕಾಲೇಜುಗಳ ಮುಖ್ಯಸ್ಥರು ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ ಕಾಲೇಜುಗಳನ್ನು ತೆರೆದು ಪೋಷಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್ಸಿ ಪರೀಕ್ಷೆ ನಂತರ ಕಾಲೇಜು ಸಿಬ್ಬಂದಿ ಆಯಾ ಪ್ರೌಢಶಾಲೆಗಳಿಗೆ ತೆರಳಿ ಕೆಲವು ಶಿಕ್ಷಕರಿಗೆ ಹಣ ಹಾಗೂ ಗಿಫ್ಟ್ ನೀಡುವ ಆಮಿಷವೊಡ್ಡಿ ವಿದ್ಯಾರ್ಥಿಗಳನ್ನು ಸೆಳೆದು ದಾಖಲಾತಿ ಮಾಡಿಕೊಳ್ಳುತ್ತಿವೆ. ಕೆಲವರು ಮಾತ್ರ ಹಳ್ಳಿ-ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಇಲ್ಲ ಸಲ್ಲದ್ದನ್ನು ಹೇಳಿ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ. ಗಲ್ಲಿಗಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪರಿಶೀಲನೆ ನಡೆಸಿದ ಉದಾಹರಣೆಗಳೂ ಇಲ್ಲ.
ಜೇವರ್ಗಿ ತಾಲೂಕಿನ ಮೂರು ಖಾಸಗಿ ಕಾಲೇಜುಗಳಿಗೆ ಭೇಟಿ ಕೊಟ್ಟಿದ್ದೆವು. ಈ ವೇಳೆ ಶೌಚಾಲಯ, ತರಗತಿ ಕೋಣೆಗಳನ್ನು ಪರಿಶೀಲಿಸಿದ್ದೆವು. ಅಲ್ಲದೇ ಮೂಲಸೌಕರ್ಯಗಳ ಕೊರತೆ ಬಗ್ಗೆ ಪಿಯು ಬೋರ್ಡ್ ನಿರ್ದೇಶಕರಿಗೆ ದೂರು ನೀಡಿದ್ದೇವೆ. ಈಗ ನಡೆಯುತ್ತಿರುವ ಪೂರಕ ಪರೀಕ್ಷೆ ಮುಗಿದ ತಕ್ಷಣ ಜಿಲ್ಲೆಯ ಒಟ್ಟು 57 ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಮೂಲ ಸೌಕರ್ಯಗಳ ಕೊರತೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.•ಶಿವಶರಣಪ್ಪ ಮೂಳೆಗಾಂವ,
ಉಪ ನಿರ್ದೇಶಕರು, ಪಿಯು ಬೋರ್ಡ್, ಕಲಬುರಗಿ