Advertisement

ಮಹಾಲಕ್ಷ್ಮೀ ಜಾತ್ರೆ-ಅದ್ಧೂರಿ ರಥೋತ್ಸವ

11:39 AM Oct 20, 2019 | Naveen |

ಜೇವರ್ಗಿ: ಕಲ್ಯಾಣ-ಕರ್ನಾಟಕ ಭಾಗದಲ್ಲಿಯೇ ಸಗರನಾಡಿನ ಶಕ್ತಿ ದೇವತೆ ಎಂದು ಪ್ರಸಿದ್ಧಿ ಪಡೆದಿರುವ ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ಧೂರಿ ರಥೋತ್ಸವ ನಡೆಯಿತು.

Advertisement

ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನ ಟ್ರಸ್ಟ್‌ ಕಮಿಟಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಬೆಳಗ್ಗೆ 10 ಗಂಟೆಗೆ ತಹಶೀಲ್ದಾರ್‌ ಸಿದರಾಯ ಭೋಸಗಿ, ಶಾಸಕ ಡಾ| ಅಜಯಸಿಂಗ್‌, ವಿವಿಧ ಇಲಾಖೆಗಳ ಅ ಧಿಕಾರಿಗಳು ಹಾಗೂ ಊರಿನ ಪ್ರಮುಖರು ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ರಥೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನಾಡಿನ ಅನೇಕ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ದೇವಿ ದರ್ಶನ ಪಡೆದರು.

ರಥೋತ್ಸವ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಡೊಳ್ಳು, ಹಲಗೆ, ಕೋಲಾಟ, ಡಿಜೆ ಸೇರಿದಂತೆ ವಿವಿಧ ರೀತಿಯ ಕಲಾ ತಂಡಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು. ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಬುಟ್ನಾಳ ರಸ್ತೆಯ ಸಜ್ಜನ ಕಲ್ಯಾಣ ಮಂಟಪದ ವರೆಗೆ ಅದ್ಧೂರಿಯಾಗಿ ಸಾಗಿತು. ರಥೋತ್ಸವ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ದೇವಿ ಕೃಪಾಶೀರ್ವಾದಕ್ಕೆ ಪಾತ್ರರಾದರು. ಜಾತ್ರೆ ಅಂಗವಾಗಿ ಐದಾರು ಕಡೆ ಅನ್ನಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ಎರಡು ಕಿ.ಮೀ ವರೆಗೆ ನಡೆಯುವ ರಥೋತ್ಸವದ ದಾರಿಯುದ್ದಕ್ಕೂ ಭಕ್ತರ ದಂಡೇ ನೆರೆದಿತ್ತು. ಸಂಜೆ 6 ಗಂಟೆಗೆ ರಥೋತ್ಸವ ಸಜ್ಜನ್‌ ಕಲ್ಯಾಣ ಮಂಟಪ ತಲುಪಿತು. ನಂತರ ರಥೋತ್ಸವ ಕಟ್ಟಿದ ಮಂಟಪ ಬಿಚ್ಚಿಟ್ಟು ಹಿರೇಗೌಡರ ಮನೆಗೆ ತೆಗೆದುಕೊಂಡು ಹೋದ ನಂತರ ಕೋಲಿ ಸಮುದಾಯದವರು ತಲೆ ಮೇಲೆ ದೇವಿ ಸಮೇತ ರಥ ಹೊತ್ತುಕೊಂಡು ನಾಲ್ಕು ಕಿ.ಮೀ ದೂರದ ಸೀಮೆ ಮಂದಿರಕ್ಕೆ ತಂದರು.

ಊರಿನ ಪ್ರಮುಖರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ನಂತರ ಊರಿನ ಪಂಚರ ಸಮ್ಮುಖದಲ್ಲಿ ಕೋಲಿ ಸಮುದಾಯದವರು ದೇವಿ ಆಭರಣಗಳನ್ನು ಟ್ರಸ್ಟ್‌ ಕಮಿಟಿಗೆ ಹಸ್ತಾಂತರಿಸಿದರು.

Advertisement

ರಥೋತ್ಸವದಲ್ಲಿ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಸವರಾಜ ಸಾಹು ಗೋಗಿ, ಜಿಪಂ ಸದಸ್ಯರಾದ ಶಿವರಾಜ ಪಾಟೀಲ ರದ್ದೇವಾಡಗಿ, ರೇವಣಸಿದ್ದಪ್ಪ ಸಂಕಾಲಿ, ಮಾಜಿ ಸದಸ್ಯ ಬಸವರಾಜ ಪಾಟೀಲ, ಜೆಡಿಎಸ್‌ ಮುಖಂಡ ವಿಜಯಕುಮಾರ ಹಿರೇಮಠ, ಹಿರಿಯ ಮುಖಂಡರಾದ ಷಣ್ಮುಖಪ್ಪಗೌಡ ಪೊಲೀಸ್‌ ಪಾಟೀಲ, ರಮೇಶಬಾಬು ವಕೀಲ, ಸೋಮಣ್ಣ ಕಲ್ಲಾ, ಷಣ್ಮುಖಪ್ಪ ಸಾಹು ಗೋಗಿ, ನೀಲಕಂಠ ಅವಂಟಿ, ವಿಶ್ವನಾಥ ಇಮ್ಮಣ್ಣಿ, ಬಂಡೆಪ್ಪ ಬಡಿಗೇರ, ಜಗದೀಶ ವಿಶ್ವಕರ್ಮ, ರವಿ ಕೋಳಕೂರ, ರಾಮಣ್ಣ ಪೂಜಾರಿ, ಭೀಮು ತಳವಾರ, ಶರಣಗೌಡ ಸರಡಗಿ, ರಾಜು ತಳವಾರ, ಹರಿಶ್ಚಂದ್ರ ಕೊಡಚಿ, ಗಣೇಶ ಮಹೇಂದ್ರಕರ್‌, ಚಂದನ ಮಹೇಂದ್ರಕರ್‌, ಸಂಗಮೇಶ ಕೊಂಬಿನ್‌, ಬಸವರಾಜ ಸುಬೇದಾರ, ವಿಶ್ವ ಮದಕರಿ, ಶಿವಪ್ಪ ಮಡಿವಾಳಕರ್‌, ಭೀಮು ಮಡಿವಾಳಕರ್‌ ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು.

ಸಂಜೆ ಜಂಗೀ ಕುಸ್ತಿ, ಲಾವಣಿ ಪದ, ಬಯಲಾಟ, ನಾಟಕ, ಗೀಗೀ ಪದಗಳು, ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರ, ಸಿಪಿಐ ರಮೇಶ ರೊಟ್ಟಿ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು .

Advertisement

Udayavani is now on Telegram. Click here to join our channel and stay updated with the latest news.

Next