ಜೇವರ್ಗಿ: ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 50ರ ಬದಿ ಸತ್ತ ದನ, ಹಂದಿ, ನಾಯಿಗಳನ್ನು ತಂದು ಬಿಸಾಕುತ್ತಿರುವುದರಿಂದ ಗಬ್ಬು ವಾಸನೆಯಿಂದ ನಿತ್ಯ ವಾಹನ ಸವಾರರು, ಪಾದಚಾರಿಗಳು ನರಕಯಾತನೆ ಅನುಭವಿಸುವಂತಾಗಿದೆ.
Advertisement
ಕಳೆದ ಹತ್ತಾರು ವರ್ಷಗಳಿಂದ ಇದೇ ರೀತಿ ಇದ್ದು, ಈ ಬಗ್ಗೆ ಪುರಸಭೆ ಅಧಿಕಾರಿಗಳು ಗೊತ್ತಿದ್ದೂ ಗೊತ್ತಿಲ್ಲದ ರೀತಿ ವರ್ತಿಸುತ್ತಿರುವುದು ಸ್ಥಳಿಯರಿಗೆ ಬೇಸರವನ್ನುಂಟು ಮಾಡಿದೆ. ಶಹಾಪುರ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಹಿಂದುಗಡೆ ಪುರಸಭೆ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕ ಸ್ಥಾಪಿಸಿದರೂ ಯಾವುದೇ ರೀತಿ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಪುರಸಭೆ ಸಿಬ್ಬಂದಿ ಕೂಡ ಕಾರಣ. ಪಟ್ಟಣದಲ್ಲಿ ಬೆಳಗ್ಗೆ ಕಸಗೂಡಿಸುವುದು, ಮನೆ ಮನೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಹೆದ್ದಾರಿ ಬದಿ ಸತ್ತ ಹಂದಿ, ನಾಯಿ, ದನಗಳನ್ನು ತಂದು ಹಾಕಲಾಗುತ್ತಿದೆ. ಕನಕದಾಸ ವೃತ್ತ ಸೇರಿದಂತೆ ಕೆಲವು ಕಡೆ ಇರುವ ಮಾಂಸದ ಅಂಗಡಿಯವರು ತ್ಯಾಜ್ಯ ತಂದು ಇಲ್ಲಿಯೇ ಹಾಕುತ್ತಿದ್ದಾರೆ. ಇದರಿಂದ ಕೆಟ್ಟ ವಾಸನೆ ಬರುತ್ತಿದೆ. ಕಲಬುರಗಿಯಿಂದ ಜೇವರ್ಗಿ, ಜೇವರ್ಗಿಯಿಂದ ಕಲಬುರಗಿಗೆ ತೆರಳುವ ಪ್ರತಿ ವಾಹನದವರು ಇಲ್ಲಿ ಮೂಗು ಮುಚ್ಚಿಕೊಳ್ಳಲೇಬೇಕು. ಇಲ್ಲದಿದ್ದರೇ ವಾಂತಿ ಗ್ಯಾರಂಟಿ. ಅಷ್ಟು ಕೆಟ್ಟ ವಾಸನೆ ಇಲ್ಲಿ ಮೂಗಿಗೆ ನಿತ್ಯ ರಾಚುತ್ತಿದೆ. ಪಟ್ಟಣದ ಕೆಲ ಆಗ್ರೋ ಮಳಿಗೆಯವರು ಅವಧಿ ಮುಗಿದ ಕೀಟನಾಶಕ ತಂದು ಇಲ್ಲಿಯೇ ಹಾಕುತ್ತಿದ್ದಾರೆ. ಅಪಾಯಕಾರಿ ಅಂಶಗಳನ್ನು ಒಳಗೊಂಡ ತ್ಯಾಜ್ಯ ವಸ್ತುಗಳು ಚೆಲ್ಲಾಪಿಲ್ಲಿಯಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ನಾಯಿ, ದನಗಳು, ಹದ್ದುಗಳ ಆಶ್ರಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಕೆಲವು ಜನರು ಕಸದ ರಾಶಿಗೆ ಬೆಂಕಿ ಹಾಕಿ ಸುಡುವುದರೊಂದಿಗೆ ಇಡೀ ವ್ಯಾಪ್ತಿಯಲ್ಲಿ ವಾಸನೆಯೊಂದಿಗೆ ಪರಿಸರ ಸಂಪೂರ್ಣ ಹೊಗೆಮಯವಾಗಿ ಗೋಚರಿಸುತ್ತಿದೆ.