Advertisement

ಜೇವರ್ಗಿಯಲ್ಲಿ ಹೆಚ್ಚುತ್ತಿದೆ ಹಂದಿಗಳ ಉಪಟಳ

11:08 AM Oct 14, 2019 | Naveen |

ವಿಜಯಕುಮಾರ ಎಸ್‌.ಕಲ್ಲಾ
ಜೇವರ್ಗಿ: ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದು, ದ್ವಿಚಕ್ರವಾಹನ ಸವಾರರು ರಸ್ತೆಗಿಳಿಯಲು ಆತಂಕ ಪಡುತ್ತಿದ್ದಾರೆ.

Advertisement

ಪಟ್ಟಣದ ದತ್ತನಗರ, ಶಿಕ್ಷಕರ ಕಾಲೋನಿ, ಬಸವೇಶ್ವರ ನಗರ, ಶಾಸ್ತ್ರೀ ಚೌಕ್‌ ಬಡಾವಣೆ, ವಿದ್ಯಾನಗರ, ಖಾಜಾ ಕಾಲೋನಿ, ಜೋಪಡಪಟ್ಟಿ, ಲಕ್ಷ್ಮೀ ಚೌಕ್‌, ಜನತಾ ಕಾಲೋನಿ, ಅಖಂಡೇಶ್ವರ ನಗರ, ರಾಷ್ಟ್ರೀಯ ಹೆದ್ದಾರಿ ಮೇಲೆ ಹಂದಿಗಳ ಹಾವಳಿ ಹೆಚ್ಚಾಗಿದೆ.

ಈ ಬಗ್ಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಂದಿಗಳು ರಸ್ತೆಗಳ ಮೇಲೆ ದಿಢೀರನೇ ಅಡ್ಡ ಬಂದಾಗ ಕಕ್ಕಾಬಿಕ್ಕಿ ಆಗುವ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಹಂದಿಗಳು ಮೃತಪಟ್ಟರೆ, ಮನುಷ್ಯರಿಗೆ ಆ ರೋಗ ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾಕಾಣಿಕೆದಾರರಿಗೆ ಎಚ್ಚರಿಕೆ ನೀಡಬೇಕು.

ನಾಡ ಹಂದಿಗಳ ಮಾಂಸಕ್ಕೆ ಹೊರ ಜಿಲ್ಲೆ ಹಾಗೂ ಬೇರೆ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಒಂದು ಕೆ.ಜಿ ಮಾಂಸ 300 ರಿಂದ 350 ರೂ. ಗೆ ಮಾರಾಟವಾಗುತ್ತಿದೆ. ಕೆಲವರು ಇದನ್ನೇ ಉದ್ಯಮ ಮಾಡಿಕೊಂಡಿದ್ದಾರೆ.

ಗೋವಾದಲ್ಲಿ ಹಂದಿ ಮಾಂಸಕ್ಕೆ ಅಧಿಕ ಬೇಡಿಕೆ ಇದ್ದು, ಇಲ್ಲಿಯ ನಾಡ ಹಂದಿಗಳನ್ನು ರಫ್ತು ಮಾಡುವ ದೊಡ್ಡ ತಂಡವೇ ಇದೆ ಎನ್ನಲಾಗಿದೆ. ನಾಡ ಹಂದಿಗಳು ಕೊಳಚೆ ಪ್ರದೇಶದಲ್ಲಿಯೇ ಹೆಚ್ಚಾಗಿರುತ್ತವೆ. ಪುರಸಭೆ ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ಹೊರಗಿನಿಂದ ಹಂದಿ ಮರಿಗಳನ್ನು ತಂದು, ಅವು ದಷ್ಟಪುಷ್ಟವಾದ ಮೇಲೆ ಪುನಃ ಹಿಡಿದುಕೊಂಡು ಹೋಗುತ್ತಾರೆ.

Advertisement

ಜನಸಾಮಾನ್ಯರಿಗೆ ತೊಂದರೆ ಆಗದಂತೆ ಹಂದಿ ಸಾಕಾಣಿಕೆ ಮಾಡಬೇಕು. ನಾಡಹಂದಿ ಸಾಕಾಣಿಕೆ ಮಾಡುವವರಿಗೆ ಪುರಸಭೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು. ಪಟ್ಟಣದಲ್ಲಿರುವ ಸಾವಿರಾರು ಹಂದಿಗಳು ಪಟ್ಟಣದ ಅಂದ ಕೆಡಿಸುವುದಲ್ಲದೇ ಚರಂಡಿಗಳಲ್ಲಿ ಹೊರಳಾಡಿ ದುರ್ವಾಸನೆ ಎಬ್ಬಿಸುತ್ತಿವೆ. ಪಟ್ಟಣಕ್ಕೆ ಬಂದ ಅಪರಿಚಿತರು ಆಹಾರ ಪದಾರ್ಥಗಳನ್ನು ಬೈಕ್‌ ಸೈಡ್‌ಬ್ಯಾಗ್‌, ಸೈಕಲ್‌ಗ‌ಳಲ್ಲಿ ಇಟ್ಟು ಹೋದರೆ ಅವುಗಳನ್ನು ಹಂದಿಗಳು ಜಗ್ಗಿಕೊಂಡು ಹೋಗುತ್ತಿವೆ.

ಶಾಂತನಗರ ಬಡಾವಣೆಯಲ್ಲಿ ಇರುವ ಹಂದಿಗಳ ಮಾಲೀಕರಿಗೆ ಪುರಸಭೆ ಹಾಗೂ ಸಾರ್ವಜನಿಕರಿಂದ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳುವ ಮೊದಲೆ ಪುರಸಭೆ ಅಧಿಕಾರಿಗಳು ಹಂದಿ ಸಾಕಾಣಿಕೆದಾರರಿಗೆ ನೋಟಿಸ್‌ ನೀಡಬೇಕು. ಸ್ಪಂದಿಸದಿದ್ದರೆ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next