Advertisement

ಜೇವರ್ಗಿ ಪುರಸಭೆ: 10 ತಿಂಗಳಾದರೂ ಸಿಕ್ಕಿಲ್ಲ ಅಧಿಕಾರ

10:02 AM Jun 29, 2019 | Naveen |

ವಿಜಯಕುಮಾರ ಎಸ್‌. ಕಲ್ಲಾ
ಜೇವರ್ಗಿ:
ಸ್ಥಳಿಯ ಪುರಸಭೆ ಚುನಾವಣೆ ಮುಗಿದು 10 ತಿಂಗಳಾದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಲ್ಲದೇ ಸಾರ್ವಜನಿಕ ಕೆಲಸ, ಅಭಿವೃದ್ಧಿ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.

Advertisement

ಮುಖ್ಯಾಧಿಕಾರಿಗಳ ವರ್ಗಾವಣೆ, ಸಿಬ್ಬಂದಿ ಮಂದಗತಿ ಕಾರ್ಯದಿಂದಾಗಿ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಜೇವರ್ಗಿ ಪುರಸಭೆಗೆ 2018ರ ಆಗಸ್ಟ್‌ ತಿಂಗಳಲ್ಲಿ ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಬಂದಿತ್ತು. ಆದರೂ ಇಲ್ಲಿಯವರೆಗೂ ಚುನಾಯಿತ ಸದಸ್ಯರಿಗೆ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರಿಂದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಕೂಡ ಸ್ಥಗಿತಗೊಂಡಿದೆ. ಮುಂದೆ ಸರ್ಕಾರದಿಂದ ಮೀಸಲಾತಿ ಮರು ಪ್ರಕಟಣೆ, ಮತ್ತೇ ಮರು ಪ್ರಕಟಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದರ ಜತೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಸೇರಿದಂತೆ ಹಲವು ಕಾರಣಗಳಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿರಲಿಲ್ಲ. ಇವೆಲ್ಲ ಕಾರಣದಿಂದ ಪುರಸಭೆ ಅಧಿಕಾರ ಚುಕ್ಕಾಣಿಗಾಗಿ ಚುನಾಯಿತ ಸದಸ್ಯರು 10 ತಿಂಗಳಿನಿಂದ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಅಡ್ಡಿಯಾದ ತಡೆಯಾಜ್ಞೆ ತೆರವಾಗಬೇಕು. ಈ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದರೂ ಕನಿಷ್ಠ ಎರಡರಿಂದ ಮೂರು ತಿಂಗಳಾದರೂ ಬೇಕಾಗುತ್ತದೆ. ಇದರಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ.

ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದ ಪರಿಣಾಮ ನಾವು ಅಧಿಕೃತ ಅಧಿಕಾರ ಹೊಂದದೇ ಇರುವುದರಿಂದ ವಾರ್ಡ್‌ನ ಸಾರ್ವಜನಿಕರಿಗೆ ಪೂರ್ಣ ಪ್ರಮಾಣದ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ಮತ ನೀಡಿದ ಮತದಾರರಿಂದಲೇ ಟೀಕೆಗೊಳಗಾಗುವ ಮುಜುಗರ ಪ್ರಸಂಗಗಳು ಅನುಭವಿಸಬೇಕಾಗಿದೆ. ತಡೆಯಾಜ್ಞೆ ತೆರವಾಗಿ ಶೀಘ್ರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದು ಅಧಿಕೃತ ಸದಸ್ಯರಾಗಿ ಪುರಸಭೆ ಪ್ರವೇಶಿಸಲು ಕಾಯುತ್ತಿದ್ದೇವೆ ಎನ್ನುತ್ತಾರೆ ಚುನಾಯಿತ ಸದಸ್ಯರಾದ ಸಂಗನಗೌಡ ರದ್ಧೇವಾಡಗಿ, ಶಿವಬಾಯಿ ಕೊಂಬಿನ್‌, ಶಾಹೀನ್‌ಬೇಗಂ ಅಬ್ದುಲ್ ಖಯೂಮ್‌.

ಕಳೆದ ಕೆಲವು ತಿಂಗಳುಗಳಿಂದ ಪುರಸಭೆಯಲ್ಲಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸ್ವಚ್ಛತೆ ಮರೀಚಿಕೆಯಾಗಿದೆ. ಕುಡಿಯುವ ನೀರಿಗಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಚುನಾಯಿತ ಸದಸ್ಯರು ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದ್ದಾರೆ. ನಮ್ಮ ಸಮಸ್ಯೆ ಕೇಳುವರೇ ಇಲ್ಲದಂತಾಗಿದೆ.
ದೇವಿಂದ್ರ ಬನ್ನೆಟ್ಟಿ,
ಖಾಜಾ ಕಾಲೋನಿ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next