Advertisement

ಹೆದ್ಧಾರಿ ಪ್ರಯಾಣಿಕರ ಗೋಳು ಕೇಳ್ಳೋರಿಲ್ಲ!

11:36 AM Jan 08, 2020 | |

ಜೇವರ್ಗಿ: ರಾಷ್ಟ್ರೀಯ ಹೆದ್ದಾರಿ-50ರ ಮೇಲೆ ಬರುವ ಹತ್ತಾರು ಗ್ರಾಮಗಳಲ್ಲಿ ಅವೈಜ್ಞಾನಿಕ ಬಸ್‌ ತಂಗುದಾಣ ನಿರ್ಮಿಸಿರುವುದರಿಂದ ರೈತರು, ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ನಿತ್ಯ ಬಿಸಿಲು, ಮಳೆಯಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.

Advertisement

ತಾಲೂಕಿನ ಕಟ್ಟಿಸಂಗಾವಿಯಿಂದ ಜೇರಟಗಿ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ-50 ಹಾಯ್ದು ಹೋಗಿದೆ. ಇದರ ಮಧ್ಯದಲ್ಲಿ ರೇವನೂರ ಕ್ರಾಸ್‌, ಹರವಾಳ, ಮಾವನೂರ, ಸೊನ್ನ, ನೆಲೋಗಿ, ಹಿಪ್ಪರಗಾ ಎಸ್‌.ಎನ್‌ ಕ್ರಾಸ್‌, ಮಂದೇವಾಲ, ನೇದಲಗಿ, ಜೇರಟಗಿ ಗ್ರಾಮಗಳು ಬರುತ್ತವೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ-50 ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಂಡಿದೆ. ಈ ವೇಳೆ ಹೆದ್ದಾರಿ ಗುತ್ತಿಗೆ ಪಡೆದವರು ಬಸ್‌ ತಂಗುದಾಣಗಳನ್ನು ಆಯಾ ಗ್ರಾಮ, ಕ್ರಾಸ್‌ಗಳ ಬಳಿ ಇರುವ ಜನಬೀಡ ಪ್ರದೇಶದಲ್ಲಿ ನಿರ್ಮಾಣ ಮಾಡದೇ ಇರುವುದರಿಂದ ಸಮಸ್ಯೆ ಉದ್ಭವವಾಗಿದೆ.

ಜನಬೀಡ ಪ್ರದೇಶ ಬಿಟ್ಟು 400-500 ಮೀಟರ್‌ ದೂರದಲ್ಲಿ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಹೆದ್ದಾರಿ-50 ರ ಮೇಲೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಅಪಘಾತ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ರಸ್ತೆ ದಾಟುವಾಗ ಅಪಘಾತ ಸಂಭವಿಸಿ ಅನೇಕ ಜನರಿಗೆ ಗಂಭೀರ ಗಾಯಗಳಾಗಿವೆ. ಗ್ರಾಮಸ್ಥರಿಗೆ ಹೆದ್ದಾರಿಯೇ ನಿಲ್ದಾಣವಾಗಿ ಬಿಟ್ಟಿದೆ.

ಅದರಲ್ಲೂ ಬಸ್‌, ಆಟೋ, ಟಂಟಂ, ಜೀಪ್‌ಗ್ಳು ಪ್ರಯಾಣಿಕರನ್ನು ನಿಲ್ದಾಣದ ಬಳಿ ಇಳಿಸದೇ ರಸ್ತೆ ಮಧ್ಯೆ ಇಳಿಸಿ ಹೋಗುತ್ತಿವೆ. ಸ್ವಲ್ಪ ಯಾಮಾರಿದರೇ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಮಳೆ, ಬಿಸಿಲು ಇದ್ದ ಸಂದರ್ಭದಲ್ಲಿ ಅಕ್ಕ-ಪಕ್ಕದ ಅಂಗಡಿಗಳ ಆಶ್ರಯ ಪಡೆಯುವ ಪ್ರಯಾಣಿಕರ ಗೋಳನ್ನು ಯಾರೂ ಕೇಳುವರಿಲ್ಲದಂತಾಗಿದೆ. ನಿತ್ಯ ನೂರಾರು‌ ವಿದ್ಯಾರ್ಥಿಗಳು, ರೈತರು ಜೇವರ್ಗಿ, ಸಿಂದಗಿ ಪಟ್ಟಣಗಳಿಗೆ ಹೋಗಿ-ಬಂದು ಮಾಡುವುದರಿಂದ ಬಸ್‌ಗಾಗಿ ಬಿಸಿಲು, ಮಳೆ, ಚಳಿಯಲ್ಲಿ ಕಾಯುವಂತಹ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಜನಪ್ರತಿನಿ ಧಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೆದ್ದಾರಿ ಅಭಿವೃದ್ಧಿ ಪ್ರಾಧಿ ಕಾರದ ಅಧಿ ಕಾರಿಗಳು ನಿರ್ಮಿಸಿರುವ
ತಂಗುದಾಣಗಳು ಅವೈಜ್ಞಾನಿಕವಾಗಿವೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಎಲ್ಲವನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲವಾಗುವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು.
ಮಹೇಶ ಮಹಾಜನಶೆಟ್ಟಿ ,
ಗ್ರಾಮಸ್ಥ, ಸೊನ್ನ

Advertisement

ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ನಿತ್ಯ ನೂರಾರು ಜನ ಮಹಿಳೆಯರು, ರೈತರು, ವಿದ್ಯಾರ್ಥಿಗಳು, ವೃದ್ಧರು ಪಟ್ಟಣಕ್ಕೆ ಬಂದು ಹೋಗುತ್ತಿದ್ದು, ಸೂಕ್ತ ಸ್ಥಳದಲ್ಲಿ ತಂಗುದಾಣ ನಿರ್ಮಾಣ ಮಾಡದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗುವುದು.
ಪ್ರವೀಣಕುಮಾರ ಕುಂಟೋಜಿಮಠ, ಜೇರಟಗಿ
(ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್‌ ಜೇವರ್ಗಿ)

„ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next