ಜೇವರ್ಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಉಂಟಾದ ಕೆಸರು ರಾಡಿಯಲ್ಲೇ ಮಂಗಳವಾರ ಸಂತೆ ನಡೆಯಿತು.
ಪಟ್ಟಣದ ಅಂಬೇಡ್ಕರ್ ಸರ್ಕಲ್ದಿಂದ ಕನಕದಾಸ ವೃತ್ತದ ವರೆಗೆ ತೆರಳುವ ಮುಖ್ಯ ರಸ್ತೆ ಮೇಲೆ ನಡೆಯುತ್ತಿದ್ದ ಸಂತೆ ಇತ್ತೀಚೆಗೆ ಬಸವೇಶ್ವರ ಸರ್ಕಲ್ ಹತ್ತಿರವಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಕ್ಕೆ ಸ್ಥಳಾಂತರಗೊಂಡ ನಂತರ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ.
ಎಪಿಎಂಸಿ ಮೊದಲ ಗೇಟ್‌ನ ಬಲಭಾಗದ ಬಯಲು ಪ್ರದೇಶದಲ್ಲಿ ಸಂತೆ ನಡೆಸಲಾಗುತ್ತಿದ್ದು, ಯಾವುದೇ ಸೌಲಭ್ಯವಿಲ್ಲದೇ ಜನರು, ವ್ಯಾಪಾರಿಗಳು ಪರದಾಡುವಂತಾಗಿದೆ. ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನ ಅಕ್ಕ-ಪಕ್ಕದ ಬಡಾವಣೆ ನಿವಾಸಿಗಳು ಶೌಚಕ್ಕೆ ಬಳಸುವ ಜಾಗದಲ್ಲಿ ಸಂತೆ ನಡೆಸಲಾಗುತ್ತಿದೆ.
ತರಕಾರಿ, ಹಣ್ಣು, ಬಟ್ಟೆ, ಕಾಳು-ಕಡಿ ಸೇರಿದಂತೆ ವಿವಿಧ ತರದ ಮಾರಾಟಗಾರರಿಗೆ ಸೂಕ್ತ ಆಸನದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಸಾಕಷ್ಟು ತೊಂದರೆಯುಂಟಾಗುತ್ತಿದೆ. ಸೋವåವಾರ ಒಂದು ಗಂಟೆ ಸುರಿದ ಮಳೆಯಿಂದ ಇಡೀ ಆವರಣದ ತುಂಬೆಲ್ಲಾ ನೀರು ನಿಂತು ಗಲೀಜು ಸೃಷ್ಟಿಯಾಗಿದೆ. ವಿವಿಧ ಗ್ರಾಮೀಣ ಪ್ರದೇಶಗಳಿಂದ ಬರುವ ತರಕಾರಿ ವ್ಯಾಪಾರಿಗಳಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೇ ಅನಿವಾರ್ಯವಾಗಿ ಕೆಸರು ರಾಡಿಯಲ್ಲಿ ತರಕಾರಿ ಮಾರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿದು ಹೋಗದೇ ಅಲ್ಲಿಯೇ ನಿಂತ ಪರಿಣಾಮ ಈ ಸಮಸ್ಯೆಯಾಗಿದೆ. ಸಂತೆಗೆ ಬರುವ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡುವ ಪುರಸಭೆ ಹಾಗೂ ಎಪಿಎಂಸಿ ಅಧಿಕಾರಿಗಳು ಮೂಲ ಸೌಲಭ್ಯ ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಮಂಗಳವಾರ ನಡೆದ ಸಂತೆಯಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದ ಕಾರಣ ತಳ್ಳುವ ಬಂಡಿಯಲ್ಲಿ ತರಕಾರಿ, ಕಾಳು ಕಡಿ, ಬಟ್ಟೆ ವ್ಯಾಪಾರ ನಡೆಸಬೇಕಾಯಿತು. ಸ್ಥಳಿಯ ಹಾಗೂ ಗ್ರಾಮೀಣ ಪ್ರದೇಶದಿಂದ ಸಂತೆಗೆ ಬಂದ ಜನ ಕೆಸರು ರಾಡಿಯಲ್ಲಿಯೇ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ತರಕಾರಿ ಖರೀದಿ ಮಾಡುವಂತಾಯಿತು.
ಮೂಲ ಸೌಲಭ್ಯ ಒದಗಿಸದಿದ್ದರೆ ಹೋರಾಟ ಎಪಿಎಂಸಿ ಅಧಿಕಾರಿಗಳು ಪ್ರತಿ ಮಂಗಳವಾರ ನಡೆಯುವ ಸಂತೆಗೆ ಬರುವ ವ್ಯಾಪಾರಿಗಳಿಗೆ ಹಾಗೂ ಜನರಿಗೆ ಮೂಲಸೌಲಭ್ಯ ಒದಗಿಸಿಕೊಡಬೇಕು, ಇಲ್ಲದಿದ್ದರೇ ಎಪಿಎಂಸಿ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.
•
ರುಕುಂ ಪಟೇಲ,
ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ