ಜೇವರ್ಗಿ: ಹೆಮ್ಮರವಾಗಿ ಬೆಳೆದ ಜಾಲಿ ಕಂಟಿ, ಸಂಪೂರ್ಣ ಹದಗೆಟ್ಟ ರಸ್ತೆ, ಬಲ್ಬ್ಗಳಿಲ್ಲದ ವಿದ್ಯುತ್ ಕಂಬ, ರಸ್ತೆ ಮೇಲೆ ಚರಂಡಿ ನೀರು ಹೀಗೆ ಅನೇಕ ಸಮಸ್ಯೆ ಹೊತ್ತಿರುವ ತಾಲೂಕಿನ ಹಂಚಿನಾಳ ಎಸ್.ಎ ಗ್ರಾಮ ಹಾಳು ಕೊಂಪೆಯಾಗಿದೆ.
Advertisement
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮೀಣ ಅಭಿವೃದ್ಧಿಗಾಗಿ ಪ್ರತಿ ವರ್ಷ ಕೋಟ್ಯಂತರ ರೂ.ಅನುದಾನ ಬಿಡುಗಡೆ ಮಾಡಲಾಗುತ್ತಿದೆಯಾದರೂ ನಾಗರಿಕರ ಮೂಲ ಸಮಸ್ಯೆ ನಿವಾರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
Related Articles
Advertisement
ಹಂಚಿನಾಳ ಗ್ರಾಮದಲ್ಲಿ ಕಸದ ರಾಶಿ ತುಂಬಿ ಕೆಟ್ಟ ವಾಸನೆ ಬೀರುತ್ತಿದೆ. ಜನತೆ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಜನ ಸಾಂಕ್ರಾಮಿಕ ರೋಗಗಳು ಹರಡುವ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ರಸ್ತೆಯಂಚಿನಲ್ಲಿ ಕೆಲವರು ತಿಪ್ಪೆಗುಂಡಿ ಹಾಕಿಕೊಂಡಿದ್ದಾರೆ. ಸಿಸಿ ರಸ್ತೆ, ಚರಂಡಿ ಇಲ್ಲದ ಕಾರಣ ಮನೆ ಬಳಕೆ ನೀರು ಸಂಗ್ರಹವಾಗಿ ಗಬ್ಬು ವಾಸನೆ ಬರುತ್ತಿದೆ. ಈ ಗ್ರಾಮದಲ್ಲಿ ಕಳೆದ ಅನೇಕ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾದರೂ ಗ್ರಾಮಸ್ಥರ ಗೋಳು ಕೇಳುವರು ಇಲ್ಲದಂತಾಗಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆ, ರಾತ್ರಿ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ವಿದ್ಯುತ್ ಸಂಪರ್ಕ. ಇಡೀ ರಾತ್ರಿ ಕತ್ತಲಲ್ಲಿ ಕಳೆಯಬೇಕು. ಇದರಿಂದ ಮಕ್ಕಳಿಗೆ, ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ.
ಗ್ರಾಮದಲ್ಲಿ ಕಂಬಗಳಿವೆ, ಬೀದಿ ದೀಪಗಳಿಲ್ಲ, ಮಹಿಳಾ ಶೌಚಾಲಯವಿಲ್ಲ, ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮದ ಜನ ಮೂಲಸೌಕರ್ಯವಿಲ್ಲದೇ ನಿತ್ಯ ನರಕಯಾತನೆ ಪಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮದ ಕಡೆ ಗಮನಹರಿಸಿ ಮೂಲಸೌಕರ್ಯ ಕಲ್ಪಿಸುತ್ತಾರೋ ಇಲ್ಲವೋ ಕಾಯ್ದು ನೋಡಬೇಕು.
ಗ್ರಾಮದ ಪರಿಸ್ಥಿತಿ ಹಾಗೂ ದುಸ್ಥಿತಿಯನ್ನು ಶಾಸಕ ಡಾ| ಅಜಯಸಿಂಗ್ ಬಳಿ ಹೇಳಿಕೊಂಡಾಗ ಹಂಚಿನಾಳ ಗ್ರಾಮ ಎಲ್ಲಿ ಬರುತ್ತದೆ ಎಂದು ನಮ್ಮನ್ನೇ ಪ್ರಶ್ನಿಸಿದ್ದರು. ಇದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಜನರ ಸಮಸ್ಯೆ ಆಲಿಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳೇ ಈ ರೀತಿ ಉಡಾಫೆ ಮಾತುಗಳನ್ನು ಆಡಿದ್ದು ನಿಜಕ್ಕೂ ಬೇಸರ ತರಿಸಿದೆ.• ಅಂಬೋಜಿ ಜಗತ್ತಪ್ಪ , ಗ್ರಾಮಸ್ಥ ಜಾತ್ರೆ, ಕಾರ್ಯಕ್ರಮ ಏನೇ ನಡೆದರೂ ಯಾರೇ ಸತ್ತರೂ ಈ ಗ್ರಾಮಕ್ಕೆ ಜನಪ್ರತಿನಿಧಿಗಳು ಬರೋದಿಲ್ಲ. ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದರೂ ಶಾಸಕರು ಸೇರಿದಂತೆ ಜಿಪಂ, ತಾಪಂ, ಗ್ರಾಪಂ ಸದಸ್ಯರು ಅಭಿವೃದ್ಧಿ ಕಡೆ ಗಮನ ನೀಡುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಈ ಗ್ರಾಮ ಪ್ರತಿಯೊಬ್ಬರಿಗೂ ನೆನಪಿಗೆ ಬರುತ್ತದೆ.
• ಶರಣಪ್ಪ ಹೊಸಮನಿ, ಗ್ರಾಮಸ್ಥ