ಜೇವರ್ಗಿ: ಬೇಸಿಗೆ ಆರಂಭದೊಡನೆ ತರಕಾರಿಗಳು ತೀರ ಅಗ್ಗವಾಗಿದ್ದು, ಗ್ರಾಹಕರ ಮೇಲಿನ ಹೊರೆ ಅರ್ಧದಷ್ಟು ತಗ್ಗಿದ್ದು, ಕೋವಿಡ್-19 ಪ್ರಭಾವ ತರಕಾರಿ ಮಾರಾಟಕ್ಕೂ ತಟ್ಟಿದೆ ಎನ್ನಲಾಗುತ್ತಿದೆ.
ಸದ್ಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿದ್ದರೂ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಬೆಲೆಗಳು ಇಳಿಕೆ ಕಾಣುತ್ತಿವೆ. ಮಾರಕಟ್ಟೆಯಲ್ಲಿನ ಶೇ. 80ರಷ್ಟು ತರಕಾರಿಗಳ ಬೆಲೆಯು ತಿಂಗಳಿಂದ ಈಚೆಗೆ ಅರ್ಧದಷ್ಟು ಇಳಿಕೆ ಆಗಿವೆ. ಕಳೆದ ಕೆಲವು ತಿಂಗಳಿನಿಂದ ಗಗನಮುಖೀಯಾಗಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆ ಸದ್ಯ ಯಥಾಸ್ಥಿತಿಗೆ ಮರಳಿದೆ.
ಕೈಗೆಟುಕುವ ದರದಲ್ಲಿ ಈರುಳ್ಳಿ ಸಿಗುತ್ತಿರುವ ಕಾರಣ ಕೊಳ್ಳುವವರು ಖುಷಿಯಾಗಿದ್ದಾರೆ. ಟೊಮೊಟೋ ಬೆಲೆಯಲ್ಲಿ ಮತ್ತೆ ತೀವ್ರ ಕುಸಿತ ಕಾಣತೊಡಗಿದ್ದು, ಬೆಳೆಗಾರರಲ್ಲಿ ಆತಂಕ ತಂದೊಡ್ಡಿದೆ. ಸಗಟು ದರದಲ್ಲಿ 5ರೂ.ಗಿಂತ ಕಡಿಮೆ ಬೆಲೆಗೆ ವ್ಯಾಪಾರ ಆಗತೊಡಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇದರ ಸಂಪುರ್ಣ ಲಾಭ ಇನ್ನೂ ಗ್ರಾಹಕರಿಗೆ ತಲುಪುತ್ತಿಲ್ಲ.
ಕೆಲವು ತಿಂಗಳ ಹಿಂದಷ್ಟೆ ನುಗ್ಗೆಕಾಯಿ ಬೆಲೆ ಕೇಳಿ ಹೌಹಾರುತ್ತಿದ್ದವರೂ ಈಗ ಕೆ.ಜಿ ಗಟ್ಟಲೇ ಕಾಯಿಯನ್ನು ಬ್ಯಾಗಿಗೆ ಇಳಿಸತೊಡಗಿದ್ದಾರೆ. ನುಗ್ಗೆ ಸಾಕಷ್ಟು ಅಗ್ಗವಾಗಿದೆ, ಹಸಿ ಮೆಣಸಿನಕಾಯಿ ಬೆಲೆ ಸಹ ಕೊಳ್ಳುವವರ ಕಿವಿಗೆ ಹಿತವಾಗಿದೆ. ಉಳಿದಂತೆ ಮುಲ್ಲಂಗಿ, ಕ್ಯಾರೆಟ್, ಸೌತೆಕಾಯಿ, ಆಲೂಗಡ್ಡೆ, ಮೆಂತೆಪಲ್ಯಾ, ಪುಂಡಿಪಲ್ಯೆ, ಕೊತಂಬರಿ ಸೊಪ್ಪು, ಗೋಬಿ, ಪೂಲ್ ಗೋಬಿ, ಬದನೆಕಾಯಿ ಸಹಿತ ಪ್ರಮುಖ ತರಕಾರಿಗಳ ಬೆಲೆಗಳು ಇಳಿಮುಖವಾಗುತ್ತಿದೆ.
ಮಾರ್ಚ್ ತಿಂಗಳು ಬಂದರೂ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕೇಳುವವರು ಇಲ್ಲದಂತಾಗಿದೆ. ದಪ್ಪ ಗಾತ್ರದ ಕಾಯಿಗಳು 2ರೂ. ದರದಲ್ಲಿ ಮಾರಾಟ ಆಗುತ್ತಿವೆ. ಇನ್ನೂ ಕೆಲವು ಕಡೆ 10ರೂ.ಗೆ 10 ನಿಂಬೆಹಣ್ಣು ಮಾರಾಟ ಮಾಡಲಾಗುತ್ತಿದೆ. ಯಥೇಚ್ಛ ಪ್ರಮಾಣದಲ್ಲಿ ಉತ್ಪನ್ನ ಬಂದಿದ್ದರೂ ಬೇಡಿಕೆ ಇಲ್ಲದ ಕಾರಣ ಬೆಲೆ ಕಡಿಮೆಯೇ ಇದೆ. ಇದ್ದುದರಲ್ಲಿ ಆಲೂಗಡ್ಡೆ ಕೊಂಚ ಬೆಲೆ ಉಳಿಸಿಕೊಂಡಿದೆ. ಕೆ.ಜಿಗೆ 25ರಿಂದ 30ರೂ.ಗೆ ಮಾರಾಟವಾಗುತ್ತಿದೆ.
ಸೊಪ್ಪುಗಳ ಬೆಲೆಯಲ್ಲೂ ಸಾಕಷ್ಟು ಇಳಿಮುಖವಾಗಿದೆ. ಕೊತ್ತಂಬರಿ ದೊಡ್ಡ ಗಾತ್ರದ ಕಟ್ಟಿಗೆ 5ರೂ. ರಂತೆ ಮಾರಾಟ ನಡೆದರೆ, ಮೆಂತೆ ಪಲ್ಯಾ 10 ರೂ.ಗೆ ಐದು ಕಟ್ಟು, ಪುಂಡಿಪಲ್ಯೆ 5ರೂ.ಗೆ ನಾಲ್ಕು ಕಟ್ಟು ಹೀಗೆ ವಿವಿಧ ತರಹದ ಸೊಪ್ಪುಗಳು 10ರೂ. ಒಳಗೆ ಸಿಗುತ್ತಿವೆ.
ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಉತ್ಪನ್ನ ಬರುತ್ತಿದೆ. ಆದರೆ ಬೇಡಿಕೆಯೇ ಇಲ್ಲ. ಹೀಗಾಗಿ ಎಲ್ಲ ತರಕಾರಿಗಳ ಬೆಲೆ ಅರ್ಧದಷ್ಟು ತಗ್ಗಿದೆ. ಹೊರ ರಾಜ್ಯಗಳಿಂದ ತರಕಾರಿಗೆ ಬೇಡಿಕೆ ಕುಸಿದಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಯುನೂಸ್ ಇಬ್ರಾಹಿಂ ಬಾಗವಾನ್,
ತರಕಾರಿ ವ್ಯಾಪಾರಿ
ಈರುಳ್ಳಿ, ಟೊಮೊಟೋದಂತ ನಿತ್ಯ ಬಳಕೆಯ ತರಕಾರಿ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಸ್ವಲ್ಪ ಹಣದಲ್ಲೇ ಬುಟ್ಟಿ ತುಂಬ ತರಕಾರಿ ಒಯ್ಯಬಹುದು.
ವಿಜಯಲಕ್ಷ್ಮೀ ಪೊಲೀಸ್ ಪಾಟೀಲ,
ಗೃಹಿಣಿ.
ವಿಜಯಕುಮಾರ ಎಸ್.ಕಲ್ಲಾ