Advertisement

ಶಾಲೆಗೆ ಡ್ರಾಪ್‌ ಕೊಡ್ತಿರಾ ಪ್ಲೀಸ್‌!

10:22 AM Jul 29, 2019 | Naveen |

ವಿಜಯಕುಮಾರ ಎಸ್‌. ಕಲ್ಲಾ
ಜೇವರ್ಗಿ:
ಅಂಕಲ್, ಅಣ್ಣ, ಸರ್‌ ನಿಲ್ಸಿ..ನಿಲ್ಸಿ.. ಪ್ಲೀಸ್‌! ಶಾಲೆಗೆ ಟೈಂ ಆಗಿದೆ, ನಮಗೆ ಸ್ವಲ್ಪ ಡ್ರಾಪ್‌ ಕೊಡಿ! ಹೀಗೆಂದು ನಿತ್ಯ ಹೋಗೋ, ಬರೋ ಬೈಕ್‌ ಹಾಗೂ ಇನ್ನಿತರ ವಾಹನಗಳಿಗೆ ಕೈಯೊಡ್ಡುತ್ತಾರೆ ಚನ್ನೂರ ಬಳಿಯ ಆದರ್ಶ ವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳು.

Advertisement

ಪಟ್ಟಣದಿಂದ 4 ಕಿ.ಮೀ ದೂರದಲ್ಲಿ ಈ ಶಾಲೆಯಿದೆ. ನಿತ್ಯ ಶಾಲೆಗೆ ಹೋಗಲು ಮಕ್ಕಳು ಅನೇಕ ಕಸರತ್ತು ಮಾಡುತ್ತಾರೆ. ಈ ಆದರ್ಶ ಶಾಲೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ.

ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಬೈಕ್‌, ಟಂಟಂ ಸೇರಿದಂತೆ ಇನ್ನಿತರ ವಾಹನ ಸವಾರರಿಗೆ ಕೈ ಮಾಡಿ ವಾಹನ ನಿಲ್ಲಿಸಿ, ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ಏನಾದರೂ ಅಪಘಾತ ಸಂಭವಿಸಿದರೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಯಾರು ಹೊಣೆ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಾರೆ.

ಪಟ್ಟಣದ ಬಸವೇಶ್ವರ ಸರ್ಕಲ್ ಬಳಿಯಿರುವ ನರಿಬೋಳ ರಸ್ತೆ ಮೇಲೆ ಈ ವಿದ್ಯಾರ್ಥಿಗಳ ಗೋಳು ನಿತ್ಯ ನೋಡುವಂತಾಗಿದೆ.

ಚನ್ನೂರ ಗ್ರಾಮದ ಹತ್ತಿರ ಲಕ್ಷಾಂತರ ರೂ. ಖರ್ಚು ಮಾಡಿ ಮೂರು ಮಹಡಿಯ ಸುಸಜ್ಜಿತವಾದ ಆದರ್ಶ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. 6ನೇ ತರಗತಿಯಿಂದ 10ನೇ ತರಗತಿ ವರೆಗೆ 400 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ನಿತ್ಯ ಶಾಲೆಗೆ ಹೋಗಿ ಬರಲು ವಿದ್ಯಾರ್ಥಿಗಳು ತೊಂದರೆಪಡುತ್ತಿದ್ದು, ಈ ಬಗ್ಗೆ ಕಳೆದ 2016ರ ನವೆಂಬರ್‌ 29 ರಂದು ಜೇವರ್ಗಿ ಬಸ್‌ ಘಟಕದಲ್ಲಿ ನಡೆದ ಸಾರಿಗೆ ಸ್ಪಂದನ ಕಾರ್ಯಕ್ರಮದಲ್ಲಿ ಬಸ್‌ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಬೆಳಗ್ಗೆ 9 ಗಂಟೆಗೆ ಎರಡು, ಸಂಜೆ 4:30 ಗಂಟೆಗೆ ಎರಡು ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಿದ್ದಾರೆ. ಆದರೆ ಬೆಳಗ್ಗೆ ಹೋಗುವ ಎರಡೂ ಬಸ್‌ಗಳು ಶಾಲಾ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ.

Advertisement

ನರಿಬೋಳ, ಗುಡೂರ ಕಡೆ 4:15 ಗಂಟೆಗೆ ಬಸ್‌ ಹೋಗುವುದರಿಂದ ಆ ಗ್ರಾಮದ ವಿದ್ಯಾರ್ಥಿಗಳು ಸಂಜೆ 6 ಗಂಟೆ ವರೆಗೆ ಶಾಲಾ ಆವರಣದಲ್ಲಿ ಕಳೆಯುವಂತಹ ಪರಿಸ್ಥಿತಿ ಬಂದಿದೆ. ಕೆಲ ಶ್ರೀಮಂತ ವಿದ್ಯಾರ್ಥಿಗಳು ಆಟೋ, ಜೀಪ್‌ಗ್ಳಿಗೆ ಹಣ ಕೊಟ್ಟು ಹೋದರೇ, ಬಡ ವಿದ್ಯಾರ್ಥಿಗಳು ಮಾತ್ರ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಾರಿಗೆ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡದೇ ನಿತ್ಯ ಬೆಳಗ್ಗೆ ಸಮಯಕ್ಕೆ ಸರಿಯಾಗಿ 9 ಗಂಟೆಗೆ ಎರಡು ಬಸ್‌ ಹಾಗೂ ಸಂಜೆ 4:30ರ ನಂತರ ಎರಡು ಬಸ್‌, ಇದರ ಜೊತೆಯಲ್ಲಿ ನರಿಬೋಳ, ಗುಡೂರ ಕಡೆ ತೆರಳುವ ಬಸ್‌ 4:15ರ ಬದಲು 4:30ಕ್ಕೆ ಬಿಡಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ ಬಸ್‌ ಘಟಕದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘದ ತಾಲೂಕು ಅಧ್ಯಕ್ಷ ನಿಂಗಣ್ಣ ರದ್ದೇವಾಡಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next