Advertisement

ಜೆಟ್‌ ಏರ್‌ವೇಸ್‌ ಪ್ರಯಾಣಿಕರಿಗೆ ನರಕ ದರ್ಶನ

06:00 AM Sep 21, 2018 | Team Udayavani |

ಮುಂಬಯಿ/ಹೊಸದಿಲ್ಲಿ: ಮುಂಬಯಿಯಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ ಜೆಟ್‌ ಏರ್‌ವೇಸ್‌ಗೆ ಸೇರಿದ ವಿಮಾನವೊಂದರಲ್ಲಿದ್ದ 171 ಪ್ರಯಾಣಿಕರು ವಿಮಾನದೊಳಗೆ ಉಂಟಾದ ವಾಯು ಒತ್ತಡ ಹೆಚ್ಚಳದಿಂದಾಗಿ ಅಸ್ವಸ್ಥರಾಗಿದ್ದಲ್ಲದೆ, ಕೆಲವರ ಮೂಗು ಹಾಗೂ ಕಿವಿಯಿಂದ ರಕ್ತಸ್ರಾವವಾದ ಘಟನೆ ಗುರುವಾರ ನಡೆದಿದೆ.  

Advertisement

ಪ್ರಯಾಣ ಆರಂಭಿಸುವ ಮುನ್ನ ಪೈಲಟ್‌ಗಳು ಕ್ಯಾಬಿನ್‌ ಒತ್ತಡ ನಿರ್ವಹಣಾ ವ್ಯವಸ್ಥೆಯನ್ನು (ಎಪಿಎಸ್‌) ಚಾಲನೆ ಗೊಳಿಸಬೇಕಿತ್ತು. ಆದರೆ, ಅದನ್ನು ಅವರು ಮರೆತಿದ್ದರಿಂದ ವಿಮಾನದೊಳಗೆ ವಾಯು ಒತ್ತಡ ಹೆಚ್ಚಾಗಿ ಅವಘಡ ಸಂಭವಿಸಿದೆ. ಇದರಿಂದಾಗಿ 23 ನಿಮಿಷಗಳ ಕಾಲ ಪ್ರಯಾಣಿಕರು ಯಾತನೆ ಅನುಭವಿಸು ವಂತಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣವನ್ನು ಮಧ್ಯದಲ್ಲೇ ಮೊಟಕುಗೊಳಿಸಿ ವಿಮಾನವನ್ನು ಮತ್ತೆ ಮುಂಬಯಿಗೆ ತಂದಿಳಿಸಿ, ಅಸ್ವಸ್ಥಗೊಂಡ ಪ್ರಯಾ ಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿವಿಯಿಂದ ರಕ್ತ ಸೋರಲ್ಪಟ್ಟ ಕೆಲವರಲ್ಲಿ ತಾತ್ಕಾಲಿಕ ಶ್ರವಣ ದೋಷ ಕಾಣಿಸಿಕೊಂಡಿದೆ. 

ಆಡಿಟ್‌ಗೆ ಸಚಿವರ ಆದೇಶ: ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು, ವೈಮಾನಿಕ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಮೂಲಕ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ, ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈಮಾನಿಕ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳು ಅಳವಡಿಸಿ ಕೊಂಡಿರುವ ಪ್ರಯಾಣಿಕರ ಸುರಕ್ಷಾ ವ್ಯವಸ್ಥೆಗಳ ಬಗ್ಗೆ ವರದಿ ನೀಡುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ (ಡಿಜಿಸಿಎ) ಸೂಚಿಸಿದ್ದಾರೆ. 

ಏನಿದು ವಾಯು ಒತ್ತಡ ವ್ಯವಸ್ಥೆ? 
ಪ್ರಯಾ ಣದ ವೇಳೆ ವಿಮಾನದೊಳಗೆ ಉಂಟಾಗುವ ವಾಯು ಒತ್ತಡ ನಿವಾರಿಸಲು, ಎಪಿಎಸ್‌ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ಇದರ ನಿಯಂತ್ರಣ ಪೈಲಟ್‌ಗಳ ಕ್ಯಾಬಿನ್‌ನಲ್ಲಿರುತ್ತದೆ. ಹಾರುತ್ತಿರುವ ವಿಮಾನದೊಳಗಿನ ಒತ್ತಡಕ್ಕನುಗುಣವಾಗಿ ಹೊರಗಿನ ವಾಯು ಒಳಕ್ಕೆ ಹಾಗೂ ಒಳಗಿನ ವಾಯು ಹೊರಕ್ಕೆ ನಿಯಮಿತ ರೀತಿಯಲ್ಲಿ ಸಂಚರಿಸುವಂತೆ ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ.

121 ಬಲಿ ಪಡೆದಿದ್ದ ಮರೆಗುಳಿತನ
ವಿಮಾನದ ಒತ್ತಡ ನಿರ್ವಹಣಾ ವ್ಯವಸ್ಥೆ ಆರಂಭಿಸಲು ಮರೆತ ಕಾರಣಕ್ಕೆ 2015ರ ಎ. 14ರಂದು ಗ್ರೀಸ್‌ನ ಹೆಲಿಯೋಸ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಪತನಗೊಂಡು, ಅದರಲ್ಲಿನ ಎಲ್ಲಾ 121 ಪ್ರಯಾಣಿಕರು ಅಸುನೀಗಿದ್ದರು. ಪೈಲಟ್‌ಗಳ ಮರೆಗುಳಿತನ ಎಂಥ ದುರಂತಕ್ಕೀಡು ಮಾಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next