ದೋಟಿಹಾಳ: ಇಲ್ಲಿಗೆ ಸಮೀಪದ ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬದ ತಂತಿಗಳು ಮನೆಗಳ ಮೇಲೆ ಹಾಯ್ದು ಹೋಗಿದ್ದು, ವರ್ಷಗಳಿಂದ ಗ್ರಾಮಸ್ಥರು ನಿತ್ಯ ಮನೆಯಲ್ಲಿ ಅಪಾಯ ಮತ್ತು ಮಳೆ ಬಂದಾಗ ವಿದ್ಯುತ್ ಸ್ಪರ್ಷ ಆಗುವುದೆಂಬ ಭಯದ ನಡುವೆ ಜೀವನ ಸಾಗಿಸುತ್ತಿದ್ದರು.
ಇದರ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡಿದರು ಹಾಗೂ ಇದರ ಬಗ್ಗೆ ಕುಷ್ಟಗಿಯ ಜೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳಿಗೆ 2-3 ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ತಾವೇ ತಂತಿಗಳಿಗೆ ಪ್ಲಾಸ್ಟಿಕ್ ಪೈಪ್ ಅಥವಾ ಕಟ್ಟಿಗೆಗಳಿಂದ ರಕ್ಷಣೆ ಮಾಡಿಕೊಂಡಿದ್ದೇವೆ. ಯಾವು ಎಂದು ಗ್ರಾಮದ ಮಂಗಳಪ್ಪ ವಾಲಿಕಾರ, ಚಂದನಗೌಡ ಪೋಲಿಸ್ ಪಾಟೀಲ್ ಸೇರಿದಂತೆ ಇತರರು ಗ್ರಾಮಕ್ಕೆ ಭೇಟಿ ನೀಡಿದ ಉದಯವಾಣಿ ಪ್ರತಿನಿಧಿಗೆ ತಮ್ಮ ಸಮಸ್ಯೆಯನ್ನು ವಿವರಿಸಿದ್ದರು.
ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸರ‍್ಮರ್(ವಿದ್ಯುತ್ ಪರಿವರ್ತಕ) ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಜೆಸ್ಕಾಂ ಇಲಾಖೆಗೆ 2-3 ಬಾರಿ ಗ್ರಾಪಂನವರು ಪತ್ರಗಳನ್ನು ಯಾವುದೇ ಪ್ರಯೋಜನವಾಗಿರಲಿಲ್ಲ.
ಇದರ ಬಗ್ಗೆ ಅ:24ರಂದು ‘ಉದಯವಾಣಿ’ ವೆಬ್‌ನಲ್ಲಿ ಮತ್ತು ಅ:23ರಂದು ‘ಉದಯವಾಣಿ’ ಪತ್ರಿಕೆಯಲ್ಲಿ “ಮನೆ ಮಾಳಿಗೆಗೆ ತಾಗ್ತಿದೆ ವಿದ್ಯುತ್ ತಂತಿ!” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಮೇಲೆ ಕುಷ್ಟಗಿ ಜಿಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಮತ್ತು ತಂತಿಗಳ ಸ್ಥಳಾಂತರಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದುಕೊಂಡು ಮಂಗಳವಾರ ಮನೆಯ ಮಾಳಿಗೆ ಮೇಲೆ ಹಾದುಹೋದ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಿದ್ದರು. ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ನಮ್ಮ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿ ಇದಕ್ಕೆ ಪರಿಹಾರ ನೀಡಲು ಸಹಕರಿಸಿದ ಉದಯವಾಣಿ ಪತ್ರಿಕೆಗೆ ಮತ್ತು ಸಮಸ್ಯೆಗೆ ಸ್ಪಂದನೆ ನೀಡಿ ಕಂಬ ಮತ್ತು ತಂತಿಗಳನ್ನು ಸ್ಥಳಾಂತರಿಸಿದ ಜಿಸ್ಕಾಂ ಅಧಿಕಾರಿಗಳಿಗೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದರು.
ಕಡೇಕೊಪ್ಪ ಗ್ರಾಮದಲ್ಲಿ ಮನೆಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ಕಂಬದ ತಂತಿಗಳು ಸರಿಪಡಿಸಲು ಕ್ರೀಯಾ ಯೋಜನೆಯನ್ನು ಸಿದ್ದಪಡಿಸಿ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡು ಮಂಗಳವಾರ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಸ್ಥಳಾಂತರಿಸಿದ್ದೇವೆ.
– ದವಲಸಾಬ್ ನಧಾಫ್. ಎಇಇ ಕುಷ್ಟಗಿ.
ಇದನ್ನೂ ಓದಿ : ಮಂತ್ರಿ ಮಾಡ್ತೀನಿ ಎಂದು ಹೇಳಿ ಮಾತು ತಪ್ಪಿದ್ದೀರಿ: ಸ್ವಪಕ್ಷದ ವಿರುದ್ಧ ಆರ್.ಶಂಕರ್ ಆಕ್ರೋಶ