Advertisement

ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಗಾಗಿ ಶೆಯುಲಿ, ಜೆರೆಮಿ ಸ್ಪರ್ಧೆ

11:37 PM Aug 24, 2022 | Team Udayavani |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ಗೆದ್ದ ಲಿಫ್ಟರ್‌ಗಳಾದ ಜೆರೆಮಿ ಲಾಲ್ರಿನುಂಗ ಮತ್ತು ಅಚಿಂತಾ ಶೆಯುಲಿ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ನಡೆಯುವ ಅರ್ಹತಾ ಸ್ಪರ್ಧೆಯಲ್ಲಿ 73 ಕೆ.ಜಿ. ವಿಭಾಗದ ಏಕೈಕ ಸ್ಥಾನಕ್ಕಾಗಿ ಪರಸ್ಪರ ಕಾದಾಡಬೇಕಾಗಿದೆ.

Advertisement

2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇಂಟರ್‌ನ್ಯಾಶನಲ್‌ ವೇಟ್‌ಲಿಫ್ಟಿಂಗ್‌ ಫೆಡರೇಶನ್‌ (ಐಡಬ್ಲ್ಯುಎಫ್) 67 ಕೆ.ಜಿ. ವಿಭಾಗವನ್ನು ತೆಗೆದುಹಾಕಿದೆ. ಹೀಗಾಗಿ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ 67 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದ ಜೆರೆಮಿ ಲಾಲ್ರಿನುಂಗ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು 73 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

73 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಅಚಿಂತಾ ಶೆಯುಲಿ ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರೀಯ ದಾಖಲೆ ಹೊಂದಿರುವ ಅವರು ಈ ವಿಭಾಗದಲ್ಲಿ ಹಾಲಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಕೂಡ ಆಗಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನ 73 ಕೆ.ಜಿ. ವಿಭಾಗದಲ್ಲಿ ಭಾರತ ಕೇವಲ ಓರ್ವ ಲಿಫ್ಟರ್‌ ಸ್ಪರ್ಧಿಸಬೇಕಾಗಿರುವುದರಿಂದ ಆ ಸ್ಥಾನಕ್ಕಾಗಿ ಇದೀಗ ಜೆರೆಮಿ ಮತ್ತು ಶೆಯುಲಿ ಪರಸ್ಪರ ಕಾದಾಡಬೇಕಾಗಿದೆ. ನಾನೀಗ ನನ್ನ ದೇಹತೂಕವನ್ನು 73 ಕೆ.ಜಿ.ಗೆ ಏರಿಸಬೇಕಾಗಿದೆ. ನನ್ನ ನೈಜ ತೂಕ 65 ಕೆ.ಜಿ. ದೇಹತೂಕವನ್ನು ಅಷ್ಟರಮಟ್ಟಿಗೆ ಏರಿಸುವುದು ಕಠಿನ ಕೆಲಸ ಎಂದು ಜೆರೆಮಿ ಹೇಳಿದ್ದಾರೆ.

ಅವರೀಗ ಅಮೆರಿಕದ ಸೈಂಟ್‌ ಲೂಯಿಸ್‌ನಲ್ಲಿ ಮೂರುವರೆ ವಾರಗಳ ಕಾಲ ಶಕ್ತಿ ಮತ್ತು ಅಭ್ಯಾಸ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Advertisement

ಜೆರೆಮಿ ದೇಹತೂಕವನ್ನು ಏರಿಸಿ ಕೊಂಡಿ ರುವುದು ಇದೇ ಮೊದಲಲ್ಲ. 19 ವರ್ಷದ ಜೆರೆಮಿ 2018ರಲ್ಲಿ ಬ್ಯೂನಸ್‌ ಐರಿಸ್‌ನಲ್ಲಿ ನಡೆದ ಯೂತ್‌ ಒಲಿಂಪಿಕ್ಸ್‌ನಲ್ಲಿ 62 ಕೆ.ಜಿ. ವಿಭಾಗದಲ್ಲಿ ಸ್ಪರ್ದಿಸಿ ಚಿನ್ನ ಗೆದ್ದಿದ್ದರು. ಅನಂತರ ಅವರು ಐಡಬ್ಲ್ಯುಎಫ್ ಪರಿಚಯಿಸಿದ ಹೊಸ ಒಲಿಂಪಿಕ್‌ ತೂಕ ವಿಭಾಗಗಳನ್ನು ಅನುಸರಿಸಲು 67 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೂ ಕಳೆದ ಎರಡು ವರ್ಷಗಳಲ್ಲಿ ತೂಕ ಹೆಚ್ಚಿಸಲು ಕಷ್ಟಪಡುತ್ತಿದ್ದೇನೆ ಎಂದು ಮಿಜೋರಾಂನ ಲಿಫ್ಟರ್‌ ಜೆರೆಮಿ ಒಪ್ಪಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next